ದೇಶ

ಭಾರತ-ಆಸ್ಟ್ರೇಲಿಯಾ ಸಂಬಂಧಕ್ಕೆ ಮತ್ತಷ್ಟು ಬಲ: ಮೋದಿ-ಅಲ್ಬನೀಸ್ ಮಹತ್ವದ ಸಭೆ; ಅಣುಶಕ್ತಿ ಸೇರಿ ಹಲವು ಕ್ಷೇತ್ರಗಳಲ್ಲಿ ಐತಿಹಾಸಿಕ ಒಪ್ಪಂದ..!

ಭಾರತ-ಆಸ್ಟ್ರೇಲಿಯಾ ನಡುವಿನ ವ್ಯಾಪಾರ, ಹೂಡಿಕೆ, ರಕ್ಷಣಾ ಸಹಕಾರ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಂಥನಿ ಅಲ್ಬನೀಸ್ ಅವರೊಂದಿಗೆ ಚರ್ಚೆ ನಡೆಸಿದರು.

ಭಾರತ-ಆಸ್ಟ್ರೇಲಿಯಾ ಸಂಬಂಧಕ್ಕೆ ಮತ್ತಷ್ಟು ಬಲ: ಮೋದಿ-ಅಲ್ಬನೀಸ್ ಮಹತ್ವದ ಸಭೆ; ಅಣುಶಕ್ತಿ ಸೇರಿ ಹಲವು ಕ್ಷೇತ್ರಗಳಲ್ಲಿ ಐತಿಹಾಸಿಕ ಒಪ್ಪಂದ..!
ಭಾರತದ ಪ್ರಧಾನಿ ಮೋದಿ-ಆಸ್ಟ್ರೇಲಿಯಾ ಪ್ರಧಾನಿ ಆಂಥನಿ ಅಲ್ಬನೀಸ್ ಮಾತುಕತೆ
Published On :

ನವದೆಹಲಿ: ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಆಸ್ಟ್ರೇಲಿಯಾ ಪ್ರಧಾನಿ ಆಂಥನಿ ಅಲ್ಬನೀಸ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಇಂಡೋನೇಷ್ಯಾ ಪ್ರವಾಸ ಮುಗಿಸಿ ಆಸ್ಟ್ರೇಲಿಯಾಗೆ ಆಗಮಿಸಿರುವ ಪ್ರಧಾನಿ ಮೋದಿ, ಭಾರತ-ಆಸ್ಟ್ರೇಲಿಯಾ ನಡುವಿನ ವ್ಯಾಪಾರ, ಹೂಡಿಕೆ, ರಕ್ಷಣಾ ಸಹಕಾರ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಂಥನಿ ಅಲ್ಬನೀಸ್ ಅವರೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ ಅಣುಶಕ್ತಿ, ಸಮುದ್ರ ಭದ್ರತೆ, ಪ್ರಮುಖ ಖನಿಜಗಳು, ರಕ್ಷಣಾ ಕ್ಷೇತ್ರ, ಸೈಬರ್ ತಂತ್ರಜ್ಞಾನ ಹಾಗೂ ಉದಯೋನ್ಮುಖ ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ಉಭಯ ದೇಶಗಳು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ.

ಮಾತುಕತೆ ಬಳಿಕ ಉಭಯ ದೇಶಗಳು ರಕ್ಷಣೆ ಮತ್ತು ಭದ್ರತೆ ಕುರಿತ ಜಂಟಿ ಘೋಷಣೆ ಬಿಡುಗಡೆ ಮಾಡಿದ್ದು, ಇಂಧನ ಸಹಕಾರ ಕುರಿತ ಜಂಟಿ ಹೇಳಿಕೆ, ಹಾಗೂ ಸೈಬರ್ ಭದ್ರತೆ, ಪ್ರಮುಖ ತಂತ್ರಜ್ಞಾನಗಳು ಮತ್ತು ಸ್ಥಿರ ಪೂರೈಕೆ ಸರಪಳಿಗೆ (Supply Chain) ಸಂಬಂಧಿಸಿದ ಸಹಕಾರದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿವೆ.

ಈ ಸಭೆಯ ಪ್ರಮುಖ ಫಲಿತಾಂಶವೆಂದರೆ ನಾಗರಿಕ ಬಳಕೆಯ ಅಣುಶಕ್ತಿ ಕ್ಷೇತ್ರದ ಒಪ್ಪಂದ. ಇದರ ಮೂಲಕ ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಣಿಜ್ಯ ಉದ್ದೇಶಕ್ಕಾಗಿ ಯುರೇನಿಯಂ ಪೂರೈಕೆಗೆ ದಾರಿ ತೆರೆಯಲಿದ್ದು, ಭಾರತದ ವಿಸ್ತರಿಸುತ್ತಿರುವ ಅಣು ವಿದ್ಯುತ್ ಯೋಜನೆಗಳಿಗೆ ಇದು ಬಲ ತುಂಬಲಿದೆ.

ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು, "ಅಣುಶಕ್ತಿ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದರಿಂದ ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ಪೂರೈಕೆ ಆರಂಭವಾಗಲಿದ್ದು, ನಮ್ಮ ಶುದ್ಧ ಇಂಧನ ಗುರಿಗಳಿಗೆ ಹೊಸ ಉತ್ತೇಜನ ಸಿಗಲಿದೆ" ಎಂದು ಹೇಳಿದರು.

ಪ್ರಮುಖ ಖನಿಜಗಳ ಸಹಕಾರದ ಬಗ್ಗೆ ಮಾತನಾಡಿದ ಅವರು, 'ಆಸ್ಟ್ರೇಲಿಯಾ-ಭಾರತ ಸೈಬರ್, ಪ್ರಮುಖ ತಂತ್ರಜ್ಞಾನ ಹಾಗೂ ಪೂರೈಕೆ ಸರಪಳಿ ಸಹಭಾಗಿತ್ವ' ಆರಂಭಿಸಿರುವುದಾಗಿ ತಿಳಿಸಿದರು. "ಪ್ರಮುಖ ಖನಿಜಗಳ ಕ್ಷೇತ್ರದಲ್ಲಿ ನಮ್ಮ ಸಹಕಾರವು ಕಾರ್ಯತಂತ್ರದ ಭದ್ರತೆ ಹಾಗೂ ಶುದ್ಧ ಇಂಧನ ಪರಿವರ್ತನೆಗೆ ಅತ್ಯಂತ ಮಹತ್ವದ್ದಾಗಿದೆ. ಉಭಯ ದೇಶಗಳು ಪ್ರಮುಖ ಖನಿಜಗಳ ಕಾರಿಡಾರ್ ಅಭಿವೃದ್ಧಿಪಡಿಸಲಿವೆ" ಎಂದು ಹೇಳಿದರು.

ರಕ್ಷಣಾ ಕ್ಷೇತ್ರದಲ್ಲೂ ಸಹಕಾರ ಹೆಚ್ಚಿಸಲು ಭಾರತ-ಆಸ್ಟ್ರೇಲಿಯಾ ರಕ್ಷಣಾ ನಾವೀನ್ಯತಾ ಕಾರಿಡಾರ್ (Defence Innovation Corridor) ಸ್ಥಾಪಿಸಲು ಉಭಯ ನಾಯಕರು ಒಪ್ಪಿಕೊಂಡಿದ್ದು, ಇದರ ಮೂಲಕ ಎರಡೂ ದೇಶಗಳ ರಕ್ಷಣಾ ಸ್ಟಾರ್ಟ್‌ಅಪ್‌ಗಳು ಹಾಗೂ ಕೈಗಾರಿಕೆಗಳ ನಡುವೆ ಸಹಭಾಗಿತ್ವ ಹೆಚ್ಚಲಿದೆ.

ಇಂಡೋ-ಪೆಸಿಫಿಕ್ ಪ್ರದೇಶದ ಕುರಿತು ಮಾತನಾಡಿದ ಮೋದಿ ಅವರು, "ಇಂಡೋ-ಪೆಸಿಫಿಕ್ ಕೇವಲ ಎರಡು ಸಾಗರಗಳ ಸಂಗಮವಲ್ಲ. ಇದು ಭಾರತ ಮತ್ತು ಆಸ್ಟ್ರೇಲಿಯಾದಂತಹ ಸಮಾನ ಮನೋಭಾವದ ಪ್ರಜಾಪ್ರಭುತ್ವ ರಾಷ್ಟ್ರಗಳ ಸಾಮೂಹಿಕ ಆಶಯಗಳ ಪ್ರತೀಕವಾಗಿದೆ" ಎಂದು ಹೇಳಿದರು.

ಇದೇ ವೇಳೆ ಭಾರತ-ಆಸ್ಟ್ರೇಲಿಯಾ ಸಮುದ್ರ ಭದ್ರತಾ ಸಹಕಾರ ಮಾರ್ಗಸೂಚಿ (Maritime Security Collaboration Roadmap) ಪ್ರಕಟಿಸಲಾಗಿದ್ದು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಮುದ್ರ ಭದ್ರತೆಯನ್ನು ಬಲಪಡಿಸಲು, ಹಡಗು ನಿರ್ಮಾಣ, ಹಡಗು ದುರಸ್ತಿ ಮತ್ತು ನಿರ್ವಹಣೆ ಕ್ಷೇತ್ರಗಳಲ್ಲೂ ಸಹಕಾರ ವಿಸ್ತರಿಸಲು ಉಭಯ ದೇಶಗಳು ನಿರ್ಧರಿಸಿವೆ.

ಭಯೋತ್ಪಾದನೆ ಒಂದು ದೇಶಕ್ಕಷ್ಟೇ ಅಲ್ಲ, ಇಡೀ ಮಾನವಕುಲಕ್ಕೆ ಸವಾಲು

ಭಯೋತ್ಪಾದನೆ ಕುರಿತು ಮಾತನಾಡಿದ ಮೋದಿ, "ಭಯೋತ್ಪಾದನೆ ಒಂದು ದೇಶಕ್ಕಷ್ಟೇ ಅಲ್ಲ, ಇಡೀ ಮಾನವಕುಲಕ್ಕೆ ಸವಾಲಾಗಿದೆ. ಆದ್ದರಿಂದ ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವೂ ಜಂಟಿಯಾಗಿದೆ. ನಮ್ಮ ಸಂಕಲ್ಪ ಅಚಲವಾಗಿದ್ದು, ಸಹಕಾರ ಮತ್ತಷ್ಟು ಬಲಗೊಳ್ಳಲಿದೆ" ಎಂದು ಹೇಳಿದರು.

ಜಾಗತಿಕ ಸಂಘರ್ಷಗಳನ್ನು ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆಗಳ ಮೂಲಕವೇ ಪರಿಹರಿಸಬೇಕು ಎಂದು ಪುನರುಚ್ಚರಿಸಿದ ಪ್ರಧಾನಿ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ, ನೌಕಾಯಾನ ಸ್ವಾತಂತ್ರ್ಯ ಮತ್ತು ನಿಯಮಾಧಾರಿತ ವ್ಯವಸ್ಥೆ ಬಲಪಡಿಸಲು ಭಾರತ ಹಾಗೂ ಆಸ್ಟ್ರೇಲಿಯಾ ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ಇದೇ ವೇಳೆ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (CECA) ಕುರಿತ ಮಾತುಕತೆಯನ್ನು ವೇಗಗೊಳಿಸಲು ಹಾಗೂ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.

ಆಸ್ಟ್ರೇಲಿಯಾ ಪ್ರಧಾನಿ ಆಂಥನಿ ಅಲ್ಬನೀಸ್ ಮಾತನಾಡಿ, "ಭಾರತವು ಆಸ್ಟ್ರೇಲಿಯಾದ ಅತ್ಯಂತ ಪ್ರಮುಖ ಕಾರ್ಯತಂತ್ರದ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ವ್ಯಾಪಾರ, ತಂತ್ರಜ್ಞಾನ, ಇಂಧನ ಮತ್ತು ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.