ಲಂಚ ನೀಡಲಿಲ್ಲ ಎಂದು ಮತ್ತೆ ಬಾಲಕಿಯ ಕಾಲು ಮುರಿದ ವೈದ್ಯರು: ತನಿಖೆಗೆ ಆದೇಶ
ಉತ್ತರ ಪ್ರದೇಶದ ಮುಜಾಫರನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಘಟನೆ ಬೆಳಕಿಗೆ ಬಂದಿದೆ.

ಮುಜಾಫರನಗರ: ಚಿಕಿತ್ಸೆ ಮಾಡಿದ ಬಳಿಕ ಹಣ ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ಬಾಲಕಿಯ ಮೂಳೆಯನ್ನು ಮತ್ತೆ ಮುರಿದಿರುವ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶದ ಮುಜಾಫರನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಘಟನೆ ಬೆಳಕಿಗೆ ಬಂದಿದೆ.
ಚಿಕಿತ್ಸೆಗಾಗಿ ದಾಖಲಾಗಿದ್ದ 14 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿಯ ಕುಟುಂಬದಿಂದ ಲಂಚದ ಹಣ ಸಿಗದ ಹಿನ್ನೆಲೆಯಲ್ಲಿ, ಆಕೆಯ ಈಗಾಗಲೇ ಮುರಿದಿದ್ದ ಕಾಲನ್ನು ವೈದ್ಯರೊಬ್ಬರು ಉದ್ದೇಶಪೂರ್ವಕವಾಗಿ ಮತ್ತೆ ಮುರಿದಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಮಾನಸಿಕ ಅಸ್ವಸ್ಥಳಾಗಿರುವ ಬಾಲಕಿಗೆ ಕಾಲು ಮುರಿದ ಹಿನ್ನೆಲೆಯಲ್ಲಿ ಆಕೆಯ ವಿಧವೆ ತಾಯಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಬಾಲಕಿಯ ತಾಯಿ ಚಿಕಿತ್ಸೆಗಾಗಿ ಕಷ್ಟಪಟ್ಟು ಸಂಪಾದಿಸಿದ 8,000 ಹಣವನ್ನು ನೀಡಿದ್ದರು, ಆದರೆ ವೈದ್ಯರು ಕೇಳಿದ್ದ ಉಳಿದ ಹಣವನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ.
ಚಿಕಿತ್ಸೆಗಾಗಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಂಬಂಧಿಸಿದ ವೈದ್ಯರು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಕೆಗೆ ಹಣ ನೀಡಲು ಸಾಧ್ಯವಿಲ್ಲ ಎಂದು ತಿಳಿದಾಗ ವೈದ್ಯರು ಕೋಪಗೊಂಡು ಚಿಕಿತ್ಸೆ ನೀಡುವ ವೇಳೆ ಬಾಲಕಿಯ ಗಾಯಗೊಂಡಿದ್ದ ಕಾಲನ್ನು ಬಲವಂತವಾಗಿ ತಿರುಗಿಸಿ, ಈಗಾಗಲೇ ಇದ್ದ ಮುರಿತವನ್ನು ಇನ್ನಷ್ಟು ಗಂಭೀರಗೊಳಿಸಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ. ಅಲ್ಲದೆ ಬಳಿಕ ನ್ಯಾಯಕ್ಕಾಗಿ ಬಾಲಕಿಯ ತಾಯಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ದೂರು ನೀಡಿದ್ದು, ಜಿಲ್ಲಾ ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಪ್ರಕರಣದ ಕುರಿತು ತನಿಖೆಗೆ ಆದೇಶ ನೀಡಿದ್ದಾರೆ.
ತನಿಖೆಯ ಭಾಗವಾಗಿ ದೂರುದಾರರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಂಬಂಧಿಸಿದ ವೈದ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಈ ಆರೋಪಗಳ ಕುರಿತು ತನಿಖೆ ನಡೆಯುತ್ತಿದ್ದು, ಇನ್ನೂ ಯಾವುದೇ ಅಧಿಕೃತ ತೀರ್ಮಾನ ಹೊರಬಂದಿಲ್ಲ. ಆರೋಪಗಳ ಸತ್ಯಾಸತ್ಯತೆ ಬಗ್ಗೆ ಅಧಿಕಾರಿಗಳು ಇನ್ನೂ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ತನಿಖೆಯ ನಂತರವೇ ಲಂಚದ ಬೇಡಿಕೆ, ವೈದ್ಯಕೀಯ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ಹಾನಿ ನಡೆದಿದೆಯೇ ಎಂಬುದು ಸ್ಪಷ್ಟವಾಗಲಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.
ವೈದ್ಯಕೀಯ ತಜ್ಞರ ಅಭಿಪ್ರಾಯದಂತೆ, ಇಂತಹ ಗಂಭೀರ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಯುವುದು ಅತ್ಯಗತ್ಯ. ಏಕೆಂದರೆ ಇದು ವೈದ್ಯಕೀಯ ನೈತಿಕತೆ ಹಾಗೂ ಕ್ರಿಮಿನಲ್ ಕಾನೂನು ಎರಡಕ್ಕೂ ಸಂಬಂಧಿಸಿದ ವಿಷಯವಾಗಿದೆ. ಸಿಎಂಒ ನೇತೃತ್ವದ ತನಿಖೆಯ ವರದಿಯ ಆಧಾರದ ಮೇಲೆ ಶಿಸ್ತು ಕ್ರಮ ಅಥವಾ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



