ಜನತೆ ವಿಷ್ಣುವಿನ ಅವತಾರ, ನಿರ್ಲಕ್ಷ್ಯಿಸಬೇಡಿ; ಕೇಂದ್ರದ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ; ಸಿಜೆಪಿ ಪ್ರತಿಭಟನೆಗೆ ಮೆಚ್ಚುಗೆ
ಪಕ್ಷದ ಮುಖವಾಣಿ ಸಾಮ್ನಾ ಗೆ ಸಂಸದ ಸಂಜಯ್ ರಾವತ್ ನಿರೂಪಣೆಯಲ್ಲಿ ಸಂದರ್ಶನ ನೀಡಿರುವ ಉದ್ಧವ್ ಠಾಕ್ರೆ, ಸರ್ಕಾರ ಭಯ ಹುಟ್ಟಿಸಿ ದೀರ್ಘಾವಧಿ ಆಡಳಿತ ನಡೆಸಿದೆ ಎಂದು ಆರೋಪಿಸಿದ್ದಾರೆ.

ಮುಂಬೈ: ದೇಶಾದ್ಯಂತ ಸಿಜೆಪಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿರುವುದರ ಬಗ್ಗೆ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿಜೆಪಿ ಮೀಮ್ ಪೇಜ್ ಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಸಿಜೆಪಿ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿರುವವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಉದ್ಧವ್ ಠಾಕ್ರೆ, ಜನತೆ ವಿಷ್ಣುವಿನ ಅವತಾರ ಎಂದು ಹೇಳಿದ್ದಾರೆ. ದೇಶ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವ ಉದ್ದೇಶ ಹೊಂದಿರುವ ಜನರು ಮಹಾರಾಷ್ಟ್ರದಿಂದ ದೆಹಲಿಯವರೆಗೆ ಭಯ ಬಿಟ್ಟು ರಸ್ತೆಗಳಿಗೆ ಇಳಿದಿದ್ದಾರೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಪಕ್ಷದ ಮುಖವಾಣಿ ಸಾಮ್ನಾ ಗೆ ಸಂಸದ ಸಂಜಯ್ ರಾವತ್ ನಿರೂಪಣೆಯಲ್ಲಿ ಸಂದರ್ಶನ ನೀಡಿರುವ ಉದ್ಧವ್ ಠಾಕ್ರೆ, ಸರ್ಕಾರ ಭಯ ಹುಟ್ಟಿಸಿ ದೀರ್ಘಾವಧಿ ಆಡಳಿತ ನಡೆಸಿದೆ.ಆದರೆ ಈಗ ಜನರು ಭಯದಿಂದ ಮುಕ್ತರಾಗಿದ್ದಾರೆ ಎಂದು ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
ಭಗವಾನ್ ವಿಷ್ಣು ಜನತೆಯ ರೂಪತಾಳಿದ್ದಾರೆ. ಅದನ್ನು ನಾನು ಜಂತರ್ ಮಂತರ್ ನಲ್ಲಿ ನೋಡಿದ್ದೇನೆ. ಇದು ದೇಶ ಹಾಗೂ ಧರ್ಮವನ್ನು ರಕ್ಷಿಸಲು ವಿಷ್ಣುವಿನ ಅವತಾರವಾಗಿದೆ. ಧರ್ಮ ಅಂದರೆ ಹಿಂದೂ ಮುಸ್ಲಿಮ್ ಅಲ್ಲ. ಬದಲಾಗಿ ಮಾನವ ಧರ್ಮವನ್ನು ಬೀದಿಗಿಳಿದಿರುವ ಯುವಕರು ರಕ್ಷಿಸುತ್ತಿದ್ದಾರೆ. ಬೀದಿಗಿಳಿದಿರುವ ಯುವಕರೊಂದಿಗೆ ಅವರ ಪೋಷಕರು, ಅಜ್ಜ-ಅಜ್ಜಿಯರಿದ್ದಾರೆ. ಇದು ದೇಶ ರಕ್ಷಿಸಲು ಬಂದಿರುವ ವಿಷ್ಣುವಿನ ಅವತಾರವಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.
ಪ್ರತಿಭಟನೆಗಳನ್ನು ನಿರ್ಲಕ್ಷ್ಯ ಮಾಡದಂತೆ ಕೇಂದ್ರಕ್ಕೆ ಎಚ್ಚರಿಕೆ ನೀಡಿರುವ ಉದ್ಧವ್ ಠಾಕ್ರೆ, ವಿದ್ಯಾರ್ಥಿಗಳ ಆಂದೋಲನ ಏನೆಂಬುದನ್ನು ತಿಳಿಯಲು ನೆರೆ ರಾಷ್ಟ್ರಗಳ ನಾಯಕರನ್ನು ಕೇಳಿ. ನೀವೇ ಆಶ್ರಯ ನೀಡಿರುವ ಬಾಂಗ್ಲಾದ ಶೇಖ್ ಹಸೀನಾ ಅವರನ್ನು ಕೇಳಿ, ಝೆನ್-ಜಿ ಗಳ ಪ್ರತಿಭಟನೆಯನ್ನು ಯಾಕೆ ಹತ್ತಿಕ್ಕಲು ಆಗಲಿಲ್ಲ ಎಂಬುದನ್ನು ನೇಪಾಳ ಪ್ರಧಾನಿಯನ್ನು ಕೇಳಿ, ದೇಶವೆಂದರೆ ಅದು ಅದರ ಜನತೆಯಾಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಅವರಿಗೆ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿದಿರುತ್ತದೆ ಎಂದು ಠಾಕ್ರೆ ಹೇಳಿದ್ದಾರೆ.
ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಸಾರ್ವಜನಿಕರ ಆಕ್ರೋಶ, ಬೃಹತ್ ಅಭಿಯಾನವಾಗಿ ಮಾರ್ಪಾಡಾಗುತ್ತದೆ. ಈಗಿನ ಯುವಜನತೆ ತಾವು ಅಂದುಕೊಂಡಿದ್ದನ್ನು ಸಾಧಿಸುವವರೆಗೂ ವಿಶ್ರಮಿಸುವುದಿಲ್ಲ ಎಂದು ಠಾಕ್ರೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



