ರಾಜಕೀಯಕ್ಕೆ ಮತ್ತೊಬ್ಬ ಸ್ಟಾರ್ ನಟ! ಹೊಸ ಪಕ್ಷ ಕಟ್ಟುತ್ತಾರಾ ಸ್ಟೈಲಿಷ್ ಸ್ಟಾರ್?
ತೆಲುಗು ಚಿತ್ರರಂಗದಲ್ಲಿ ಪುಷ್ಪ ಚಿತ್ರದ ಮೂಲಕ ಜಾಗತಿಕ ಖ್ಯಾತಿಗೆ ಏರಿದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಶೀಘ್ರದಲ್ಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಈಗ ಎರಡೂ ತೆಲುಗು ರಾಜ್ಯಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಹೈದರಾಬಾದ್ (ತೆಲಂಗಾಣ): ಚಿತ್ರರಂಗಕ್ಕೂ ರಾಜಕೀಯಕ್ಕೂ ಮೊದಲಿಂದಲೂ ಒಂಥರಾ ಅವಿನಾಭಾವ ನಂಟು; ಈ ಹಿಂದೆ ರೆಬಲ್ ಸ್ಟಾರ್ ಅಂಬರೀಷ್ ಕಾಂಗ್ರೆಸ್ ಸೇರಿ ಕೇಂದ್ರ ಮಂತ್ರಿಯಾಗಿದ್ದರು. ಅನಂತ್ ನಾಗ್ ಜನತಾದಳದಿಂದ ರಾಜ್ಯದಲ್ಲಿ ಮಂತ್ರಿಯಾಗಿದ್ದರು. ಜೊತೆಗೆ ಟಾಲಿವುಡ್‌ನ ಎನ್. ಟಿ. ರಾಮರಾವ್ (NTR) ಅವರು ಅವಿಭಜಿತ ಆಂಧ್ರ ಪ್ರದೇಶ ಹಾಗೂ ಕೋಲಿವುಡ್‌ನ ಎಂ.ಜಿ. ರಾಮಚಂದ್ರನ್ (MGR) ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಇನ್ನು ತೀರಾ ಇತ್ತೀಚೆಗೆ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ವಿಭಜಿತ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಹಾಗೂ ದಳಪತಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಚುನಾಯಿತರಾಗಿ ಅಧಿಕಾರ ನಡೆಸುತ್ತಿದ್ದಾರೆ. ಇದರ ನಡುವೆಯೇ, ಮತೊಬ್ಬ ಸ್ಟಾರ್ ನಟ ರಾಜಕೀಯ ಪ್ರವೇಶದ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಆ ಕುರಿತ ವರದಿ ಇಲ್ಲಿದೆ.
ರಾಜಕೀಯಕ್ಕೆ ಸ್ಟೈಲಿಷ್ ಸ್ಟಾರ್?
ತೆಲುಗು ಚಿತ್ರರಂಗದಲ್ಲಿ ಪುಷ್ಪ ಚಿತ್ರದ ಮೂಲಕ ಜಾಗತಿಕ ಖ್ಯಾತಿಗೆ ಏರಿದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಶೀಘ್ರದಲ್ಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಈಗ ಎರಡೂ ತೆಲುಗು ರಾಜ್ಯಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ಹೌದು, ನಟ ದಳಪತಿ ವಿಜಯ್ ತಮ್ಮ ತಮಿಳು ವೆಟ್ರಿ ಕಳಗಂ ಪಕ್ಷದೊಂದಿಗೆ ತಮಿಳುನಾಡಿನಲ್ಲಿ ಯಶಸ್ವಿಯಾದಂತೆಯೇ, ಬನ್ನಿ ಕೂಡ ತಮ್ಮದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದಾರೆ ಎಂಬ ದೊಡ್ಡ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕಾಗಿ ಅಲ್ಲು ಅರ್ಜುನ್ ದೇಶದ ಅತ್ಯಂತ ಯಶಸ್ವಿ ರಾಜಕೀಯ ತಂತ್ರಜ್ಞ ಹಾಗು ರಾಜಕಾರಣಿ ಪ್ರಶಾಂತ್ ಕಿಶೋರ್ ಅವರೊಂದಿಗೆ ರಹಸ್ಯವಾಗಿ ಸಮಾಲೋಚನೆ ನಡೆಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಆಂಧ್ರ ಅಥವಾ ತೆಲಂಗಾಣ: ಪುಷ್ಪ ಆಯ್ಕೆ ಯಾವುದು?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಕಾರ ಅಲ್ಲು ಅರ್ಜುನ್ ಅವರು ತಮ್ಮದೇ ಆದ ರಾಜಕೀಯ ಪಕ್ಷವನ್ನು ಆರಂಭಿಸಲು ಯೋಚಿಸುತ್ತಿದ್ದಾರೆ. ಅದರಲ್ಲೂ, ಪುಷ್ಪ 2 ವೇಳೆ ತೆಲಂಗಾಣ ಕಾಂಗ್ರೆಸ್ ಸರ್ಕಾರದ ಜೊತೆ ಉಂಟಾದ ವಿವಾದಗಳಿಂದಾಗಿ ಅವರು ರೇವಂತ್ ರೆಡ್ಡಿ ಸರ್ಕಾರವನ್ನು ಗುರಿಯಾಗಿಸಿಕೊಂಡು ತೆಲಂಗಾಣದಲ್ಲಿ ರಾಜಕೀಯಕ್ಕೆ ಇಳಿಯುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು, ಹೈದರಾಬಾದ್ ನಿಜಾಮಾಬಾದ್ ಮತ್ತು ಖಮ್ಮಮ್ ನಂತಹ ಕಡೆಗಳಲ್ಲಿ ಅವರಿಗೆ ಇರುವ ದೊಡ್ಡ ಅಭಿಮಾನಿ ಬಳಗವೇ ಅವರಿಗೆ ಪ್ಲಸ್ ಆಗುತ್ತದೆ ಎಂಬುದು ಅವರ ವಾದ.
ಮತ್ತೊಂದೆಡೆ ಕೆಲವರು ಅಲ್ಲು ಅರ್ಜುನ್ ತಮ್ಮ ತವರು ರಾಜ್ಯವಾದ ಆಂಧ್ರಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯ ಪಡುತ್ತಿದ್ದಾರೆ. ಯಾಕಂದ್ರೆ, ಇಲ್ಲಿ ಅಲ್ಲು ಅರ್ಜುನ್ ಅವರ ಕಾಪು ಸಮುದಾಯದ ಗಟ್ಟಿ ಮತಬ್ಯಾಂಕ್ ಇದೆ.
ಆದರೆ ಈಗಾಗಲೇ ಪವನ್ ಕಲ್ಯಾಣ್ ಅವರು ಆಂಧ್ರದ ಉಪಮುಖ್ಯಮಂತ್ರಿಯಾಗಿ ಇದ್ದಾರೆ. ಇದರೊಂದಿಗೆ, ಈ ಹಿಂದಿನ ಚುನಾವಣೆಯಲ್ಲಿ ಅಲ್ಲು ಅರ್ಜುನ್ ಅವರು ವೈಎಸ್ಆರ್ಸಿಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದರಿಂದ ಮೆಗಾ ಅಭಿಮಾನಿಗಳ ಜೊತೆಗಿನ ವಿವಾದ ಇನ್ನೂ ಬಗೆಹರಿದಿಲ್ಲ. ಆದ್ದರಿಂದ ಅವರು ಈಗ ರಾಜಕೀಯಕ್ಕೆ ಬರುವುದು ಕಷ್ಟ ಎಂದು ಹೇಳಲಾಗುತ್ತಿದೆ.
ಅಲ್ಲು ಅರ್ಜುನ್ ಸ್ಪಷ್ಟನೆ ಏನು?
ಈ ಎಲ್ಲಾ ಊಹಾಪೋಹಗಳ ನಡುವೆ, ಅಲ್ಲು ಅರ್ಜುನ್ ಅವರ ಟೀಮ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, "ಸದ್ಯಕ್ಕೆ ಅಲ್ಲು ಅರ್ಜುನ್ ಅವರ ಗಮನ ಸಂಪೂರ್ಣವಾಗಿ ಸಿನಿಮಾಗಳ ಮೇಲೆ ಮಾತ್ರ ಇದೆ. ಪುಷ್ಪ 2 ಯಶಸ್ಸಿನ ನಂತರ ಅವರ ಕೈಯಲ್ಲಿ ಹಲವು ದೊಡ್ಡ ಪ್ರಾಜೆಕ್ಟ್ ಗಳು ಇವೆ. ಜೊತೆಗೆ ನಟನಾಗಿ ಇನ್ನೂ ಅನೇಕ ಪಾತ್ರಗಳನ್ನು ಮಾಡಬೇಕು ಎಂಬ ಆಸೆ ಅವರಿಗಿದೆ. ಆದ್ದರಿಂದ ರಾಜಕೀಯದ ಬಗ್ಗೆ ಅವರು ಈಗ ಯೋಚನೆ ಮಾಡುತ್ತಿಲ್ಲ" ಎಂದು ತಿಳಿಸಿದೆ.
ಒಟ್ಟಾರೆಯಾಗಿ ನೋಡಿದರೆ ಅಲ್ಲು ಅರ್ಜುನ್ ರಾಜಕೀಯ ಪ್ರವೇಶದ ಸುದ್ದಿ ಕೇವಲ ಸಾಮಾಜಿಕ ಮಾಧ್ಯಮದ ಊಹಾಪೋಹ ಮತ್ತು ಗಾಸಿಪ್ ಆಗಿದೆ. ಸದ್ಯಕ್ಕೆ ಅವರು ಸಿನಿಮಾಗಳ ಮೇಲೆ ಮಾತ್ರ ಗಮನ ಹರಿಸಿದ್ದಾರೆ. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



