ಇಂದಿರಾ ಗಾಂಧಿ ಈಗ ಬದುಕಿದ್ರೆ BJP ಬ್ಯಾನ್ ಮಾಡ್ತಿದ್ರು: ವಿವಾದದ ಕಿಡಿ ಹೊತ್ತಿಸಿದ ಅಶೋಕ್ ಗೆಹ್ಲೋಟ್; ಕೇಸರಿ ನಾಯಕರ ತಿರುಗೇಟು; Video
ಜೈಪುರದಲ್ಲಿ ನಿನ್ನೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಗೆಹ್ಲೋಟ್, ದೇಶದಲ್ಲಿನ ಇಂದಿನ ವಾತಾವರಣ ತಮ್ಮ 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಕಂಡಿರದ "ಅತ್ಯಂತ ಅಪಾಯಕಾರಿ"ಯಾಗಿದೆ ಎಂದು ಅವರು ಹೇಳಿದ್ದಾರೆ.

ಜೈಪುರ: ಇಂದಿರಾ ಗಾಂಧಿಯಂತಹ ನಾಯಕಿ ಇಂದು ಜೀವಂತವಾಗಿ ಇದ್ದಿದ್ದರೆ ಬಿಜೆಪಿಯನ್ನು ಬ್ಯಾನ್ ಮಾಡ್ತಿದ್ರು ಎಂದು ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕೋಮುವಾದಿ ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡಿದ್ದು, ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಇಂದು ಬದುಕಿದ್ದರೆ ಕೇಸರಿ ಪಕ್ಷವನ್ನು ನಿಷೇಧಿಸುತ್ತಿದ್ದರು ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಹಿಂದೂಗಳ ಬಗ್ಗೆ ದ್ವೇಷ ಸಾಧಿಸುತ್ತಿದೆ ಮತ್ತು ಮುಸ್ಲಿಮರ ಪರವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದೆ.
ಜೈಪುರದಲ್ಲಿ ನಿನ್ನೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಗೆಹ್ಲೋಟ್, ದೇಶದಲ್ಲಿನ ಇಂದಿನ ವಾತಾವರಣ ತಮ್ಮ 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಕಂಡಿರದ "ಅತ್ಯಂತ ಅಪಾಯಕಾರಿ"ಯಾಗಿದೆ. ಇಂದಿರಾ ಗಾಂಧಿಯಂತಹ ನಾಯಕರು ಇಂದು ಬದುಕಿದ್ದರೆ, ಬಿಜೆಪಿಯಂತಹ ಪಕ್ಷವನ್ನು ನಿಷೇಧಿಸುತ್ತಿದ್ದರು. ದೇಶ ಇನ್ನೂ ಎಚ್ಚರಗೊಳ್ಳದಿದ್ದರೆ, ಮುಂದೆ ಅದರ ಪರಿಣಾಮಗಳನ್ನು ಜನರು ಅನುಭವಿಸುತ್ತಾರ ಎಂದು ಅವರು ಹೇಳಿದ್ದಾರೆ.
ಇಂದು ಅಧಿಕಾರದಲ್ಲಿರುವವರು ಉದ್ದೇಶಪೂರ್ವಕವಾಗಿ ಧರ್ಮವನ್ನು ವಿಭಜಿಸುತ್ತಿದ್ದಾರೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದು, ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಬಿಜೆಪಿ ಏಕೆ ವಿಫಲವಾಗಿದೆ ಎಂದು ಪ್ರಶ್ನಿಸಿದ್ದಾರೆ.
ದೇಶದ ಜನರಿಗೆ ತೋರಿಸಲು ಐದು ಸ್ಥಾನಗಳನ್ನು ನೀಡಬಹುದಿತ್ತು. ಆದರೆ 'ನಾವು ಸಂಪೂರ್ಣವಾಗಿ ಹಿಂದುತ್ವ ಪಕ್ಷ' ಎಂದು ನೀವು ಬಿಂಬಿಸಲು ಬಯಸುತ್ತೀರಿ. ಹಿಂದುತ್ವ ಬೆಂಬಲಿಗರನ್ನು ಪ್ರಚೋದಿಸಿ ಆಳುವುದೇ ಅವರ ಚಿಂತನೆಯಾಗಿದೆ. ನೀವು ಕೇವಲ ಹಿಂದುತ್ವ ಅಜೆಂಡಾದ ಮೇಲೆ ಪಕ್ಷವನ್ನು ನಡೆಸುತ್ತೀರಾ? ಹಿಂದೂಗಳ ಹೆಸರಿನಲ್ಲಿ ಮಾತ್ರ ರಾಜಕೀಯ ಮಾಡಲು ಬಯಸುತ್ತೀರಾ? ಎಂದು ಕೇಳಿದರು.
ಕಾಂಗ್ರೆಸ್ ಹಿಂದೂಗಳ ದ್ವೇಷಿ: ಬಿಜೆಪಿ ತಿರುಗೇಟು
ಗೆಹ್ಲೋಟ್ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಇದು ಕಾಂಗ್ರೆಸ್ ಹಿಂದೂಗಳು ಮತ್ತು ಹಿಂದುತ್ವದ ಬಗ್ಗೆ ಹೊಂದಿರುವ ದ್ವೇಷವನ್ನು ತೋರಿಸುತ್ತದೆ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ."ಕಾಂಗ್ರೆಸ್ ಪಕ್ಷ ಹಿಂದೂಗಳು ಮತ್ತು ಹಿಂದುತ್ವವನ್ನು ದ್ವೇಷಿಸುತ್ತದೆ. ಅದಕ್ಕೆ ಮತ್ತೊಂದು ಪುರಾವೆ ಅಶೋಕ್ ಗೆಹ್ಲೋಟ್ ಅವರ ಹೇಳಿಕೆಯ ರೂಪದಲ್ಲಿ ಹೊರಬಂದಿದೆ. ಸುಪ್ರೀಂ ಕೋರ್ಟ್ ಪ್ರಕಾರ ಹಿಂದುತ್ವವು ಒಂದು ಜೀವನ ವಿಧಾನ. ಅವರು ಯಾಕೆ ಅದನ್ನು ನಿಷೇಧಿಸುತ್ತಾರೆ?" ಎಂದು ಅವರು ಕೇಳಿದ್ದಾರೆ.
ಗೆಹ್ಲೋಟ್ ಅವರ ಹೇಳಿಕೆಗಳು ಕಾಂಗ್ರೆಸ್ ನಾಯಕರ "ತುರ್ತು ಪರಿಸ್ಥಿತಿ ಮನಸ್ಥಿತಿ"ಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



