ಮುಂಬೈನಲ್ಲಿ ಭಾರಿ ಮಳೆ: ಅಂಗಡಿ ಮೇಲೆ ಮರ ಬಿದ್ದು ವ್ಯಕ್ತಿ ಸಾವು; ಮುಂಗಾರು ಸಂಬಂಧಿತ ಸಾವಿನ ಸಂಖ್ಯೆ 3ಕ್ಕೆ ಏರಿಕೆ, Video
ಭಾರೀ ಮಳೆಯ ನಡುವೆಯೇ ಮುಂಬೈನ ಕುರ್ಲಾ ಪ್ರದೇಶದಲ್ಲಿ ಅಂಗಡಿಯೊಂದರ ಮೇಲೆ ಮರ ಉರುಳಿ ಬಿದ್ದ ಪರಿಣಾಮ 63 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಗಾರು ಅಬ್ಬರ ಮುಂದುವರೆದಿದ್ದು ವಾಣಿಜ್ಯ ನಗರಿ ಮುಂಬೈನಲ್ಲಿ ಭಾರಿ ಮಳೆಗೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ.
ಭಾರೀ ಮಳೆಯ ನಡುವೆಯೇ ಮುಂಬೈನ ಕುರ್ಲಾ ಪ್ರದೇಶದಲ್ಲಿ ಅಂಗಡಿಯೊಂದರ ಮೇಲೆ ಮರ ಉರುಳಿ ಬಿದ್ದ ಪರಿಣಾಮ 63 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಕಳೆದ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಮುಂಗಾರಿಗೆ ಸಂಬಂಧಿಸಿದಂತೆ ನಗರದಲ್ಲಿ ಸಂಭವಿಸಿರುವ ಮೂರನೇ ಸಾವಿನ ಘಟನೆ ಇದಾಗಿದೆ ಎಂದು ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಸುಮಾರು 12.40 ಗಂಟೆಗೆ, ಕುರ್ಲಾ ಪಶ್ಚಿಮದ ನೌಪಾಡಾ ಪ್ರದೇಶದಲ್ಲಿರುವ ಹಿಂದಿ ಬಿಎಂಸಿ ಶಾಲೆ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಯೂನಸ್ ಕುಂದಾವಾಲಾ (63) ಎಂದು ಗುರುತಿಸಲಾಗಿದೆ. ಅವಶೇಷಗಳಡಿ ಸಿಲುಕಿದ್ದ ಅವರನ್ನು ರಕ್ಷಿಸಿ ಫೌಜಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರನ್ನು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು, ಬೆಸ್ಟ್ (BEST) ಸಿಬ್ಬಂದಿ ಹಾಗೂ ಬಿಎಂಸಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಮತ್ತು ಅವಶೇಷ ತೆರವು ಕಾರ್ಯ ನಡೆಸಿದರು.
ಕೆಲವೇ ದಿನಗಳ ಹಿಂದೆ, ಜೂನ್ 30ರಂದು ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದ ಪರಿಣಾಮ 11 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
ನಿರಂತರ ಭಾರೀ ಮಳೆಯ ನಡುವೆ ಕಳೆದ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಮುಂಬೈನಲ್ಲಿ ಮರ ಉರುಳಿ ಬಿದ್ದ ಪರಿಣಾಮ ಸಂಭವಿಸಿರುವ ಮೂರನೇ ಮಾರಣಾಂತಿಕ ಘಟನೆ ಇದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



