Bihar Horror: ಯಜಮಾನನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ; ಗುಪ್ತಾಂಗದಲ್ಲಿ ಜೀವಂತ ಬುಲೆಟ್, ಕಲ್ಲು, ಮರದ ತುಂಡು ಪತ್ತೆ!
ದುಷ್ಕರ್ಮಿಗಳು ಮನೆಯ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದರು. ಆಕೆ ಕಿರುಚಲು ಯತ್ನಿಸಿದಾಗ, ಬ್ಲೇಡ್‌ನಿಂದ ಎದೆ ಮತ್ತು ತೊಡೆ ಭಾಗಗಳಲ್ಲಿ ಗಾಯಗೊಳಿಸಿದರು ಎನ್ನಲಾಗಿದೆ.

ಬೇಗುಸರಾಯಿ: ಮಹಿಳೆಯ ಮೇಲೆ ಅಮಾನುಷ ಸಾಮೂಹಿಕ ಅತ್ಯಾಚಾರವೆಸಗಲಾಗಿದ್ದು, ಸಂತ್ರಸ್ಥೆಯ ಗುಪ್ತಾಂಗದಲ್ಲಿ ಜೀವಂತ ಗುಂಡು, ಕಲ್ಲು ಹಾಗೂ ಮರದ ತುಂಡು ಪತ್ತೆಯಾಗಿದೆ.
ಬಿಹಾರದ ಬೇಗುಸರಾಯಿಯಲ್ಲಿ ಈ ಘಟನೆ ನಡೆದಿದ್ದು, ಐವರು ದುಷ್ಕರ್ಮಿಗಳ ತಂಡವೊಂದು ಮನೆಗೆ ನುಗ್ಗಿ, ಮನೆಯ ಯಜಮಾನನನ್ನು ಕೊಠಡಿಯಲ್ಲಿ ಬಂಧಿಸಿ, ಆತನ ಪತ್ನಿಯ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣ ಬಯಲಿಗೆ ತಂದ ಹೊಟ್ಟೆ ನೋವು
ಈ ಘಟನೆ ಜೂನ್ 11ರಂದು ಬೇಗುಸರಾಯಿಯ ಚಕಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಂತ್ರಸ್ಥ ಮಹಿಳೆ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಾಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಆಕೆಯ ಖಾಸಗಿ ಅಂಗಗಳಿಂದ ಜೀವಂತ ಗುಂಡು, ಕಲ್ಲು ಹಾಗೂ ಮರದ ತುಂಡನ್ನು ಹೊರತೆಗೆದಿದ್ದು, ಆಕೆ ಅನುಭವಿಸಿದ ಕ್ರೌರ್ಯದ ತೀವ್ರತೆಯನ್ನು ಬಯಲಿಗೆಳೆದಿದೆ.
ಸಂತ್ರಸ್ಥೆಯ ಹೇಳಿಕೆ
ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ರಾತ್ರಿ ಸುಮಾರು 11.30ರ ವೇಳೆಗೆ ಆಕೆ ಶೌಚಾಲಯಕ್ಕೆ ತೆರಳಿದ್ದಾಗ ಐವರು ದುಷ್ಕರ್ಮಿಗಳು ಬಲವಂತವಾಗಿ ಮನೆಗೆ ನುಗ್ಗಿ, ಆಕೆಯ ಪತಿಯನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿದರು. ಬಳಿಕ ಆಕೆ ಹೊರಬಂದ ತಕ್ಷಣ ಬಾಯಿ ಮುಚ್ಚಿ ಆಕೆಯನ್ನು ಹಿಡಿದುಕೊಂಡರು. ದುಷ್ಕರ್ಮಿಗಳು ಮನೆಯ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದರು. ಆಕೆ ಕಿರುಚಲು ಯತ್ನಿಸಿದಾಗ, ಬ್ಲೇಡ್‌ನಿಂದ ಎದೆ ಮತ್ತು ತೊಡೆ ಭಾಗಗಳಲ್ಲಿ ಗಾಯಗೊಳಿಸಿದರು ಎನ್ನಲಾಗಿದೆ.
"ನಾನು ನನ್ನ ಕಿರಿಯ ನಾದಿನಿಗೆ ಕರೆ ಮಾಡಿದೆ. ಆಕೆ ಬಂದು ನನ್ನ ಪತಿಯನ್ನು ಹೊರಗೆ ಬಿಡಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ನಮ್ಮನ್ನು ಆಸ್ಪತ್ರೆಗೆ ಹೋಗುವಂತೆ ತಿಳಿಸಲಾಯಿತು. ಮೊದಲು ಬರೌನಿ ಆಸ್ಪತ್ರೆಗೆ ತೆರಳಿದೆವು. ಅಲ್ಲಿಂದ ಸದರ್ ಆಸ್ಪತ್ರೆಗೆ ಕಳುಹಿಸಲಾಯಿತು. ಚಿಕಿತ್ಸೆ ಪಡೆದರೂ ಖಾಸಗಿ ಅಂಗಗಳಲ್ಲಿ ನಿರಂತರ ನೋವು ಇತ್ತು. ವೈದ್ಯರು ಅದು ಅಪರಾಧದ ವೇಳೆ ಉಂಟಾದ ಗಾಯಗಳಿಂದಾಗಿರುವ ನೋವು ಎಂದು ತಿಳಿಸಿದರು.
ಮನೆಗೆ ಹಿಂದಿರುಗಿದ ನಂತರವೂ ನೋವು ಹೆಚ್ಚಾಗಿದ್ದರಿಂದ ಮತ್ತೆ ಸದರ್ ಆಸ್ಪತ್ರೆಗೆ ಹೋದೆವು. ಆಗ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಜೀವಂತ ಗುಂಡು, ಕಲ್ಲು ಮತ್ತು ಮರದ ತುಂಡನ್ನು ಹೊರತೆಗೆದರು. ಈಗಲೂ ನನಗೆ ನೋವು ಇದೆ," ಎಂದು ಸಂತ್ರಸ್ತೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ ಅತ್ಯಾಚಾರದ ವೇಳೆ ತಾನು ಪ್ರಜ್ಞೆ ತಪ್ಪಿದ್ದರಿಂದ ಈ ವಸ್ತುಗಳ ಬಗ್ಗೆ ಯಾವುದೇ ಅರಿವು ಇರಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ.
ಮೂರು ತಿಂಗಳ ಹಿಂದೆಯೂ ಮನೆಗೆ ನುಗ್ಗಿ ದಾಳಿ
ಸುಮಾರು ಮೂರು ತಿಂಗಳ ಹಿಂದೆ ಮೂವರು ದುಷ್ಕರ್ಮಿಗಳು ತನ್ನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು. ಆಗ ಅವರು ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಹಣ ಹಾಗೂ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ದೂರಿದ್ದಾರೆ.
ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಡಿಎಸ್‌ಪಿ ಆನಂದ್ ಕುಮಾರ್ ಪಾಂಡೆ, ಪ್ರಕರಣದ ವೈಜ್ಞಾನಿಕ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. "ಮಹಿಳೆಯ ಹೇಳಿಕೆ ಸತ್ಯಕ್ಕೆ ಸಮೀಪವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ. ಜೂನ್ 12ರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮನೆಗೆ ಹೋದಾಗಲೂ ಆಕೆಯ ಗುಪ್ತಾಂಗಗಳಲ್ಲಿ ಹಾನಿಯ ಲಕ್ಷಣಗಳು ಕಂಡುಬಂದಿವೆ. ಖಾಸಗಿ ಅಂಗಗಳಿಂದ ಒಂದು ಗುಂಡನ್ನು ಹೊರತೆಗೆದಿರುವುದು ದೃಢಪಟ್ಟಿದೆ" ಎಂದು ಅವರು ಹೇಳಿದರು.
ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ಭರವಸೆ ನೀಡಿದ್ದು, ಕರ್ತವ್ಯ ಲೋಪ ಎಸಗಿರುವುದು ಸಾಬೀತಾದರೆ ಸಂಬಂಧಿತ ಪೊಲೀಸ್ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



