ದೇಶ

Wayanad landslide: ಪರಿಸರ ಸಂಘಟನೆಗಳ ವಿರೋಧಕ್ಕೆ ಬಲ, ಯೋಜನೆ ಅನುಷ್ಠಾನ ಬಗ್ಗೆ ಪ್ರಶ್ನೆ; Video

ಇದು ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುವ ವಿಷಯವಲ್ಲ. ಮಾನವ ಜೀವಗಳನ್ನು ಹಾಗೂ ದೇಶದ ಅತ್ಯಂತ ಸೂಕ್ಷ್ಮ ಪರ್ವತ ಪರಿಸರ ವ್ಯವಸ್ಥೆಗಳಲ್ಲಿ ಒಂದನ್ನು ರಕ್ಷಿಸುವ ವಿಚಾರವಾಗಿದೆ ಎಂದು ವಯನಾಡು ಪ್ರಕೃತಿ ಸಂರಕ್ಷಣಾ ಸಮಿತಿ (WPSS) ಅಧ್ಯಕ್ಷ ಎನ್. ಬಾದುಷಾ ಹೇಳುತ್ತಾರೆ.

Wayanad landslide: ಪರಿಸರ ಸಂಘಟನೆಗಳ ವಿರೋಧಕ್ಕೆ ಬಲ, ಯೋಜನೆ ಅನುಷ್ಠಾನ ಬಗ್ಗೆ ಪ್ರಶ್ನೆ; Video
ಭೂಕುಸಿತ ನಂತರ ಕಾರ್ಯಾಚರಣೆ
Published On :

ಕಲ್ಪೆಟ್ಟ: ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಸಂಭವಿಸಿದ ಮಣ್ಣಿನ ಕುಸಿತವು, ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾಗಿರುವ ವಯನಾಡಿನಲ್ಲಿ ಇಂತಹ ಬೃಹತ್ ಯೋಜನೆಯನ್ನು ಸುರಕ್ಷಿತವಾಗಿ ಅನುಷ್ಠಾನಗೊಳಿಸಬಹುದೇ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಎಬ್ಬಿಸಿದೆ.

ಈ ಘಟನೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಂಗ ನಿರ್ಮಾಣಕ್ಕೆ ಪರಿಸರ ಸಂಘಟನೆಗಳು ಬಹುಕಾಲದಿಂದ ವ್ಯಕ್ತಪಡಿಸುತ್ತಿರುವ ವಿರೋಧಕ್ಕೆ ಬಲ ನೀಡಿದ್ದು, ಯೋಜನೆಯ ಮೇಲೆ ನಿರಂತರ ಮೇಲ್ವಿಚಾರಣೆ ಅಗತ್ಯ ಎಂಬ ಬೇಡಿಕೆಯನ್ನು ಮತ್ತೊಮ್ಮೆ ಮುಂದಿಟ್ಟಿದೆ.

ಇದು ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುವ ವಿಷಯವಲ್ಲ. ಮಾನವ ಜೀವಗಳನ್ನು ಹಾಗೂ ದೇಶದ ಅತ್ಯಂತ ಸೂಕ್ಷ್ಮ ಪರ್ವತ ಪರಿಸರ ವ್ಯವಸ್ಥೆಗಳಲ್ಲಿ ಒಂದನ್ನು ರಕ್ಷಿಸುವ ವಿಚಾರವಾಗಿದೆ ಎಂದು ವಯನಾಡು ಪ್ರಕೃತಿ ಸಂರಕ್ಷಣಾ ಸಮಿತಿ (WPSS) ಅಧ್ಯಕ್ಷ ಎನ್. ಬಾದುಷಾ ಹೇಳುತ್ತಾರೆ.

ಈ ಮಣ್ಣಿನ ಕುಸಿತವು, ಇಂತಹ ಭೂಪ್ರದೇಶದಲ್ಲಿ ಬೃಹತ್ ಪ್ರಮಾಣದ ಉತ್ಖನನ ಯೋಜನೆ ಕೈಗೊಳ್ಳಬಾರದು ಎಂದು ನಾವು ಪದೇ ಪದೇ ಎಚ್ಚರಿಕೆ ನೀಡಿದ್ದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ವಯನಾಡು ಈಗಾಗಲೇ ಸಾಕಷ್ಟು ಪ್ರಕೃತಿ ವಿಕೋಪಗಳನ್ನು ಅನುಭವಿಸಿದೆ. ಇದರ ಬದಲು ಸರ್ಕಾರ ಈಗಿರುವ ಘಾಟ್ ರಸ್ತೆಗಳನ್ನು ಬಲಪಡಿಸಿ ಅಗಲಗೊಳಿಸಬೇಕಿತ್ತು. ಅದು ಹೆಚ್ಚು ಸುರಕ್ಷಿತ, ವೇಗವಾದ ಹಾಗೂ ಕಡಿಮೆ ವೆಚ್ಚದ ಪರಿಹಾರವಾಗುತ್ತಿತ್ತು ಎಂದು ಹೇಳಿದ್ದಾರೆ.

ಈ ಹಿಂದೆ ವಯನಾಡು ಪ್ರಕೃತಿ ಸಂರಕ್ಷಣಾ ಸಮಿತಿಯು 2,100 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಅವಳಿ ಸುರಂಗ ಯೋಜನೆಗೆ ನೀಡಲಾದ ಪರಿಸರ ಅನುಮತಿಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿತ್ತು. 2025ರ ಡಿಸೆಂಬರ್‌ನಲ್ಲಿ, ಪರಿಸರ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಕ್ರಮಬದ್ಧ ಲೋಪ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟ ಕೇರಳ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು.

ಹಿಂದಿನ ಎಲ್‌ಡಿಎಫ್ ಸರ್ಕಾರ ಮತ್ತು ಹಾಲಿ ಯುಡಿಎಫ್ ಸರ್ಕಾರ ಎರಡೂ ಈ ಯೋಜನೆಯನ್ನು ಸಮರ್ಥಿಸಿಕೊಂಡಿದ್ದು, ಅಪಘಾತಗಳಿಗೆ ಹೆಸರಾದ ತಾಮರಶ್ಶೇರಿ ಘಾಟ್ ಮಾರ್ಗವನ್ನು ಬದಿಗೊತ್ತಿ, ಕೋಝಿಕ್ಕೋಡ್–ವಯನಾಡು ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿವೆ.

ಆದರೆ, ಮಣ್ಣಿನ ಕುಸಿತದ ನಂತರ ಚರ್ಚೆಯ ಕೇಂದ್ರಬಿಂದು ಯೋಜನೆಯ ಅನುಷ್ಠಾನ, ಕಾರ್ಮಿಕರ ಸುರಕ್ಷತೆ ಹಾಗೂ ವಿಪತ್ತು ನಿರ್ವಹಣಾ ಸಿದ್ಧತೆಗಳತ್ತ ಗಮನ ಹರಿಸಲಾಗುತ್ತಿದೆ.

ಕಾನೂನುಬದ್ಧ ಅನುಮತಿಗಳು ಇದ್ದರೂ ಸಹ, ಭಾರೀ ಮಳೆ, ಅಸ್ಥಿರ ಇಳಿಜಾರು ಪ್ರದೇಶಗಳು ಹಾಗೂ ಮರುಕಳಿಸುತ್ತಿರುವ ಭೂಕುಸಿತಗಳಿಗೆ ಒಳಗಾಗುತ್ತಿರುವ ಇಂತಹ ಸೂಕ್ಷ್ಮ ಭೂಪ್ರದೇಶದಲ್ಲಿ ನಿರಂತರ ಮೇಲ್ವಿಚಾರಣೆ ಅತ್ಯಗತ್ಯ ಎಂದು ಪರಿಸರ ತಜ್ಞರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.