ಪಾಂಡವಾನಿ ದಂತಕಥೆ, ಪದ್ಮವಿಭೂಷಣ ಪುರಸ್ಕೃತೆ ತೀಜನ ಬಾಯಿ ನಿಧನ; ಪ್ರಧಾನಿ ಮೋದಿ ಸಂತಾಪ
ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ತೀಜನ ಬಾಯಿ ಅವರು ಮೇ 27ರಿಂದ ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಭಾನುವಾರ ನಸುಕಿನ ಜಾವ 3.15ಕ್ಕೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ರಾಯ್ಪುರ: ಛತ್ತೀಸ್‌ಗಢದ ಸಾಂಪ್ರದಾಯಿಕ ಪಾಂಡವಾನಿ ಜಾನಪದ ಕಥನಕಲೆಯನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿದ್ದ ಖ್ಯಾತ ಜಾನಪದ ಗಾಯಕಿ ತೀಜನ ಬಾಯಿ ಅವರು ದೀರ್ಘಕಾಲದ ಅನಾರೋಗ್ಯದ ಬಳಿಕ ಇಂದು ಭಾನುವಾರ ಬೆಳಗ್ಗೆ ರಾಯ್ಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ತೀಜನ ಬಾಯಿ ಅವರು ಮೇ 27ರಿಂದ ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಭಾನುವಾರ ನಸುಕಿನ ಜಾವ 3.15ಕ್ಕೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತೀಜನ ಬಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಛತ್ತೀಸ್‌ಗಢದ ಜಾನಪದ ಕಲೆಗೆ ವಿಶಿಷ್ಟ ಜಾಗತಿಕ ಗುರುತನ್ನು ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ದುರ್ಗ್ ಜಿಲ್ಲೆಯವರಾದ ತೀಜನ ಬಾಯಿ ಅವರನ್ನು, ಮಹಾಭಾರತದ ಪ್ರಸಂಗಗಳ ನಾಟಕೀಯ ನಿರೂಪಣೆ, ಗಾಯನ ಮತ್ತು ಸಂಗೀತದ ಮೂಲಕ ಪ್ರಸ್ತುತಪಡಿಸುವ ಛತ್ತೀಸ್‌ಗಢದ ಸಾಂಪ್ರದಾಯಿಕ ಜಾನಪದ ಕಲೆಯಾದ ಪಂಡವಾನಿಯ ಶ್ರೇಷ್ಠ ಪ್ರತಿನಿಧಿಯಾಗಿ ವ್ಯಾಪಕವಾಗಿ ಗುರುತಿಸಲಾಗುತ್ತಿತ್ತು. ಪಾಂಡವಾನಿ ಎಂದರೆ ಮಹಾಭಾರತದ ಕಥೆಗಳನ್ನು ಹಾಡು ಹಾಗೂ ಕಥೆಯ ರೂಪದಲ್ಲಿ ಹೇಳುವುದು.
ತಮ್ಮ ಪ್ರಬಲ ಧ್ವನಿ, ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿದ್ದ ಕಲೆಯಿಂದ ಅವರು ಪಾಂಡವಾನಿಯನ್ನು ಪ್ರಾದೇಶಿಕ ಜಾನಪದ ಕಲೆಯಿಂದ ಅಂತಾರಾಷ್ಟ್ರೀಯ ಖ್ಯಾತಿಯ ಕಲೆಯಾಗಿ ರೂಪಿಸಿದರು.
ಭಾರತ ಮತ್ತು ವಿದೇಶಗಳಲ್ಲಿ ಅವರ ಪ್ರದರ್ಶನಗಳು ಅಪಾರ ಮೆಚ್ಚುಗೆ ಗಳಿಸಿದ್ದವು. ಇದರಿಂದ ಅವರು ದೇಶದ ಅತ್ಯಂತ ಹೆಸರಾಂತ ಜಾನಪದ ಕಲಾವಿದೆಯರಲ್ಲಿ ಒಬ್ಬರಾಗಿದ್ದರು.
ಭಾರತೀಯ ಜಾನಪದ ಕಲೆಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಗೌರವಗಳನ್ನು ಪ್ರದಾನ ಮಾಡಲಾಗಿತ್ತು.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಖ್ಯಾತ ಪಂಡವಾನಿ ಗಾಯಕಿ ತೀಜನ ಬಾಯಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಅವರು ಛತ್ತೀಸ್‌ಗಢದ ಜಾನಪದ ಕಲೆಗೆ ವಿಶಿಷ್ಟ ಜಾಗತಿಕ ಗುರುತನ್ನು ತಂದುಕೊಟ್ಟರು. ಅವರ ನಿಧನವು ಕಲೆ ಮತ್ತು ಸಂಸ್ಕೃತಿಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



