ದೇಶ

UP ಚುನಾವಣೆ: ಈಗಲೇ ಮೈತ್ರಿ ಮಾತುಕತೆ ಆರಂಭಿಸೋಣ; ಚುನಾವಣೆ ಬಳಿಕ ಅತ್ತರೆ ಪ್ರಯೋಜನ ಇಲ್ಲ- ಅಖಿಲೇಶ್ ಗೆ ಓವೈಸಿ ಆಫರ್!

ಸಂಸತ್ ಚುನಾವಣೆಗೆ ಮುನ್ನ ನಡೆಯುವ ರಾಜ್ಯ ಚುನಾವಣೆ ಪ್ರಾಮುಖ್ಯತೆ ಪಡೆದಿರುವುದರಿಂದ, ಓವೈಸಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರಿಗೆ ಈಗಲೇ ಮಾತುಕತೆ ಆರಂಭಿಸಬೇಕೆಂದು ಸಂದೇಶ ನೀಡಿದ್ದಾರೆ.

UP ಚುನಾವಣೆ: ಈಗಲೇ ಮೈತ್ರಿ ಮಾತುಕತೆ ಆರಂಭಿಸೋಣ; ಚುನಾವಣೆ ಬಳಿಕ ಅತ್ತರೆ ಪ್ರಯೋಜನ ಇಲ್ಲ- ಅಖಿಲೇಶ್ ಗೆ ಓವೈಸಿ ಆಫರ್!
ಅಖಿಲೇಶ್ ಯಾದವ್‌-ಅಸಾದುದ್ದೀನ್ ಓವೈಸಿ — online desk
Published On :

ನವದೆಹಲಿ: ಉತ್ತರ ಪ್ರದೇಶದ ಪ್ರಮುಖ ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ, AIMIM ಮುಖ್ಯಸ್ಥ ಅಸದುದ್ದೀನ್ ಓವೈಸಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಸಂಸತ್ ಚುನಾವಣೆಗೆ ಮುನ್ನ ನಡೆಯುವ ರಾಜ್ಯ ಚುನಾವಣೆ ಪ್ರಾಮುಖ್ಯತೆ ಪಡೆದಿರುವುದರಿಂದ, ಓವೈಸಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರಿಗೆ ಈಗಲೇ ಮಾತುಕತೆ ಆರಂಭಿಸಬೇಕೆಂದು ಸಂದೇಶ ನೀಡಿದ್ದಾರೆ.

“ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಬಾರದು ಎಂಬುದು ಮಜ್ಲಿಸ್‌ನ ಅಭಿಪ್ರಾಯ. ನಾನು ಕೈಜೋಡಿಸಲು ಸಿದ್ಧನಿದ್ದೇನೆ, ಮೈತ್ರಿ ಮಾಡಲು ಸಿದ್ಧನಿದ್ದೇನೆ. ಇದು ಮಾತುಕತೆ ನಡೆಸುವ ಸಮಯ, ಚುನಾವಣೆ ಮುಗಿದ ನಂತರ ಅಳುವ ಪರಿಸ್ಥಿತಿ ಬರಬಾರದು,” ಎಂದು ಅವರು ಮೋರಾದಾಬಾದ್‌ನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಇದನ್ನು ‘ಮತ ಬ್ಯಾಂಕ್ ರಾಜಕೀಯದ ಒಪ್ಪಂದ’ ಎಂದು ಟೀಕಿಸಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವೇ ಅತಿದೊಡ್ಡ ವಿರೋಧ ಪಕ್ಷವಾಗಿದ್ದು, ಎರಡು ಅವಧಿಗಳ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಬಲವನ್ನು ಎದುರಿಸುವ ಜವಾಬ್ದಾರಿಯನ್ನು ಹೊತ್ತಿದೆ.

ಒಬ್ಬರನ್ನೊಬ್ಬರು ಎದುರಾಳಿಗಳಾಗಿ ನಿಂತು ಪರಸ್ಪರರ ಮತಗಳನ್ನು ಕಿತ್ತುಕೊಳ್ಳುವ ಬದಲು ಕೈಜೋಡಿಸೋಣ ಎಂದು ಓವೈಸಿ ಯಾದವ್‌ ಗೆ ಸಂದೇಶ ರವಾನಿಸಿದ್ದಾರೆ.

“ನೀವು ಹೇಳುವಂತೆ, ಓವೈಸಿ ಸ್ಪರ್ಧೆಗೆ ಬಂದರೆ ನಮಗೆ ಹಾನಿ ಆಗುತ್ತದೆ ಎಂದು ಭಾವಿಸುತ್ತೀರಾ? ನಾನು ನಿಮ್ಮ ಜೊತೆಯಲ್ಲಿ ಹೋರಾಡಲು ಸಿದ್ಧನಿದ್ದೇನೆ,” ಎಂದು ಅವರು ಹೇಳಿದರು. AIMIM ಪಕ್ಷದ ಹೋರಾಟ ಯಾವ ಧರ್ಮದ ವಿರುದ್ಧವೂ ಅಲ್ಲ ಎಂಬುದನ್ನು ಅವರು ಮತ್ತೆ ಒತ್ತಿ ಹೇಳಿದರು. “ನಮ್ಮ ಹೋರಾಟ ನಮ್ಮ ಗೌರವ ಮತ್ತು ನ್ಯಾಯಕ್ಕಾಗಿ. ನಾವು ಚಾಪೆಯ ಮೇಲೆ ಕುಳಿತುಕೊಳ್ಳಲು ಬಯಸುವುದಿಲ್ಲ; ನಮಗೆ ಸಮಾನತೆ ಬೇಕು. ಅಖಿಲೇಶ್ ಆ ಕುರ್ಚಿಯ ಮುಂದೆ ಕುಳಿತರೆ, ಓವೈಸಿ ಕೂಡ ಆ ಕುರ್ಚಿಯ ಎದುರು ಕಾಲು ಮಡಚಿಕೊಂಡು ಕುಳಿತು ಹಕ್ಕು ಮತ್ತು ನ್ಯಾಯದ ಬಗ್ಗೆ ಮಾತನಾಡುವವನಾಗಿರಬೇಕು,” ಎಂದು ಹೈದರಾಬಾದ್‌ನ AIMIM ಸಂಸದರು ಸ್ಪಷ್ಟಪಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ BJP ವಕ್ತಾರ ಶೆಹಜಾದ್ ಪೂನಾವಾಲಾ, ಈ ಮೈತ್ರಿ ಆಹ್ವಾನವನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ. “ಅಖಿಲೇಶ್ ಯಾದವ್ ಮತ್ತು ಓವೈಸಿ ಇಬ್ಬರೂ ಓಲೈಕೆ ರಾಜಕೀಯದಲ್ಲಿ (ಅಪೀಸ್‌ಮೆಂಟ್) ಪರಸ್ಪರ ಸ್ಪರ್ಧಿಸುತ್ತಾರೆ. ಇವತ್ತು ‘ಯಾರು ದೊಡ್ಡ ಭಾಯಿಜಾನ್ ಆಗುತ್ತಾರೆ’ ಎಂಬ ಸ್ಪರ್ಧೆಯನ್ನು ಬಿಟ್ಟು ‘ಭಾಯಿಜಾನ್ ಸಹಕಾರ’ದ ಮಾತಾಡುತ್ತಿದ್ದಾರೆ. ಆದ್ದರಿಂದ ಓವೈಸಿ ಅಖಿಲೇಶ್ ಜೀ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ,” ಎಂದು ಪೂನಾವಾಲಾ ಹೇಳಿದರು. ಅವರು ಓವೈಸಿ ಮತ್ತು ಯಾದವ್ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಕೂಡ ವ್ಯಾಖ್ಯಾನಿಸಿದರು. ಉತ್ತರ ಪ್ರದೇಶದಲ್ಲಿ ಚುನಾವಣೆಗಳು 2027ರಲ್ಲಿ ನಡೆಯಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.