ಇಂದೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆ? ಮಧ್ಯಾಹ್ನ 12.30 ಕ್ಕೆ CJP-ಕೇಂದ್ರ ಸರ್ಕಾರದ ನಡುವೆ ಮಹತ್ವದ ಮಾತುಕತೆ
ಸೋನಮ್ ವಾಂಗ್ಚುಕ್ ಅವರು ಗುರುವಾರ ತಡ ರಾತ್ರಿ ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.

ನವದೆಹಲಿ: ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಹಾಗೂ ಶಿಕ್ಷಣತಜ್ಞ ಮತ್ತು ಪರಿಸರವಾದಿ ಸೋನಮ್ ವಾಂಗ್ಚೂಕ್ ಅವರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಂತೆ ಕಾಣುತ್ತಿದೆ.
ಶಿಕ್ಷಣ ವ್ಯವಸ್ಥೆಯ ಸುಧಾರಣೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಹೊಣೆಗಾರಿಕೆ ನಿಗದಿಪಡಿಸುವುದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮದ ಬಗ್ಗೆ ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿದ ನಂತರ ಸೋನಮ್ ವಾಂಗ್ಚೂಕ್ ಅವರು ತಮ್ಮ 26 ದಿನಗಳ ಉಪವಾಸ ಅಂತ್ಯಗೊಳಿಸಿದ್ದಾರೆ.
ಇದರ ಬೆನ್ನಲ್ಲೇ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಿಜೆಪಿ ಜೊತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸಭೆಯನ್ನು ತಟಸ್ಥ ಸ್ಥಳದಲ್ಲಿ ನಡೆಸಬೇಕೆಂಬ ವಿದ್ಯಾರ್ಥಿಗಳ ಮನವಿಗೆ ಕೇಂದ್ರ "ಒಪ್ಪಿಕೊಂಡಿದೆ". ಇದೀಗ ಸರ್ಕಾರ ಮತ್ತು ಕಾಕ್ರೋಚ್ ಜನತಾ ಪಕ್ಷವು ಶುಕ್ರವಾರ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಮಾತುಕತೆ ನಡೆಸಲು ಸಜ್ಜಾಗಿವೆ.
ಸೋನಮ್ ವಾಂಗ್ಚುಕ್ ಅವರು ಗುರುವಾರ ತಡ ರಾತ್ರಿ ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.
ಸರ್ಕಾರ ಮತ್ತು ಸಿಜೆಪಿ ನಡುವೆ ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಮಹತ್ವದ ಸಭೆ ನಡೆಯುವ ಸಾಧ್ಯತೆಯಿದೆ.
"ತಟಸ್ಥ ಸ್ಥಳಕ್ಕಾಗಿ ತನ್ನ ವಿನಂತಿಯನ್ನು ಒಪ್ಪಿಕೊಂಡ" ಸರ್ಕಾರದ ನಿರ್ಧಾರವನ್ನು ಸಿಜೆಪಿ ರಾಷ್ಟ್ರೀಯ ವಕ್ತಾರ ಸೌರವ್ ದಾಸ್ ಅವರು ಸಂಘಟನೆ ಸ್ವಾಗತಿಸಿದ್ದಾರೆ.
"ಮಾತುಕತೆಗೆ ಕರೆಯಲಾಗಿದೆ. ಸಭೆಯನ್ನು ತಟಸ್ಥ ಸ್ಥಳದಲ್ಲಿ ನಡೆಸಬೇಕೆಂಬ ನಮ್ಮ ವಿನಂತಿಗೆ ಸರ್ಕಾರ ಒಪ್ಪಿಕೊಂಡಿದೆ ಮತ್ತು ಸಭೆಗೆ ಭಾರತದ ಕಾನ್ಸ್ಟಿಟ್ಯೂಷನ್ ಕ್ಲಬ್ ಅನ್ನು ಆಯ್ಕೆ ಮಾಡಲಾಗಿದೆ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆ" ಎಂದು ದಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಸರ್ಕಾರ ಮುಕ್ತ ಮನಸ್ಸಿನಿಂದ ಬಂದು ಜನರ ಮಾತನ್ನು ಕೇಳುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಸಚಿವರ ನಿವಾಸ ಅಥವಾ ಕಚೇರಿಯಲ್ಲಿ ಮಾತುಕತೆ ನಡೆಸಲು ಸರ್ಕಾರ ನೀಡಿದ್ದ ಆಹ್ವಾನವನ್ನು ಸಿಜೆಪಿ ಈ ಹಿಂದೆ ತಿರಸ್ಕರಿಸಿತ್ತು, ಚರ್ಚೆಗಳು ತಟಸ್ಥ ಸ್ಥಳದಲ್ಲಿ ನಡೆಯಬೇಕೆಂದು ಒತ್ತಾಯಿಸಿತ್ತು.
ಪ್ರಧಾನ್ ರಾಜೀನಾಮೆ ಪಟ್ಟು ಹಿಡಿದಿರುವ ಸಿಜೆಪಿ, ಜಂತರ್ ಮಂತರ್‌ನಲ್ಲಿ ಅವರು ರಾಜೀನಾಮೆ ನೀಡುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದೆ.
ಮಾತುಕತೆ ವೇಳೆ ಪ್ರಧಾನ್ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿಯುವ ಸಾಧ್ಯತೆ ಇದ್ದು, ಅವರು ಇಂದೇ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳು, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ನೀಟ್ ಪತ್ರಿಕೆ ಸೋರಿಕೆ ಆರೋಪದ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ಮತ್ತು ಎಲ್ಲಾ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು ಎಂದು ಸಂಘಟನೆ ಒತ್ತಾಯಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



