ದೇಶ

ಭಾರತದ ಅಡುಗೆ ಅನಿಲ ಬೆಲೆ ವಿಶ್ವದಲ್ಲೇ ಅಗ್ಗವಾಗಿದೆ: LPG ದರ ಏರಿಕೆ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 29 ಹೆಚ್ಚಿಸಿ, ದೆಹಲಿಯಲ್ಲಿ ಅದರ ಚಿಲ್ಲರೆ ದರವನ್ನು 913ರಿಂದ 942ಕ್ಕೆ ಏರಿಕೆಯಾಗಿದ್ದು ಸರ್ಕಾರ ಈ ಸ್ಪಷ್ಟನೆ ನೀಡಿದೆ.

ಭಾರತದ ಅಡುಗೆ ಅನಿಲ ಬೆಲೆ ವಿಶ್ವದಲ್ಲೇ ಅಗ್ಗವಾಗಿದೆ: LPG ದರ ಏರಿಕೆ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದ್ದರೂ, ಭಾರತದಲ್ಲಿ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ದರ ವಿಶ್ವದಲ್ಲಿ ಅತ್ಯಂತ ಕಡಿಮೆ ದರಗಳಲ್ಲೇ ಉಳಿದಿವೆ ಎಂದು ಕೇಂದ್ರ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ.

14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 29 ಹೆಚ್ಚಿಸಿ, ದೆಹಲಿಯಲ್ಲಿ ಅದರ ಚಿಲ್ಲರೆ ದರವನ್ನು 913ರಿಂದ 942ಕ್ಕೆ ಏರಿಕೆಯಾಗಿದ್ದು ಸರ್ಕಾರ ಈ ಸ್ಪಷ್ಟನೆ ನೀಡಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳು ಮೊದಲ ನಾಲ್ಕು ಸಿಲಿಂಡರ್‌ಗಳ ಮರುಪೂರೈಕೆಗೆ ಪ್ರತಿ ಸಿಲಿಂಡರ್‌ಗೆ 300 ರೂಪಾಯಿ ಸಬ್ಸಿಡಿ ಪಡೆಯುವುದರಿಂದ, ಅವರಿಗೆ ಪ್ರತಿ ಸಿಲಿಂಡರ್‌ನ ಪರಿಣಾಮಕಾರಿ ಬೆಲೆ 642 ರೂಪಾಯಿ ಆಗಿಯೇ ಮುಂದುವರಿಯಲಿದೆ.

ಈ ವರ್ಷದ ಮಾರ್ಚ್ 7ರಂದು ಸಿಲಿಂಡರ್‌ಗೆ 60 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇತ್ತೀಚಿನ 29 ಹೆಚ್ಚಳದೊಂದಿಗೆ ಈ ವರ್ಷ ಒಟ್ಟು ಏರಿಕೆ 89 ರೂಪಾಯಿಯಾಗಿದೆ.

ಸರ್ಕಾರದ ಪ್ರಕಾರ, ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಜಾಗತಿಕ ಪೂರೈಕೆ ವ್ಯತ್ಯಯಗಳಿಂದಾಗಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಒದಗಿಸುವ ವೆಚ್ಚ 1,600 ರೂಪಾಯಿಗೂ ಹೆಚ್ಚು ಏರಿಕೆಯಾಗಿದೆ.

ಭಾರತದ ಎಲ್‌ಪಿಜಿ ಆಮದು ದರಗಳು ಸೌದಿ ಅರಾಮ್ಕೋ ನಿಗದಿಪಡಿಸುವ ಸೌದಿ ಕಾನ್ಟ್ರಾಕ್ಟ್ ಪ್ರೈಸ್ (Saudi Contract Price - CP) ಗೆ ಸಂಬಂಧಿಸಿವೆ. ಫೆಬ್ರವರಿಯಿಂದ ಈ ಮಾನದಂಡದ ದರ ಸುಮಾರು 46 ಶೇಕಡಾ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಸರ್ಕಾರದ ಹೇಳಿಕೆಯಂತೆ, ಫೆಬ್ರವರಿಯಲ್ಲಿ ಟನ್‌ಗೆ ಸುಮಾರು 543 ಡಾಲರ್ ಇದ್ದ ಎಲ್‌ಪಿಜಿ ದರ, ಹಾರ್ಮುಜ್ ಜಲಸಂಧಿಯಲ್ಲಿನ ವ್ಯತ್ಯಯಗಳ ನಂತರ ಏಪ್ರಿಲ್‌ನಲ್ಲಿ ಟನ್‌ಗೆ 775 ಡಾಲರ್‌ಗೆ ಏರಿತು. ಜೂನ್ ವೇಳೆಗೆ ಅದು ಮತ್ತಷ್ಟು ಏರಿಕೆ ಕಂಡು ಟನ್‌ಗೆ 790 ಡಾಲರ್ ತಲುಪಿದೆ.

ಸರ್ಕಾರವು, ಭಾರತದಲ್ಲಿ ಅಡುಗೆ ಅನಿಲದ ಬೆಲೆಗಳು ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತಹ ನೆರೆಯ ರಾಷ್ಟ್ರಗಳಿಗಿಂತಲೂ ಕಡಿಮೆಯಿದ್ದು, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಕೆನಡಾದಂತಹ ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಗಣನೀಯವಾಗಿ ಕಡಿಮೆ ಎಂದು ಹೇಳಿದೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿದ್ದರೂ, ಗೃಹಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಪರಿಣಾಮಕಾರಿ ದರವನ್ನು ಸರ್ಕಾರ ನಿಯಂತ್ರಿಸುತ್ತಿದೆ. ಯಾವುದೇ ಕುಟುಂಬವು ಅಗತ್ಯವಿರುವಷ್ಟು ಸಿಲಿಂಡರ್‌ಗಳನ್ನು 942 ರೂಪಾಯಿ ದರದಲ್ಲಿ ಖರೀದಿಸಬಹುದು ಎಂದು ಹೇಳಿಕೆ ತಿಳಿಸಿದೆ.

ಉಜ್ವಲ ಯೋಜನೆ ಫಲಾನುಭವಿಗಳು ವರ್ಷಕ್ಕೆ ಮೊದಲ ನಾಲ್ಕು ಸಿಲಿಂಡರ್‌ಗಳಿಗೆ ಪ್ರತಿ ಸಿಲಿಂಡರ್‌ಗೆ 300 ರೂಪಾಯಿ ನೇರ ನಗದು ವರ್ಗಾವಣೆಯ (DBT) ಮೂಲಕ ಪಡೆಯುತ್ತಾರೆ. ಹೀಗಾಗಿ ಅವರಿಗೆ ಪ್ರತಿ ಸಿಲಿಂಡರ್‌ಗೆ 642 ರೂಪಾಯಿ ಮಾತ್ರ ವೆಚ್ಚವಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಉಜ್ವಲೇತರ ಗ್ರಾಹಕರೂ ಸಹ ಮಾರುಕಟ್ಟೆ ಆಧಾರಿತ ನಿಜವಾದ ವೆಚ್ಚಕ್ಕಿಂತ ಕಡಿಮೆ ದರದಲ್ಲೇ ಎಲ್‌ಪಿಜಿ ಪಡೆಯುತ್ತಿದ್ದಾರೆ. ಒಂದು ಗೃಹಬಳಕೆಯ ಸಿಲಿಂಡರ್‌ನ ಆಮದು-ಆಧಾರಿತ ವೆಚ್ಚ 1,600 ರೂಪಾಯಿಗಿಂತ ಹೆಚ್ಚು ಇದ್ದರೂ, ಗ್ರಾಹಕರು ಅದರ ಸಂಪೂರ್ಣ ಭಾರವನ್ನು ಹೊರುತ್ತಿಲ್ಲ ಎಂದು ಸರ್ಕಾರ ತಿಳಿಸಿದೆ.

ಇತ್ತೀಚಿನ ದರ ಪರಿಷ್ಕರಣೆಗೆ ಮುನ್ನ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟವಾಗುವ ಪ್ರತಿ ಸಿಲಿಂಡರ್‌ಗೆ ಸುಮಾರು 703 ರೂಪಾಯಿ ನಷ್ಟ ಅನುಭವಿಸುತ್ತಿದ್ದವು ಎಂದು ಅಂದಾಜಿಸಲಾಗಿದೆ.

ಸರ್ಕಾರದ ಪ್ರಕಾರ, ಗೃಹಬಳಕೆಯ ಎಲ್‌ಪಿಜಿ ಮಾರಾಟದಿಂದ ಉಂಟಾದ ಒಟ್ಟು ನಷ್ಟವು ಕಳೆದ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸುಮಾರು 60,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅದಕ್ಕಿಂತ ಹಿಂದಿನ ವರ್ಷ ಈ ಮೊತ್ತ 41,338 ಕೋಟಿ ರೂಪಾಯಿ ಆಗಿತ್ತು. ಈ ನಷ್ಟವನ್ನು ಭಾಗಶಃ ಭರಿಸಲು ಕೇಂದ್ರ ಸಚಿವ ಸಂಪುಟ 30,000 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ.

ಇದಲ್ಲದೆ, ಭಾರತದ ಎಲ್‌ಪಿಜಿ ಆಮದುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣ ಸಾಗುವ ಹಾರ್ಮುಜ್ ಜಲಸಂಧಿಯಲ್ಲಿ ವ್ಯತ್ಯಯ ಉಂಟಾದರೂ ದೇಶದಲ್ಲಿ ಎಲ್‌ಪಿಜಿ ಮತ್ತು ಪೆಟ್ರೋಲಿಯಂ ಪೂರೈಕೆಯನ್ನು ನಿರಂತರವಾಗಿ ಕಾಪಾಡಲಾಗಿದೆ ಎಂದು ಸರ್ಕಾರ ಹೇಳಿದೆ.

ದೇಶೀಯ ಉತ್ಪಾದನೆಯನ್ನು 60 ಶೇಕಡಾಕ್ಕಿಂತಲೂ ಅಧಿಕ ಹೆಚ್ಚಿಸಲಾಗಿದ್ದು, ಅಮೆರಿಕ, ಕೆನಡಾ ಮತ್ತು ಅಲ್ಜೀರಿಯಾ ಸೇರಿದಂತೆ ಹಲವು ದೇಶಗಳಿಂದ ಆಮದು ಮೂಲಗಳನ್ನು ವೈವಿಧ್ಯಗೊಳಿಸಲಾಗಿದೆ. ಸಬ್ಸಿಡಿ ಸಿಲಿಂಡರ್‌ಗಳ ದುರ್ಬಳಕೆ ಮತ್ತು ಪೂರೈಕೆ ವ್ಯತ್ಯಯ ತಡೆಯಲು ಹೆಚ್ಚುವರಿ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸುವ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ 3,113.50 ರೂಪಾಯಿಗೆ ಮಾರಾಟವಾಗುತ್ತಿದ್ದು, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಳಿಕ ಅದರ ಬೆಲೆ ಐದು ಬಾರಿ ಏರಿಕೆಯಾಗಿದೆ. ಇದಕ್ಕೆ ಹೋಲಿಸಿದರೆ ಗೃಹಬಳಕೆಯ ಗ್ರಾಹಕರು ಪರಿಷ್ಕೃತ ದರದ ಬಳಿಕವೂ ಪ್ರತಿ ಕೆಜಿಗೆ ಸುಮಾರು 66 ರೂಪಾಯಿ ಮಾತ್ರ ಪಾವತಿಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.