ಟಿಎಂಸಿಗೆ ಮತ್ತೊಂದು ಹೊಡೆತ: ರಾಜ್ಯಸಭಾ ಸದಸ್ಯತ್ವಕ್ಕೆ ನಟಿ-ರಾಜಕಾರಣಿ ಕೋಯಲ್ ಮಲ್ಲಿಕ್ ರಾಜೀನಾಮೆ!
ಬಂಗಾಳಿಯಲ್ಲಿ ನಟಿ ಕೋಯಲ್ ಮಲ್ಲಿಕ್ ಎಂದೇ ಜನಪ್ರಿಯರಾಗಿರುವ ಇವರು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಗೆ ಗುರುವಾರ ಮತ್ತೊಂದು ಹಿನ್ನಡೆ ಉಂಟಾಗಿದೆ. ರಾಜ್ಯಸಭಾ ಸಂಸದೆ ರುಕ್ಮಿಣಿ ಮಲ್ಲಿಕ್ ಪ್ರಮಾಣವಚನ ಸ್ವೀಕರಿಸಿದ ಕೆಲವೇ ತಿಂಗಳುಗಳಲ್ಲಿ ಮೇಲ್ಮನೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಬಂಗಾಳಿಯಲ್ಲಿ ನಟಿ ಕೋಯಲ್ ಮಲ್ಲಿಕ್ ಎಂದೇ ಜನಪ್ರಿಯರಾಗಿರುವ ಇವರು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ತಮ್ಮ ರಾಜೀನಾಮೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಬೇಕು ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಅಲ್ಪಾವಧಿಯ ಅಧಿಕಾರಾವಧಿಯಲ್ಲಿ ನೀಡಿದ ಬೆಂಬಲಕ್ಕಾಗಿ ರಾಜ್ಯಸಭಾ ಸಚಿವಾಲಯಕ್ಕೂ ಧನ್ಯವಾದ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಲು ಕಾರಣವೇನೆಂಬುದನ್ನು ಮಲ್ಲಿಕ್ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.
ಹಿರಿಯ ಬಂಗಾಳಿ ನಟ ರಂಜಿತ್ ಮಲ್ಲಿಕ್ ಅವರ ಪುತ್ರಿಯಾಗಿರುವ ಹಾಗೂ ನಟಿ- ರಾಜಕಾರಣಿಯಾಗಿರುವ ಇವರನ್ನು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಟಿಎಂಸಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.
ಇವರೊಂದಿಗೆ ಗಾಯಕ-ರಾಜಕಾರಣಿ ಬಾಬುಲ್ ಸುಪ್ರಿಯೋ, ಪಶ್ಚಿಮ ಬಂಗಾಳದ ಮಾಜಿ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಮತ್ತು ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಅವರನ್ನೂ ನಾಮನಿರ್ದೇಶನ ಮಾಡಲಾಗಿತ್ತು. ರಾಜ್ಯದಲ್ಲಿ ಅವರ ಜನಪ್ರಿಯತೆಯನ್ನು ಬಳಸಿಕೊಳ್ಳುವ ಪ್ರಯತ್ನವಾಗಿಯೇ ಅವರನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡಲಾಗಿತ್ತು.
ರಂಜಿತ್ ಮಲ್ಲಿಕ್ ಕಳೆದ ಏಪ್ರಿಲ್‌ನಲ್ಲಿ ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕೆಂಪು ಅಂಚುಳ್ಳ ಸಾಂಪ್ರದಾಯಿಕ ಬಿಳಿ ಸೀರೆಯನ್ನು ಧರಿಸಿ, ಬಂಗಾಳಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಅವರು ಗಮನ ಸೆಳೆದಿದ್ದರು. ಆಕೆಯ ರಾಜೀನಾಮೆಯಿಂದಾಗಿ ರಾಜ್ಯಸಭೆಯಲ್ಲಿ ಟಿಎಂಸಿ ಸದಸ್ಯರ ಸಂಖ್ಯೆ 10 ರಿಂದ 9ಕ್ಕೆ ಕುಸಿದಿದೆ. ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಸೋಲಿನ ಆಘಾತದಲ್ಲಿರುವಂತೆಯೇ ಈಗ ಮತ್ತೊಂದು ತೀವ್ರ ಹೊಡೆತ ಬಿದ್ದಿದೆ.
ಬುಧವಾರವಷ್ಟೇ ಹಿರಿಯ ಟಿಎಂಸಿ ನಾಯಕ ಮದನ್ ಮಿತ್ರಾ ಪಕ್ಷ ತೊರೆದು ಬಂಡಾಯ ಗುಂಪು ಸೇರಿದ್ದರು. ಅಭಿಷೇಕ್ ಬ್ಯಾನರ್ಜಿ ಅವರ ಕಡೆಯೇ ಪಕ್ಷ ಹೆಚ್ಚಿನ ಗಮನ ಹರಿಸುತ್ತಿದೆ. ಅವರು ಪಕ್ಷದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೇಸ್ ನಲ್ಲಿ ಮಿತ್ರಾ ಅವರ ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ಇಡಿ ಸಮನ್ಸ್ ನೀಡಿದ್ದ ಬೆನ್ನಲ್ಲೇ ಅವರು ಟಿಎಂಸಿ ತೊರೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



