ಪ್ರಧಾನ್ ರಾಜೀನಾಮೆ ಸಾಲದು; ಪಾರದರ್ಶಕ ಪರೀಕ್ಷೆ, ಕೈಗೆಟುಕುವ ಶಿಕ್ಷಣಕ್ಕೆ ಒತ್ತು ನೀಡಿ: ಕೇಂದ್ರ ಸರ್ಕಾರಕ್ಕೆ ವಿದ್ಯಾರ್ಥಿಗಳ ಆಗ್ರಹ
ಪಾರದರ್ಶಕ ಪರೀಕ್ಷಾ ವ್ಯವಸ್ಥೆ, ಕೈಗೆಟುಕುವ ಮತ್ತು ಗುಣಮಟ್ಟದ ಶಿಕ್ಷಣ, ಸರ್ಕಾರಿ ಶಾಲೆಗಳ ಬಲವರ್ಧನೆ ಹಾಗೂ ಸಾರ್ವಜನಿಕ ಶಿಕ್ಷಣಕ್ಕೆ ಹೆಚ್ಚಿನ ಹೂಡಿಕೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿಜೆಪಿ ನೇತೃತ್ವದ ನೀಟ್ ಹೋರಾಟದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಹೊಸ ಶಿಕ್ಷಣ ಸಚಿವರು ಕೇವಲ ನಾಯಕತ್ವ ಬದಲಾವಣೆಗೆ ಸೀಮಿತವಾಗದೆ, ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನ್ ಅವರ ನಿರ್ಗಮನವನ್ನು ಸ್ವಾಗತಿಸಿದ ಪ್ರತಿಭಟನಾಕಾರರು, ತಮ್ಮ ಹೋರಾಟವು ಒಬ್ಬ ಸಚಿವರ ರಾಜೀನಾಮೆಗಾಗಿ ಮಾತ್ರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಾರದರ್ಶಕ ಪರೀಕ್ಷಾ ವ್ಯವಸ್ಥೆ, ಕೈಗೆಟುಕುವ ಮತ್ತು ಗುಣಮಟ್ಟದ ಶಿಕ್ಷಣ, ಸರ್ಕಾರಿ ಶಾಲೆಗಳ ಬಲವರ್ಧನೆ ಹಾಗೂ ಸಾರ್ವಜನಿಕ ಶಿಕ್ಷಣಕ್ಕೆ ಹೆಚ್ಚಿನ ಹೂಡಿಕೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಸುಮಾರು ಒಂದು ತಿಂಗಳಿನಿಂದ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಗಾಜಿಯಾಬಾದ್‌ನ ರಾಜ್ ಯಾದವ್, "ಹೊಸ ಶಿಕ್ಷಣ ಸಚಿವರು ಸಂಪೂರ್ಣ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಸಮಗ್ರ ಸುಧಾರಣೆ ತರಬೇಕು. ಶಿಕ್ಷಣ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ದೆಹಲಿ ಲಕ್ಷ್ಮೀ ನಗರದ ಶೃಷ್ಟಿ ಎಂಬುವವರು ಮಾತನಾಡಿ, ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಓದು ಮುಂದುವರಿಸುವುದು ಕಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನನ್ನ ಶಿಕ್ಷಣದ ಖರ್ಚನ್ನು ನಾನೇ ದುಡಿದು ಭರಿಸುತ್ತಿದ್ದೇನೆ. ಪ್ರಶ್ನೆಪತ್ರಿಕೆ ಸೋರಿಕೆಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ಹೊಸ ಸಚಿವರು ಶಿಕ್ಷಕರ ನೇಮಕಾತಿಯನ್ನು ಹೆಚ್ಚಿಸಬೇಕು, ಶಿಕ್ಷಣವನ್ನು ಕೈಗೆಟುಕುವಂತೆ ಮಾಡಬೇಕು ಹಾಗೂ ಸರ್ಕಾರಿ ಶಾಲೆಗಳಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ರಾಜಸ್ಥಾನದ ವಿಕ್ರಂ ಚೌಧರಿ ಕಳೆದ ಎರಡು ವಾರಗಳಿಂದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಸುಧಾರಣೆಗಳು ಪ್ರಾಥಮಿಕ ಶಾಲಾ ಹಂತದಿಂದಲೇ ಆರಂಭವಾಗಬೇಕು. ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು. ಶಿಕ್ಷಣಕ್ಕೆ ಮೀಸಲಾದ ಬಜೆಟ್ ಹೆಚ್ಚಿಸಬೇಕು. ಯುಪಿಎಸ್‌ಸಿ, ನೀಟ್ ಹಾಗೂ ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ದೇಶದಲ್ಲಿ ಶಿಕ್ಷಣ ತುಂಬಾ ದುಬಾರಿಯಾಗಿದೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.
ನೀಟ್‌ಗೆ ಸಿದ್ಧತೆ ನಡೆಸುತ್ತಿರುವ ಪಿಯುಸಿ ವಿದ್ಯಾರ್ಥಿ ಶೌರ್ಯ, "ಪ್ರಧಾನ್ ರಾಜೀನಾಮೆಯಿಂದ ನಮ್ಮ ಧ್ವನಿಗೆ ಬೆಲೆ ಸಿಕ್ಕಿದೆ ಎಂಬ ವಿಶ್ವಾಸ ಮೂಡಿದೆ. ಹೊಸ ಶಿಕ್ಷಣ ಸಚಿವರು ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ಮತ್ತೆ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ರಾಜಸ್ಥಾನದ ಜೈಸಲ್ಮೇರ್‌ನ ಶ್ರವಣ್ ಕುಮಾರ್ ಅವರು ಮಾತನಾಡಿ, ಆಡಳಿತಾತ್ಮಕ ವೈಫಲ್ಯಗಳಿಂದ ವಿದ್ಯಾರ್ಥಿಗಳು ಮರುಪರೀಕ್ಷೆ ಬರೆಯುವ ಪರಿಸ್ಥಿತಿ ಬರಬಾರದು ಎಂದು ಒತ್ತಾಯಿಸಿದರು. ದೂರದ ಪ್ರದೇಶಗಳಲ್ಲಿ ಪರೀಕ್ಷಾ ಕೇಂದ್ರಗಳ ಹಂಚಿಕೆ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ತ್ವರಿತವಾಗಿ ಪರಿಹರಿಸಬೇಕು ಎಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



