ದೇಶ

"ರಾಜಕೀಯ ಭಿನ್ನಾಭಿಪ್ರಾಯ ಇರಲಿ ಆದರೆ, ಭಾಷೆ ಸಭ್ಯವಾಗಿರಲಿ": ಪ್ರಹ್ಲಾದ್ ಜೋಶಿ ಪರ ಕಿರಣ್ ರಿಜಿಜು ಬ್ಯಾಟಿಂಗ್; ರಾಹುಲ್ ಗಾಂಧಿ ವಿರುದ್ಧ ಕಿಡಿ

ರಾಹುಲ್ ಗಾಂಧಿ ಎಲ್ಲ ರೀತಿಯ ಅಸಂಸದೀಯ ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸುತ್ತಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಚರ್ಚೆಗಳು ಸೌಜನ್ಯಯುತ ಮತ್ತು ಸಂಸ್ಕೃತ ಭಾಷೆಯಲ್ಲಿ ನಡೆಯಬೇಕು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳು ಇರಬಹುದು.

"ರಾಜಕೀಯ ಭಿನ್ನಾಭಿಪ್ರಾಯ ಇರಲಿ ಆದರೆ, ಭಾಷೆ ಸಭ್ಯವಾಗಿರಲಿ": ಪ್ರಹ್ಲಾದ್ ಜೋಶಿ ಪರ ಕಿರಣ್ ರಿಜಿಜು ಬ್ಯಾಟಿಂಗ್; ರಾಹುಲ್ ಗಾಂಧಿ ವಿರುದ್ಧ ಕಿಡಿ
ಕಿರಣ್ ರಿಜಿಜು — online desk
Published On :

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ನಿಂದನಾತ್ಮಕ ಹೇಳಿಕೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾದರೂ, ಸಾರ್ವಜನಿಕ ಜೀವನದಲ್ಲಿ ನಾಯಕರು ಸಭ್ಯ ಮತ್ತು ಸಂಸ್ಕೃತ ಭಾಷೆಯನ್ನೇ ಬಳಸಬೇಕು ಎಂದು ಹೇಳಿದ್ದಾರೆ,

ರಾಹುಲ್ ಗಾಂಧಿ ಬಳಸಿದ ಪದಪ್ರಯೋಗ ಅಸಂಸದೀಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಎಲ್ಲ ರೀತಿಯ ಅಸಂಸದೀಯ ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸುತ್ತಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಚರ್ಚೆಗಳು ಸೌಜನ್ಯಯುತ ಮತ್ತು ಸಂಸ್ಕೃತ ಭಾಷೆಯಲ್ಲಿ ನಡೆಯಬೇಕು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ಅವರು ಬಳಸುತ್ತಿರುವ ಅವಹೇಳನಕಾರಿ ಹಾಗೂ ಕೀಳುಮಟ್ಟದ ಪದಗಳು ಪ್ರಜಾಪ್ರಭುತ್ವಕ್ಕೂ, ದೇಶಕ್ಕೂ ಒಳ್ಳೆಯದಲ್ಲ ಎಂದು ಹೇಳಿದರು.

ಇದೇ ವೇಳೆ ಪರೀಕ್ಷಾ ಮಸೂದೆ (Exam Bill) ಕುರಿತು ಲೋಕಸಭೆಯಲ್ಲಿ ನಡೆಯಲಿರುವ ಚರ್ಚೆಯನ್ನು ಉಲ್ಲೇಖಿಸಿದ ಅವರು, "ಪ್ರತಿಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಕನಿಷ್ಠ ಐದು ನಿಮಿಷವಾದರೂ ಪರೀಕ್ಷಾ ಮಸೂದೆ ಕುರಿತು ಮಾತನಾಡಬೇಕು" ಎಂದು ಸಲಹೆ ನೀಡಿದರು.

ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಗೆ ಸಂಬಂಧಿಸಿದ ಸಾರ್ವಜನಿಕ ಪರೀಕ್ಷೆ (ಅನ್ಯಾಯ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ-2026 ಕುರಿತ ಚರ್ಚೆಯಿಂದ ಗಮನ ಬೇರೆಡೆಗೆ ತಿರುಗಿಸಲು ವಿರೋಧ ಪಕ್ಷಗಳು ಸಂಬಂಧವಿಲ್ಲದ ವಿಷಯಗಳನ್ನು ಪ್ರಸ್ತಾಪಿಸುತ್ತಿವೆ ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕರು ಮಸೂದೆ ಬಗ್ಗೆ ಮಾತನಾಡಲೇ ಇಲ್ಲ. ಅವರು ಕೇವಲ ರಾಜಕೀಯ ಮಾಡಿದರು. ಇಂದು ರಾಹುಲ್ ಗಾಂಧಿ ಹಾಗೂ ಇತರ ವಿರೋಧ ಪಕ್ಷದ ನಾಯಕರು ಮಸೂದೆ ಕುರಿತು ಮಾತನಾಡುತ್ತಾರೆ ಎಂಬ ನಿರೀಕ್ಷೆಯಿದೆ" ಎಂದು ಹೇಳಿದರು.

ಇಂತಹ ಮಹತ್ವದ ಮಸೂದೆ ಕುರಿತು ಚರ್ಚೆ ನಡೆಯುತ್ತಿದ್ದರೂ, ಸಂಬಂಧವಿಲ್ಲದ ವಿಷಯಗಳನ್ನು ಎತ್ತಿ ಹಿಡಿದು ರಾಜಕೀಯ ಮಾಡುವ ಮೂಲಕ ಚರ್ಚೆಯ ದಿಕ್ಕು ಬದಲಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಈ ಮಸೂದೆಯನ್ನು ತರಲಾಗಿದೆ, "ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಹೊಸ ವಿಶ್ವಾಸ ಮೂಡಿದೆ. ಕಾಂಗ್ರೆಸ್‌ಗೆ ಪರೀಕ್ಷಾ ವ್ಯವಸ್ಥೆ ಕುರಿತು ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ನೀಡಬಹುದು" ಎಂದರು.

ಈ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ವಿರೋಧ ಪಕ್ಷದ ಸಂಸದರು ಮಸೂದೆಯ ವ್ಯಾಪ್ತಿಗೆ ಸಂಬಂಧಿಸದ ವಿಷಯಗಳನ್ನೇ ಪ್ರಸ್ತಾಪಿಸಿದ್ದಾರೆ ಎಂದು ಅವರು ಆರೋಪಿಸಿದರು.

ನಿನ್ನೆ ಪ್ರಿಯಾಂಕಾ ಗಾಂಧಿ ಅವರ ಭಾಷಣವನ್ನು ಕೇಳಿದ್ದೀರಿ. ಅವರು ಮಸೂದೆಯ ವ್ಯಾಪ್ತಿಯಿಂದ ಸಂಪೂರ್ಣ ಹೊರಗಿನ ವಿಷಯಗಳನ್ನೇ ಮಾತನಾಡಿದರು. ಇತರ ವಿರೋಧ ಪಕ್ಷದ ಸಂಸದರೂ ಮಸೂದೆಯ ಬಗ್ಗೆ ಮಾತನಾಡದೆ ಬೇರೆ ವಿಷಯಗಳನ್ನೇ ಪ್ರಸ್ತಾಪಿಸಿದರು" ಎಂದು ಹೇಳಿದರು.

ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಕನಿಷ್ಠ ಸ್ವಲ್ಪ ಸಮಯವಾದರೂ ಈ ಮಸೂದೆಗೆ ಮೀಸಲಿಡಬೇಕು. ಇಂದು ರಾಹುಲ್ ಗಾಂಧಿ ಈ ಮಸೂದೆ ಕುರಿತು ಮಾತನಾಡುತ್ತಾರೆ ಎಂಬ ವಿಶೇಷ ನಿರೀಕ್ಷೆಯಿದೆ. ಅವರು 20 ಅಥವಾ 30 ನಿಮಿಷ ಮಾತನಾಡಿದರೂ, ಕನಿಷ್ಠ ಐದು ನಿಮಿಷವಾದರೂ ಮಸೂದೆ ಬಗ್ಗೆ ಮಾತನಾಡಬೇಕು. ಇಷ್ಟು ಮಹತ್ವದ ಮಸೂದೆ ಬಗ್ಗೆ ಮಾತನಾಡದೇ ಇರುವುದು ಸೂಕ್ತವಲ್ಲ ಎಂದರು.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಹುಲ್ ಗಾಂಧಿ, ಕೇಂದ್ರ ಶಿಕ್ಷಣ ಖಾತೆಯನ್ನು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಬಳಿಕ ಪ್ರಲ್ಹಾದ್ ಜೋಶಿ ಅವರಿಗೆ ನೀಡಿರುವುದನ್ನು ತೀವ್ರವಾಗಿ ಟೀಕಿಸಿದ್ದರು.

"ಭಾರತದ ಶಿಕ್ಷಣ ಸಚಿವರಾಗಿ ಬಿಜೆಪಿ ಅತ್ಯಾಚಾರಿಗಳನ್ನು ರಕ್ಷಿಸುವ ವ್ಯಕ್ತಿಯನ್ನು ನೇಮಿಸಿದೆ. ಅತ್ಯಾಚಾರಿಗಳನ್ನು ರಕ್ಷಿಸುವ ವ್ಯಕ್ತಿಗಿಂತ ಕೀಳುಮಟ್ಟದ ವ್ಯಕ್ತಿ ಮತ್ತೊಬ್ಬರಿರಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರ ಸಚಿವ ಸಂಪುಟದಲ್ಲಿ ಅನೇಕ ನಾಯಕರು ಇದ್ದರೂ, ಅವರಲ್ಲಿ ಯಾರನ್ನಾದರೂ ಆಯ್ಕೆ ಮಾಡಬಹುದಿತ್ತು. ಆದರೆ, ಅವರು ಅತ್ಯಾಚಾರಿಗಳನ್ನು ರಕ್ಷಿಸುವ ವ್ಯಕ್ತಿಯನ್ನೇ ಶಿಕ್ಷಣ ಸಚಿವರನ್ನಾಗಿ ಆಯ್ಕೆ ಮಾಡಿದ್ದಾರೆ. ಇದು ಆಶ್ಚರ್ಯಕರ" ಎಂದು ಹೇಳಿದ್ದರು.

ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಸದೀಯ ಚರ್ಚೆಯಲ್ಲಿ ಇಂತಹ ಭಾಷೆಯ ಬಳಕೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಎಂದು ರಿಜಿಜು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.