ತುರ್ತು ಪರಿಸ್ಥಿತಿ ಸಂವಿಧಾನದ ಮೇಲಿನ ನೇರ ದಾಳಿ: 1975ರ ಕರಾಳ ಅಧ್ಯಾಯ ಸ್ಮರಿಸಿದ ಪ್ರಧಾನಿ ಮೋದಿ..!
ತುರ್ತು ಪರಿಸ್ಥಿತಿ ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ಆ ಸಂದರ್ಭದಲ್ಲಿ ಸಂವಿಧಾನದ ಮೌಲ್ಯಗಳನ್ನು ಉಳಿಸಲು ಹೋರಾಡಿದ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ.

ನವದೆಹಲಿ: 1975ರಲ್ಲಿ ದೇಶದಲ್ಲಿ ಜಾರಿಗೊಳಿಸಲಾದ ತುರ್ತು ಪರಿಸ್ಥಿತಿ (Emergency) ಭಾರತದ ಸಂವಿಧಾನದ ಮೇಲಿನ ನೇರ ದಾಳಿಯಾಗಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ.
ಜೂನ್ 25ರ ದೇಶದ ಕರಾಳ ಇತಿಹಾಸದ ನೆನಪಿಗಾಗಿ ಆಚರಿಸಲಾಗುತ್ತಿರುವ 'ಸಂವಿಧಾನ ಹತ್ಯಾ ದಿವಸ್' ಅಂಗವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಹೋರಾಡಿದ ಪ್ರತಿಯೊಬ್ಬರಿಗೂ ಗೌರವ ನಮನ ಸಲ್ಲಿಸಿದ್ದಾರೆ.
ನಾಗರಿಕರ ಮೂಲಭೂತ ಹಕ್ಕುಗಳ ಅಮಾನತು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧ, ರಾಜಕೀಯ ನಾಯಕರು, ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರ ಬಂಧನ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲಿನ ದಾಳಿಯನ್ನು ಸ್ಮರಿಸಿದ್ದಾರೆ.
ತುರ್ತು ಪರಿಸ್ಥಿತಿ ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ಆ ಸಂದರ್ಭದಲ್ಲಿ ಸಂವಿಧಾನದ ಮೌಲ್ಯಗಳನ್ನು ಉಳಿಸಲು ಹೋರಾಡಿದ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯು ನಮ್ಮ ಸಂವಿಧಾನದ ಮೇಲಿನ ನೇರ ದಾಳಿಯಾಗಿತ್ತು. ನಾಗರಿಕ ಸ್ವಾತಂತ್ರ್ಯಗಳನ್ನು ಅಮಾನತುಗೊಳಿಸಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗಿತ್ತು. ರಾಜಕೀಯ ನಾಯಕರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸಂಸ್ಥೆಗಳ ಮೇಲೂ ದಾಳಿ ನಡೆಸಲಾಗಿತ್ತು” ಎಂದು ತಿಳಿಸಿದ್ದಾರೆ.
ಇದೇ ವೇಳೆ ಭಾರತದ 140 ಕೋಟಿ ಜನರ ಆಶಯಗಳು, ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪ್ರತಿಬಿಂಬಿಸುವುದು ಸಂವಿಧಾನ ಎಂದು ಹೇಳಿರುವ ಪ್ರಧಾನಿ, “ನಾವು ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ನಮ್ಮ ಸಾಮೂಹಿಕ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸುತ್ತೇವೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ಆಧಾರದ ಮೇಲೆ ಭಾರತವನ್ನು ಮತ್ತಷ್ಟು ಬಲಪಡಿಸುತ್ತೇವೆ” ಎಂದು ಹೇಳಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ “ಸಂವಿಧಾನ ಹತ್ಯಾ ದಿವಸ್ ಭಾರತೀಯ ಪ್ರಜಾಪ್ರಭುತ್ವವನ್ನು ಹೇಗೆ ಕ್ರೂರವಾಗಿ ಹತ್ತಿಕ್ಕಲಾಯಿತು ಎಂಬುದನ್ನು ನೆನಪಿಸುತ್ತದೆ. ಇದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಗೆ ಸದಾ ಬದ್ಧರಾಗಿರಲು ಪ್ರೇರಣೆ ನೀಡುತ್ತದೆ” ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಜೂನ್ 25, 1975ರಿಂದ ಮಾರ್ಚ್ 21, 1977ರವರೆಗೆ ಸಂವಿಧಾನದ 352ನೇ ವಿಧಿಯಡಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ಕೇಂದ್ರ ಸರ್ಕಾರಕ್ಕೆ ವ್ಯಾಪಕ ಅಧಿಕಾರಗಳು ದೊರೆತಿದ್ದವು. ನಾಗರಿಕ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಭದ್ರತೆಗಳನ್ನು ಅಮಾನತುಗೊಳಿಸಲಾಗಿತ್ತು. ಪತ್ರಿಕಾ ಸ್ವಾತಂತ್ರ್ಯದ ಮೇಲೂ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿತ್ತು.
2025ರಿಂದ ಕೇಂದ್ರ ಸರ್ಕಾರ ಜೂನ್ 25 ಅನ್ನು ‘ಸಂವಿಧಾನ ಹತ್ಯಾ ದಿವಸ್’ (Samvidhan Hatya Diwas) ಎಂದು ಆಚರಿಸುತ್ತಿದೆ. ಈ ಕುರಿತು ಹೊರಡಿಸಲಾದ ಅಧಿಕೃತ ಅಧಿಸೂಚನೆಯಲ್ಲಿ, ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ದೇಶದ ಜನರು ಅನೇಕ ದೌರ್ಜನ್ಯಗಳನ್ನು ಎದುರಿಸಿದ್ದರು ಎಂದು ಉಲ್ಲೇಖಿಸಲಾಗಿದೆ.
ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸಂಸತ್ತು ಹಲವು ಸಂವಿಧಾನ ತಿದ್ದುಪಡಿಗಳನ್ನು ಅಂಗೀಕರಿಸಿತ್ತು. ನ್ಯಾಯಾಂಗದ ಪರಿಶೀಲನಾ ಅಧಿಕಾರವನ್ನು ಸೀಮಿತಗೊಳಿಸುವ ಕ್ರಮಗಳೂ ಜಾರಿಯಾಗಿದ್ದವು. ಇದೇ ಅವಧಿಯಲ್ಲಿ ಬಲವಂತದ ಕುಟುಂಬ ನಿಯಂತ್ರಣ (Forced Sterilisation) ಅಭಿಯಾನವೂ ತೀವ್ರ ವಿವಾದಕ್ಕೆ ಕಾರಣವಾಗಿತ್ತು.
1977ರ ಲೋಕಸಭೆ ಚುನಾವಣೆಯ ಬಳಿಕ ರಾಜಕೀಯ ಬದಲಾವಣೆ ಸಂಭವಿಸಿ, ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಮಾರ್ಚ್ 21, 1977ರಂದು ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



