Guillain-Barre Syndrome ಗೆ ಮಧ್ಯಪ್ರದೇಶದಲ್ಲಿ 2 ಸಾವು! ಏನಿದು ಸೋಂಕು? ಹೇಗೆ ಹರಡುತ್ತದೆ?
ಮಧ್ಯಪ್ರದೇಶದ ನೀಮಚ್ ನ ಕೆಲವು ಪ್ರದೇಶಗಳಲ್ಲಿ ಗೀಲನ್ ಬಾ ಸಿಂಡ್ರೋಮ್ (ಜಿಬಿಎಸ್) ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದ್ದು, ಜಿಬಿಎಸ್‌ನಿಂದ ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೋಪಾಲ್: ದೇಶದಲ್ಲಿ ಮತ್ತೆ ಜಿಬಿಎಸ್ ಮಹಾಮಾರಿ ಅಬ್ಬರ ಆರಂಭಿಸಿದ್ದು, ಮಧ್ಯಪ್ರದೇಶದಲ್ಲಿ ಇಬ್ಬರು ಈ ಗಿಲಿಯನ್ ಬಾರ್ ಸಿಂಡ್ರೋಮ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಮಧ್ಯಪ್ರದೇಶದ ನೀಮಚ್ ನ ಕೆಲವು ಪ್ರದೇಶಗಳಲ್ಲಿ ಗೀಲನ್ ಬಾ ಸಿಂಡ್ರೋಮ್ (ಜಿಬಿಎಸ್) ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದ್ದು, ಜಿಬಿಎಸ್‌ನಿಂದ ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀಮಚ್ ನ ಮಾನಸ ಪಟ್ಟಣದಲ್ಲಿ ಒಂದು ಡಜನ್‌ಗೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಅಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ಮತ್ತು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಜಿಬಿಎಸ್ ರೋಗಿಗಳಿಗೆ ವಿಶೇಷ ವಾರ್ಡ್ ಸ್ಥಾಪಿಸಲು ಸೂಚಿಸಲಾಗಿದೆ.
ಡಿಸಿಎಂ ಭೇಟಿ
ಇನ್ನು ಶನಿವಾರ ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಮಾನಸ ಪಟ್ಟಣಕ್ಕೆ ಉಪಮುಖ್ಯಮಂತ್ರಿ ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ರಾಜೇಂದ್ರ ಶುಕ್ಲಾ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಜನವರಿ 12 ರಂದು ಮಾನಸ ಪಟ್ಟಣದಲ್ಲಿ ಮೊದಲ ಜಿಬಿಎಸ್ ಪ್ರಕರಣಗಳು ಪತ್ತೆಯಾಗಿವೆ. ಅವರನ್ನು ಜೈಪುರ ಮತ್ತು ಅಹಮದಾಬಾದ್‌ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ' ಎಂದು ತಿಳಿಸಿದ್ದಾರೆ.
ಸುಮಾರು 35,000 ಜನಸಂಖ್ಯೆಯನ್ನು ಹೊಂದಿರುವ ಈ ಪಟ್ಟಣದಲ್ಲಿ ಇದುವರೆಗೆ 14 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ದುರದೃಷ್ಟವಶಾತ್ ಇಬ್ಬರು ಮೃತಪಟ್ಟಿದ್ದಾರೆ. ರೋಗಿಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಮಾನಸ ಪಟ್ಟಣದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು, ಸರ್ಕಾರಿ ಆಸ್ಪತ್ರೆಯಲ್ಲಿ ಜಿಬಿಎಸ್ ರೋಗಿಗಳಿಗೆ ವಿಶೇಷ ವಾರ್ಡ್ ರಚಿಸಲು, ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲು, ಔಷಧ ಮತ್ತು ಚುಚ್ಚುಮದ್ದಿನ ಸಾಕಷ್ಟು ದಾಸ್ತಾನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಜಿಬಿಎಸ್ ಹರಡುವಿಕೆಯನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾನಸ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜನರ ಆರೋಗ್ಯ ಪರಿಶೀಲಿಸಲು ಮನೆ-ಮನೆಗೆ ತೆರಳಿ ತಪಾಸಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ರೋಗವು ಕೆಲವೊಮ್ಮೆ ಸರಿಯಾಗಿ ಬೇಯಿಸದ ಕೋಳಿ ಮಾಂಸ, ಪಾಶ್ಚರೀಕರಿಸದ ಡೈರಿ ಅಥವಾ ಕೊಳಚೆ ನೀರಿನಿಂದ ಕಲುಷಿತಗೊಂಡ ನೀರನ್ನು ಸೇವಿಸುವುದರಿಂದ ಉಂಟಾಗುತ್ತದೆ. ರೋಗಿಗಳ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಏನಿದು ಸೋಂಕು? ಹೇಗೆ ಹರಡುತ್ತದೆ?
ಜಿಬಿಎಸ್ ಎಂದರೆ ಗೀಲನ್ ಬಾ ಸಿಂಡ್ರೋಮ್ ಅಥವಾ ಗಿಲಿಯನ್ ಬಾರ್ ಸಿಂಡ್ರೋಮ್ ಎಂದು. ಇದು ದೇಹದ ಪ್ರತಿರೋಧ ವ್ಯವಸ್ಥೆಯು ನರಮಂಡಲದ ಮೇಲೆ ದಾಳಿ ಮಾಡುವ ವಿಚಿತ್ರ ಕಾಯಿಲೆ ಇದು. ಪಾದಗಳು ಮತ್ತು ಕೈಗಳು ಜೋಮು ಹಿಡಿಯುವುದರೊಂದಿಗೆ ಜಿಬಿಎಸ್ ಆರಂಭವಾಗುತ್ತದೆ. ನಂತರದಲ್ಲಿ ಸ್ನಾಯು ದೌರ್ಬಲ್ಯ ಉಂಟಾಗಿ, ಕೀಲುಗಳಲ್ಲಿ ಭಾರಿ ನೋವು ಕಾಣಿಸಿಕೊಳ್ಳುತ್ತದೆ.
ಎರಡರಿಂದ ನಾಲ್ಕು ವಾರಗಳಲ್ಲಿ ಭುಜ ಮತ್ತು ಕಾಲುಗಳಿಗೆ ನೋವು ಹರಡುವುದರೊಂದಿಗೆ ಲಕ್ಷಣಗಳು ತೀವ್ರಗೊಳ್ಳುತ್ತವೆ. ರೋಗದ ತೀವ್ರತೆ, ಚಿಕಿತ್ಸೆಯ ಲಭ್ಯತೆ ಮತ್ತು ಗುಣಮಟ್ಟವನ್ನು ಆಧರಿಸಿ ಮರಣದ ಪ್ರಮಾಣವು ಶೇ 3ರಿಂದ ಶೇ 7ರವರೆಗೆ ಇರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಮಳೆಗಾಲದಲ್ಲಿ, ಕೋಳಿಗಳು ಮತ್ತು ಬಾತುಕೋಳಿಗಳ ಹಿಕ್ಕೆಗಳಿಂದ ಮಲಿನಗೊಂಡಿದ್ದ ನೀರಿನಲ್ಲಿ ಆಡಿದ ಮಕ್ಕಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡ ನಿದರ್ಶನಗಳಿವೆ. ಕಲುಷಿತ ನೀರಿನಲ್ಲಿ ತಯಾರಿಸಿದ ಆಹಾರ, ತಿಂಡಿ ತಿನ್ನುವುದು, ಕೋಳಿ ಮಾಂಸವನ್ನು ಅರೆಬರೆ ಬೇಯಿಸಿ ತಿನ್ನುವುದು ಕೂಡ ಸೋಂಕಿಗೆ ಕಾರಣವಾಗಬಹುದು ಎಂದಿದ್ದಾರೆ ವೈದ್ಯರು.
ಇದು ತೀರಾ ಅಪಾಯಕಾರಿ ಕಾಯಿಲೆ ಅಲ್ಲ. ಆದರೆ, ಈ ರೋಗಕ್ಕೆ ನಿರ್ದಿಷ್ಟ ಔಷಧ ಇಲ್ಲದಿರುವುದರಿಂದ ಜನ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳಿತು ಎನ್ನುವುದು ತಜ್ಞರ ಎಚ್ಚರಿಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




