ವಾಶ್ರೂಮ್ ಬಳಸಲು ಕೇಳಿದ್ದೇ ತಪ್ಪಾ?: ಕಳಪೆ ರೇಟಿಂಗ್, ಕೆಲಸಕ್ಕೆ ಕುತ್ತು..; 'ನಾನೂ ಕೂಡ ಹೆಣ್ಣು' ಸಂಕಷ್ಟ ತೋಡಿಕೊಂಡ ಗಿಗ್ ವರ್ಕರ್! Video
ದೆಹಲಿಯ ಮಹಿಳಾ ಗಿಗ್ ವರ್ಕರ್ ಒಬ್ಬರು ಗ್ರಾಹಕರ ಮನೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸೇವೆ ಸಲ್ಲಿಸಿದ ನಂತರ ಶೌಚಾಲಯ ಬಳಸಲು ಅನುಮತಿ ಕೇಳಿದ್ದಾರೆ.

ನವದೆಹಲಿ: ಗ್ರಾಹಕರ ಮನೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕೆಲಸ ಮಾಡಿದ ಬಳಿಕ ಶೌಚಾಲಯ ಬಳಸಲು ಅನುಮತಿ ಕೇಳಿದ ಗಿಗ್ ವರ್ಕರ್ಗೆ ವಾಶ್ರೂಮ್ ಬಳಸಲು ನಿರಾಕರಿಸಿದಷ್ಟೇ ಅಲ್ಲ, ನಂತರ ಕಳಪೆ ರೇಟಿಂಗ್ ನೀಡಿ ಐದು ದಿನಗಳ ಕಾಲ ಕೆಲಸವೇ ಸಿಗದಂತೆ ಮಾಡಲಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಗಿಗ್ ವರ್ಕರ್ ಒಬ್ಬರು ತಮ್ಮ ಅಳಲು ತೋಡಿಕೊಂಡಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ದೆಹಲಿಯ ಮಹಿಳಾ ಗಿಗ್ ವರ್ಕರ್ ಒಬ್ಬರು ಗ್ರಾಹಕರ ಮನೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸೇವೆ ಸಲ್ಲಿಸಿದ ನಂತರ ಶೌಚಾಲಯ ಬಳಸಲು ಅನುಮತಿ ಕೇಳಿದ್ದಾರೆ. ಆದರೆ, ಗ್ರಾಹಕರು ಅದನ್ನು ನಿರಾಕರಿಸಿ, "ಸೆಕ್ಯುರಿಟಿ ಗಾರ್ಡ್ ಬಳಸುವ ಶೌಚಾಲಯಕ್ಕೆ ಹೋಗಿ" ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ಅದೇ ಗ್ರಾಹಕರು ಆ್ಯಪ್ನಲ್ಲಿ ಮಹಿಳೆಗೆ 1 ಸ್ಟಾರ್ ರೇಟಿಂಗ್ ನೀಡಿ, ಅದಕ್ಕೆ ಕಾರಣವಾಗಿ ಶೌಚಾಲಯ ಬಳಸಲು ಕೇಳಿದ್ದನ್ನು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗ್ರಾಹಕರ ಈ ವರ್ತನೆಯಿಂದಾಗಿ ಮಹಿಳಾ ಗಿಗ್ ವರ್ಕರ್ ಬರೊಬ್ಬರಿ 5 ದಿನಗಳ ಕಾಲ ಕೆಲಸ ಕಳೆದುಕೊಳ್ಳುವಂತಾಗಿದೆ.
ಗಿಗ್ ಸೇವಾ ಸಂಸ್ಥೆಗಳ ರೇಟಿಂಗ್ ವ್ಯವಸ್ಥೆಯಲ್ಲಿ ಕಡಿಮೆ ರೇಟಿಂಗ್ ಪಡೆದರೆ ಮುಂದಿನ ಬುಕ್ಕಿಂಗ್ಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಈ ಘಟನೆಯ ನಂತರ ಮಹಿಳೆಗೆ ಐದು ದಿನಗಳ ಕಾಲ ಹೊಸ ಕೆಲಸಗಳು ಸಿಗದೆ ಆದಾಯವೇ ನಿಂತುಹೋಗಿದೆ ಎಂದು ಹೇಳಲಾಗಿದೆ.
ಮಹಿಳಾ ಸಿಬ್ಬಂದಿ ಹೇಳಿದ್ದೇನು?
ಈ ಆರೋಪವನ್ನು ಅದೇ ಕಂಪನಿಯ ಮತ್ತೊಬ್ಬ ಗಿಗ್ ವರ್ಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊ ಮೂಲಕ ಬಹಿರಂಗಪಡಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಮಾತನಾಡಿರುವ ಅವರು, "ಆರು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಶ್ರೀಮಂತ ಮನೆಗಳಲ್ಲಿಯೂ ಇಂತಹ ಅನುಭವ ಎದುರಾಗಿರಲಿಲ್ಲ. ವಾಶ್ರೂಮ್ ಬಳಸಲು ಕೇಳಿದ್ದನ್ನು ರಿವ್ಯೂನಲ್ಲಿ ಬರೆಯುವ ಅಗತ್ಯವೇನು? ಇದರಿಂದ ನನ್ನ ಸಹೋದ್ಯೋಗಿಗೆ ಹಲವು ದಿನಗಳ ಆದಾಯ ಕಳೆದುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಗ್ರಾಹಕರ ಮನೆಗಳಲ್ಲಿ ಹಲವು ಗಂಟೆಗಳ ಕಾಲ ಕೆಲಸ ಮಾಡುವ ಗಿಗ್ ವರ್ಕರ್ಗಳಿಗೆ ಕನಿಷ್ಠ ಮಾನವೀಯ ಗೌರವ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ಕೆಲವು ಮಂದಿ ಗ್ರಾಹಕರ ಭದ್ರತೆಯ ದೃಷ್ಟಿಯಿಂದಲೂ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಮನೆಯಲ್ಲಿ ಪ್ರತ್ಯೇಕ ಅತಿಥಿ ಶೌಚಾಲಯವಿದ್ದರೆ ಅದನ್ನು ಸೇವಾ ಸಿಬ್ಬಂದಿಗೆ ಬಳಸಲು ಅವಕಾಶ ನೀಡಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಈ ಘಟನೆಯ ಕುರಿತು ಸಂಬಂಧಿತ ಸೇವಾ ಸಂಸ್ಥೆ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, ಅಗತ್ಯವಿದ್ದಾಗ ಸೇವಾ ಸಿಬ್ಬಂದಿಗೆ ಗ್ರಾಹಕರು ಶೌಚಾಲಯ ಬಳಸಲು ಅವಕಾಶ ನೀಡಬೇಕು ಎಂಬ ನಿಯಮವಿದೆ ಎಂದು ವರದಿಗಳು ತಿಳಿಸಿವೆ.
ಅದಾಗ್ಯೂ ಗ್ರಾಹಕರ ವರ್ತನೆ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



