ದೇಶ

'ಭೂಮಿ ಮೇಲಿನ ಎಲ್ಲರೂ ಹಿಂದೂಗಳೇ, ಧರ್ಮ ಬದಲಾವಣೆ ತಂದೆ ಬದಲಿಸಿದಂತೆ': ಆಟೋ ಮೇಲಿನ ಬರಹ ವೈರಲ್, ಚಾಲಕನಿಗೆ ಬೆದರಿಕೆ!

ಆಟೋದ ಹಿಂಭಾಗದಲ್ಲಿ "ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಹಿಂದೂ. ಜೈ ಶ್ರೀರಾಮ್!" ಹಾಗೂ "ಧರ್ಮ ಬದಲಾಯಿಸುವುದು ಎಂದರೆ ತಂದೆಯನ್ನು ಬದಲಾಯಿಸಿದಂತೆ" ಎಂಬ ಬರಹಗಳನ್ನು ಪ್ರದರ್ಶಿಸಿದ್ದ ಆಟೋ ಚಾಲಕ..

'ಭೂಮಿ ಮೇಲಿನ ಎಲ್ಲರೂ ಹಿಂದೂಗಳೇ, ಧರ್ಮ ಬದಲಾವಣೆ ತಂದೆ ಬದಲಿಸಿದಂತೆ': ಆಟೋ ಮೇಲಿನ ಬರಹ ವೈರಲ್, ಚಾಲಕನಿಗೆ ಬೆದರಿಕೆ!
ತೆಲಂಗಾಣ ಆಟೋ ಚಾಲಕ ಭರತ್ ಹಾಗೂ ಬಿಜೆಪಿ ನಾಯಕ ಬಂಡಿ ಸಂಜಯ್
Published On :

ಹೈದರಾಬಾದ್: ಚಾಲಕನೋರ್ವ ತನ್ನ ಆಟೋ ಹಿಂದೆ ಬರೆಸಿಕೊಂಡಿದ್ದ ಬರಹವೊಂದು ಇದೀಗ ತೆಲಂಗಾಣದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದು, ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಹೌದು.. ಆಟೋದ ಹಿಂಭಾಗದಲ್ಲಿ "ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಹಿಂದೂ. ಜೈ ಶ್ರೀರಾಮ್!" ಹಾಗೂ "ಧರ್ಮ ಬದಲಾಯಿಸುವುದು ಎಂದರೆ ತಂದೆಯನ್ನು ಬದಲಾಯಿಸಿದಂತೆ" ಎಂಬ ಬರಹಗಳನ್ನು ಪ್ರದರ್ಶಿಸಿದ್ದ ತೆಲಂಗಾಣದ ಆಟೋ ಚಾಲಕ ಸಿ. ಭರತ್ ಕುಮಾರ್ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಈ ಬರಹ ತೆಗೆಸುವಂತೆ ತೆಲಂಗಾಣದ ಕೆಲ ಮೂಲಭೂತವಾದಿಗಳು ಮತ್ತು ಕೆಲ ಪೊಲೀಸ್ ಅಧಿಕಾರಿಗಳೇ ಒತ್ತಾಯ ಹೇರಿದರೂ ಭರತ್ ಕುಮಾರ್ ಮಾತ್ರ ಇದನ್ನು ತೆಗೆಯಲು ನಿರಾಕರಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ. ಈ ವಿವಾದ ದಿನಕಳೆದಂತೆ ವ್ಯಾಪಕವಾಗುತ್ತಿದ್ದು, ತೆಲಂಗಾಣದಲ್ಲಿ ಈ ಕುರಿತ ಪರ-ವಿರೋಧ ಪ್ರತಿಭಟನೆಗಳು ತೀವ್ರಗೊಂಡಿವೆ.

ಇನ್ನು ಚಾಲಕ ಭರತ್ ಕುಮಾರ್ ಗೆ ಈ ಬರಹಗಳನ್ನು ತೆಗೆಸುವಂತೆ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಒತ್ತಾಯಿಸಿದ್ದಾರೆ ಎನ್ನಲಾಗಿದ್ದು ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿದೆ. ಅಲ್ಲದೆ ಈ ಸಂಬಂಧ ದೂರು ಬಂದ ಹಿನ್ನಲೆಯಲ್ಲಿ ಕೆಲ ಪೊಲೀಸ್ ಅಧಿಕಾರಿಗಳೂ ಕೂಡ ಚಾಲಕ ಭರತ್ ಗೆ ಕರೆ ಮಾಡಿ ತೆಗೆಸುವಂತೆ ಬೆದರಿಕೆ ಹಾಕಿದ್ದ ಆಡಿಯೋ ಕೂಡ ವೈರಲ್ ಆಗುತ್ತಿದೆ.

ಬಿಜೆಪಿ, ಹಿಂದೂಪರ ಸಂಘಟನೆಗಳ ಬೆಂಬಲ

ಇತ್ತ ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಆಟೋ ಚಾಲಕ ಭರತ್ ಕುಮಾರ್ ಗೆ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಬೆಂಬಲ ಘೋಷಿಸಿದ್ದಾರೆ. ಯಾವುದೇ ಕಾರಣಕ್ಕೂ ಬರಹ ತೆಗೆಸದಂತೆ ನಿನ್ನ ಬೆಂಬಲಕ್ಕೆ ನಾವಿರುವುದಾಗಿ ಹೇಳಿ ಧೈರ್ಯ ತುಂಬಿದ್ದಾರೆ. ಅಲ್ಲದೆ ಬಿಜೆಪಿ ನಾಯಕರು ಹಾಗೂ ಹಿಂದೂ ಸಂಘಟನೆಗಳು ಆಟೋ ಚಾಲಕನ ಬೆಂಬಲಕ್ಕೆ ನಿಂತಿದ್ದು, ಪೊಲೀಸ್ ಅಧಿಕಾರಿಯ ವರ್ತನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.

ಆಗಿದ್ದೇನು?

ಈ ವಿವಾದ ಜುಲೈ 13-14ರ ಅವಧಿಯಲ್ಲಿ ಹೈದರಾಬಾದ್‌ನ ಅತ್ತಾಪುರ ಪ್ರದೇಶದಲ್ಲಿ ಆರಂಭವಾಯಿತು. ಆಟೋ ಮೇಲಿದ್ದ ಬರಹಗಳಿಗೆ ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದು, ಬಳಿಕ ವಿಷಯ ಅತ್ತಾಪುರ ಪೊಲೀಸ್ ಠಾಣೆಗೂ ತಲುಪಿತ್ತು. ನಂತರ ಅತ್ತಾಪುರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಟೋ ಚಾಲಕನಿಗೆ ಕರೆ ಮಾಡಿ ಠಾಣೆಗೆ ಬರಲು ಸೂಚಿಸಿದರೆಂದು ಆರೋಪಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೊದಲ್ಲಿ, "ಹೈದರಾಬಾದ್‌ನಲ್ಲಿ ಬೇರೆ ನಿಯಮಗಳಿವೆ" ಎಂದು ಹೇಳುತ್ತಾ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿರುವುದು ಕೇಳಿಬರುತ್ತಿದೆ ಎನ್ನಲಾಗಿದೆ. ಆದರೆ, ಈ ಆಡಿಯೊದ ಸತ್ಯಾಸತ್ಯತೆಯನ್ನು ಪೊಲೀಸರು ಅಧಿಕೃತವಾಗಿ ದೃಢಪಡಿಸಿಲ್ಲ.

ಆಟೋ ಮೇಲೆ ಹಲ್ಲೆ

ಇನ್ನು ಈ ಬಗ್ಗೆ ಮಾತನಾಡಿರುವ ಆಟೋ ಚಾಲಕ ಭರತ್ ಕುಮಾರ್, 'ಮೆಹದೀಪಟ್ನಂ ಸಮೀಪ ಕೆಲವರು ತಮ್ಮ ಆಟೋವನ್ನು ತಡೆದು ಧಾರ್ಮಿಕ ಘೋಷಣೆಗಳಿದ್ದ ಹಿಂಭಾಗದ ಕವರ್ ಅನ್ನು ಹರಿದು ಹಾಕಿದ್ದು, ಮತ್ತೆ ಇಂತಹ ಬರಹಗಳನ್ನು ಪ್ರದರ್ಶಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ.

ಹಿಂದೂ ಸಂಘಟನೆಗಳ ಬೆಂಬಲ

ಘಟನೆ ಬೆಳಕಿಗೆ ಬಂದ ಬಳಿಕ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ), ಬಜರಂಗ ದಳ ಹಾಗೂ ಶಿವಶಕ್ತಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಆಟೋ ಚಾಲಕನ ಬೆಂಬಲಕ್ಕೆ ಧಾವಿಸಿವೆ. ಸಂಘಟನೆಗಳ ಕಾರ್ಯಕರ್ತರು ಭರತ್ ಕುಮಾರ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ, ಬೆದರಿಕೆ ಹಾಕಿದ್ದಾರೆ ಎನ್ನಲಾದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿ, ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಬಂಡಿ ಸಂಜಯ್ ಬೆಂಬಲ

ಇತ್ತೀಚಿನ ಬೆಳವಣಿಗೆಯಲ್ಲಿ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ಭರತ್ ಕುಮಾರ್ ಅವರನ್ನು ಭೇಟಿ ಮಾಡಿ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಹಾನಿಗೊಳಗಾದ ಆಟೋಗೆ ಬದಲಿ ವಾಹನ ವ್ಯವಸ್ಥೆ ಮಾಡಲು ಸಹಾಯ ಮಾಡುವುದಾಗಿ ಭರವಸೆ ನೀಡಿರುವ ಅವರು, ಹೈದರಾಬಾದ್ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ ಘಟನೆ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಒಂದು ವಲಯ ಆಟೋ ಚಾಲಕನ ಬರಹವನ್ನು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂದು ಸಮರ್ಥಿಸುತ್ತಿದ್ದರೆ, ಮತ್ತೊಂದು ವಲಯ ಇಂತಹ ಧಾರ್ಮಿಕವಾಗಿ ಪ್ರತ್ಯೇಕತೆಯನ್ನು ಸೂಚಿಸುವ ಘೋಷಣೆಗಳು ಸಾಮುದಾಯಿಕ ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.