ದೇಶ

'ಯಾವುದೇ ಕಾರಣಕ್ಕೂ ದೀದಿ ಕೈ ಬಿಡಲ್ಲ': ಪ್ರಧಾನಿ ಮೋದಿ ಹೊಗಳಿಕೆ ನಂತರ ಮಮತಾ ಬ್ಯಾನರ್ಜಿ ಪರ ಶತ್ರುಘ್ನ ಸಿನ್ಹಾ ಬ್ಯಾಟಿಂಗ್!

ಶತ್ರುಘ್ನ ಸಿನ್ಹಾ ಅವರ ಮುಂದಿನ ನಡೆಯ ಬಗ್ಗೆ ಊಹಾಪೋಹಗಳು ಹೆಚ್ಚಾಗುತ್ತಿದ್ದಂತೆ, ನಟ-ರಾಜಕಾರಣಿ, ವರದಿಗಳನ್ನು ತಳ್ಳಿಹಾಕಿದ್ದಾರೆ.

'ಯಾವುದೇ ಕಾರಣಕ್ಕೂ ದೀದಿ ಕೈ ಬಿಡಲ್ಲ': ಪ್ರಧಾನಿ ಮೋದಿ ಹೊಗಳಿಕೆ ನಂತರ ಮಮತಾ ಬ್ಯಾನರ್ಜಿ ಪರ ಶತ್ರುಘ್ನ ಸಿನ್ಹಾ ಬ್ಯಾಟಿಂಗ್!
ಶತ್ರುಘ್ನ ಸಿನ್ಹಾ - ಮಮತಾ ಬ್ಯಾನರ್ಜಿ
Published On :

ನವದೆಹಲಿ: ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ತೃಣಮೂಲ ಕಾಂಗ್ರೆಸ್ (TMC) ಸಂಸದ ಶತ್ರುಘ್ನ ಸಿನ್ಹಾ, ನಂತರ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ. ಟಿಎಂಸಿಯೊಳಗಿನ ಬಂಡಾಯ ಬಣವನ್ನು ಸೇರುತ್ತಿದ್ದಾರೆ ಎಂದು ಸೂಚಿಸುವ ವರದಿಗಳನ್ನು ಅವರು ತಳ್ಳಿಹಾಕಿದರು.

ಲೋಕಸಭಾ ಸ್ಪೀಕರ್‌ಗೆ ಸಲ್ಲಿಸಿದ ಪತ್ರಕ್ಕೆ ಸಹಿ ಹಾಕಿದ ಟಿಎಂಸಿ ಬಂಡಾಯ ಬಣದ ಸಂಸದರಲ್ಲಿ ಶತ್ರುಘ್ನ ಸಿನ್ಹಾ ಕೂಡ ಒಬ್ಬರು ಎಂಬ ವರದಿಗಳ ಮಧ್ಯೆ, ಪ್ರಧಾನಿ ಮೋದಿ ಅವರು ಭಾರತದ ಪ್ರಧಾನಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಕ್ಕಾಗಿ ಅವರನ್ನು ಅಭಿನಂದಿಸುವ 'ಎಕ್ಸ್' ಪೋಸ್ಟ್ ಈ ಊಹಾಪೋಹಗಳಿಗೆ ನಾಂದಿ ಹಾಡಿತು.

'ನಿಜವಾದ ಕ್ರೀಡಾಪಟು ಮನೋಭಾವದಿಂದ, ನಮ್ಮ ಸ್ನೇಹಿತ ಮತ್ತು ಸಮಾಜ/ರಾಷ್ಟ್ರದ ಮಾರ್ಗದರ್ಶಕರಾದ ಗೌರವಾನ್ವಿತ ನರೇಂದ್ರ ಮೋದಿ ಅವರಿಗೆ ಪ್ರಧಾನಿಯಾಗಿ 12 ವರ್ಷಗಳನ್ನು ಪೂರೈಸಿದ್ದಕ್ಕೆ ಶುಭಾಶಯಗಳು. ನಿಮ್ಮ ದೀರ್ಘ, ಆರೋಗ್ಯಕರ ಮತ್ತು ಸಮೃದ್ಧ ಜೀವನವು ಮುಂದುವರಿಯಲಿ ಎಂದು ಹಾರೈಸುತ್ತೇನೆ. ಜೈ ಹಿಂದ್!' ಎಂದು ಸಿನ್ಹಾ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಕುತೂಹಲಕಾರಿಯಾಗಿ, ಅವರು ಪೋಸ್ಟ್‌ನಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಸಹ ಟ್ಯಾಗ್ ಮಾಡಿದ್ದಾರೆ.

ಶತ್ರುಘ್ನ ಸಿನ್ಹಾ ಅವರ ಮುಂದಿನ ನಡೆಯ ಬಗ್ಗೆ ಊಹಾಪೋಹಗಳು ಹೆಚ್ಚಾಗುತ್ತಿದ್ದಂತೆ, ನಟ-ರಾಜಕಾರಣಿ, ವರದಿಗಳನ್ನು ತಳ್ಳಿಹಾಕಿದ್ದಾರೆ. ಸಂಸದ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಬಂಡಾಯ ಬಣದಲ್ಲಿ ತಾವು ಇರುವ ಬಗೆಗಿನ ವರದಿಗಳನ್ನು ನಿರಾಕರಿಸಿದ್ದಾರೆ. 'ನನ್ನ ಬಗ್ಗೆ ತುಂಬಾ ಹೇಳಲಾಗಿದೆ. ಕೆಲವರು ನಾನು ಬಂಡಾಯ ಗುಂಪಿನ ಭಾಗ ಎಂದು ಹೇಳುತ್ತಿದ್ದಾರೆ. ಇದೆಲ್ಲವೂ ನಿಜವಲ್ಲ. ಎಂದಿಗೂ ಮಮತಾ ಬ್ಯಾನರ್ಜಿ ಅವರ ಕೈ ಬಿಡುವುದಿಲ್ಲ' ಎಂದು ಅಸನ್ಸೋಲ್ ಸಂಸದ ಸ್ಪಷ್ಟಪಡಿಸಿದರು.

ಕಷ್ಟದ ಸಮಯದಲ್ಲಿ ಮಮತಾ ಬ್ಯಾನರ್ಜಿ ನನ್ನೊಂದಿಗೆ ನಿಂತರು. ಕಠಿಣ ಸಮಯದಲ್ಲಿ ನಾನು ಅವರ ಜೊತೆಗೆ ನಿಲ್ಲುತ್ತೇನೆ. ಟಿಎಂಸಿ ಮುಖ್ಯಸ್ಥರ ಒತ್ತಾಯದ ಮೇರೆಗೆ ಅಸನ್ಸೋಲ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗಿ ಹೇಳಿದ ಸಿನ್ಹಾ, 'ದೀದಿಯನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ' ಎಂದು ಹೇಳಿದರು.

ಶತ್ರುಘ್ನ ಸಿನ್ಹಾ ತಮ್ಮ ರಾಜಕೀಯ ಜೀವನವನ್ನು ಬಿಜೆಪಿಯೊಂದಿಗೆ ಪ್ರಾರಂಭಿಸಿದರು. ಪ್ರಮುಖ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ ನಂತರ, ಅವರು 'ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ' ಪಕ್ಷವನ್ನು ತೊರೆದರು. ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಪಾಟ್ನಾ ಸಾಹಿಬ್‌ನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತರು.

2022ರಲ್ಲಿ, ಅವರು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಸೇರಿದರು ಮತ್ತು ಅಸನ್ಸೋಲ್ ಲೋಕಸಭಾ ಉಪಚುನಾವಣೆಯಲ್ಲಿ ಯಶಸ್ವಿಯಾಗಿ ಗೆದ್ದರು. ಅವರು 2024ರಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಅಸನ್ಸೋಲ್ ಸ್ಥಾನವನ್ನು ಉಳಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.