ಚುನಾವಣಾ ಆಯೋಗ ವಿವಾದದಿಂದ ಮನನೊಂದಿದ್ದ ಮನಮೋಹನ್ ಸಿಂಗ್; 'ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದಿದ್ದರು..!
ಸಾಂವಿಧಾನಿಕ ಸಂಸ್ಥೆಯೊಂದರ ಮೇಲಿನ ಇಂತಹ ಲಘು ಮಾತುಗಳಿಂದ ಬೇಸತ್ತ ಖುರೇಷಿ, ಈ ಬಗ್ಗೆ ಪ್ರಧಾನಿಗಳ ಪತ್ರಿಕಾ ಕಾರ್ಯದರ್ಶಿ ಹರೀಶ್ ಖರೆ ಅವರ ಬಳಿ ಅಸಮಾಧಾನ ತೋಡಿಕೊಂಡಿದ್ದರು.

ನವದೆಹಲಿ: 2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ವೇಳೆ ಚುನಾವಣಾ ಆಯೋಗ ಮತ್ತು ಕೇಂದ್ರದ ಕೆಲ ಕಾಂಗ್ರೆಸ್ ಸಚಿವರ ನಡುವೆ ಉಂಟಾದ ಸಂಘರ್ಷದಿಂದ ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ತೀವ್ರವಾಗಿ ಮನನೊಂದಿದ್ದರು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ
ಖುರೇಷಿ ಅವರು ಬರೆದಿರುವ, ಶೀಘ್ರದಲ್ಲೇ ಬಿಡುಗಡೆಯಾಗಲಿರುವ “India and I: A Hundred Memories, Not a Memoir” ಪುಸ್ತಕದಲ್ಲಿ ಈ ವಿಷಯವನ್ನು ಹಂಚಿಕೊಳ್ಳಲಾಗಿದೆ.
2012ರ ಜನವರಿಯಲ್ಲಿ ಉತ್ತರ ಪ್ರದೇಶ ಚುನಾವಣಾ ಪ್ರಚಾರದ ವೇಳೆ ಆಗಿನ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಮುಸ್ಲಿಮರಿಗೆ ಉದ್ಯೋಗ ಮೀಸಲಾತಿಯನ್ನು 4.5 ಶೇಕಡೆಯಿಂದ 9 ಶೇಕಡೆಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದರು.
ಈ ಹೇಳಿಕೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗದ ಮೊರೆ ಹೋಗಿತ್ತು. ಪ್ರಕರಣವನ್ನು ಪರಿಶೀಲಿಸಿದ ಚುನಾವಣಾ ಆಯೋಗ, ನೋಟಿಸ್ ನೀಡಿ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ಆಯೋಗದ ಈ ಕಠಿಣ ಕ್ರಮದಿಂದ ಆಕ್ರೋಶಗೊಂಡ ಕೆಲವು ಕಾಂಗ್ರೆಸ್ ನಾಯಕರು, ಚುನಾವಣಾ ಆಯೋಗವನ್ನು "ದುರಹಂಕಾರಿ ಮತ್ತು ಸ್ವೇಚ್ಛಾಚಾರಿ" ಎಂದು ಬಹಿರಂಗವಾಗಿ ಟೀಕಿಸಲು ಶುರು ಮಾಡಿದರು.
ಸಾಂವಿಧಾನಿಕ ಸಂಸ್ಥೆಯೊಂದರ ಮೇಲಿನ ಇಂತಹ ಲಘು ಮಾತುಗಳಿಂದ ಬೇಸತ್ತ ಖುರೇಷಿ, ಈ ಬಗ್ಗೆ ಪ್ರಧಾನಿಗಳ ಪತ್ರಿಕಾ ಕಾರ್ಯದರ್ಶಿ ಹರೀಶ್ ಖರೆ ಅವರ ಬಳಿ ಅಸಮಾಧಾನ ತೋಡಿಕೊಂಡಿದ್ದರು.
ಈ ಬೆಳವಣಿಗೆಗಳಿಂದ ಬೇಸರಗೊಂಡಿದ್ದ ಖುರೇಷಿ, ಒಂದು ಕಾರ್ಯಕ್ರಮದಲ್ಲಿ ಆಗಿನ ಪ್ರಧಾನಿಯ ಮಾಧ್ಯಮ ಸಲಹೆಗಾರ ಹರೀಶ್ ಖರೆ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಮರುದಿನವೇ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಕರೆ ಬಂದಿದ್ದು, ತುರ್ತಾಗಿ ಭೇಟಿಯಾಗುವಂತೆ ಆಹ್ವಾನಿಸಿದ್ದರು.
ಪ್ರಧಾನಿ ನಿವಾಸದಲ್ಲಿ ನಡೆದ ಭೇಟಿಯ ವೇಳೆ ಮನಮೋಹನ್ ಸಿಂಗ್, ಹರೀಶ್ ನೀವು ಹೇಳಿದ್ದನ್ನು ನನಗೆ ತಿಳಿಸಿದ್ದಾರೆ. ನೀವು ನಮ್ಮ ಸರ್ಕಾರದ ಬಗ್ಗೆ ಹಾಗೆ ಭಾವಿಸುವುದಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಚುನಾವಣಾ ಆಯೋಗವು ಕೇವಲ ಭಾರತದ ಹೆಮ್ಮೆಯಲ್ಲ, ಅದು ನಮ್ಮ ಪ್ರಜಾಪ್ರಭುತ್ವದ ಆತ್ಮ. ಅದನ್ನು ಕಳೆದುಕೊಂಡರೆ ನಾವು ಎಲ್ಲವನ್ನೂ ಕಳೆದುಕೊಂಡಂತೆ" ಎಂದು ಭಾವುಕರಾಗಿ ನುಡಿದದ್ದರು ಎಂದು ಖುರೇಷಿ ಬರೆದಿದ್ದಾರೆ.
ಪ್ರಧಾನಿ ಅವರ ಈ ಮಾತಿನಿಂದ ದಿಗ್ಭ್ರಮೆಗೊಂಡ ಖುರೇಷಿ, ತಮಗೆ ಪ್ರಧಾನಿಗಳ ಮೇಲೆ ಯಾವುದೇ ಕೋಪವಿಲ್ಲ, ಕೇವಲ ಕೆಲವು ಸಚಿವರ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಮಾತ್ರ ಬೇಸರವಿದೆ ಎಂದು ಸ್ಪಷ್ಟಪಡಿಸಿ ಡಾ. ಸಿಂಗ್ ಅವರನ್ನು ಸ್ಪಷ್ಟಪಡಿಸಿದ್ದಾಗಿ ಅವರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ಮನಮೋಹನ್ ಸಿಂಗ್, ಸಚಿವರು ಚುನಾವಣಾ ಆಯೋಗದ ವಿರುದ್ಧ ಆ ರೀತಿಯ ಹೇಳಿಕೆಗಳನ್ನು ನೀಡಿರುವ ವಿಷಯ ತಮಗೆ ತಿಳಿದಿರಲಿಲ್ಲ. ಆಗಿರುವ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದರು ಎಂದು ಖುರೇಷಿ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



