ದೇಶ

ಅಂಕಿತಾ ಭಂಡಾರಿ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಉತ್ತರಾಖಂಡ ಸಿಎಂ ಶಿಫಾರಸು

ಅಂಕಿತಾ ಪೋಷಕರ ಭಾವನೆಗಳನ್ನು ಗೌರವಿಸಿ, ಉತ್ತರಾಖಂಡ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ ಎಂದು ಧಾಮಿ ಘೋಷಿಸಿದ್ದಾರೆ.

ಅಂಕಿತಾ ಭಂಡಾರಿ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಉತ್ತರಾಖಂಡ ಸಿಎಂ ಶಿಫಾರಸು
ಅಂಕಿತಾ ಭಂಡಾರಿ ಹಾಗೂ ಪುಲ್ಕಿತ್ ಆರ್ಯ
Published On :

ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಶುಕ್ರವಾರ 2022 ರಲ್ಲಿ ನಡೆದ 19 ವರ್ಷದ ರೆಸಾರ್ಟ್ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದು, ರಾಜ್ಯ ಸರ್ಕಾರದ ಉದ್ದೇಶ ಸಂಪೂರ್ಣವಾಗಿ ಸ್ಪಷ್ಟವಾಗಿದೆ ಮತ್ತು ಯಾವುದೇ ಸತ್ಯ ಅಥವಾ ಪುರಾವೆಗಳನ್ನು ಕಡೆಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಅಂಕಿತಾ ಪೋಷಕರು ಧಾಮಿ ಅವರನ್ನು ಭೇಟಿಯಾಗಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡಿದ್ದಾರೆ. ಅಂಕಿತಾ ಪೋಷಕರ ಭಾವನೆಗಳನ್ನು ಗೌರವಿಸಿ, ಉತ್ತರಾಖಂಡ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ ಎಂದು ಧಾಮಿ ಘೋಷಿಸಿದ್ದಾರೆ.

ಅಂಕಿತಾ ಅವರ ತಂದೆ ವೀರೇಂದ್ರ ಸಿಂಗ್ ಭಂಡಾರಿ ಮತ್ತು ತಾಯಿ ಸೋನಿ ದೇವಿ ಅವರು ಬುಧವಾರ ರಾತ್ರಿ ಸಿಎಂ ಧಾಮಿ ಅವರನ್ನು ಭೇಟಿಯಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಯಿಂದ ಪ್ರಕರಣದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

ನ್ಯಾಯವನ್ನು ಖಚಿತಪಡಿಸುವುದು ಸರ್ಕಾರದ ಉದ್ದೇಶವಾಗಿದೆ ಮತ್ತು ಪ್ರಕರಣ ತನಿಖೆ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ತಮ್ಮ ಸರ್ಕಾರದ ಉದ್ದೇಶ ಸಂಪೂರ್ಣವಾಗಿ ಸ್ಪಷ್ಟವಾಗಿದೆ ಮತ್ತು ಯಾವುದೇ ಸತ್ಯ ಅಥವಾ ಪುರಾವೆಗಳನ್ನು ಕಡೆಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

"ಅಂಕಿತಾ ಕೇವಲ ಬಲಿಪಶುವಲ್ಲ, ಅವರು ನಮ್ಮ ಸಹೋದರಿ ಮತ್ತು ಮಗಳು ಕೂಡ ಆಗಿದ್ದರು" ಎಂದು ಧಾಮಿ ಹೇಳಿದ್ದಾರೆ.

2022 ರಲ್ಲಿ, ಪೌರಿಯ ವನಂತ್ರ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿದ್ದ 19 ವರ್ಷದ ಅಂಕಿತಾ ಭಂಡಾರಿ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಅವರ ಇಬ್ಬರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದರು ಮತ್ತು ಪ್ರಕರಣದಲ್ಲಿ ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಆದರೆ ಇತ್ತೀಚಿಗೆ ಅಂಕಿತಾ ಕೊಲೆ ಪ್ರಕರಣದಲ್ಲಿ "ವಿಐಪಿ"ಯೊಬ್ಬರ ಪಾತ್ರವಿದೆ ಎಂದು ಆಡಿಯೋ ಕ್ಲಿಪ್ ವೊಂದರಲ್ಲಿ ಬಹಿರಂಗವಾದ ನಂತರ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನು ಉಂಟುಮಾಡಿದ್ದು, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದವು ಮತ್ತು ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದವು.

ಶಾಸಕ ಸುರೇಶ್ ರಾಥೋಡ್ ಅವರ ಪತ್ನಿ ಎಂದು ಹೇಳಿಕೊಂಡ ನಟಿ ಉರ್ಮಿಳಾ ಸನಾವರ್ ಅವರು ಈ ಕೊಲೆಯಲ್ಲಿ 'ವಿಐಪಿ'ಯೊಬ್ಬರ ಭಾಗಿಯಾಗಿದ್ದಾರೆ ಎಂದು ಆರೋಪಿಸಿದಾಗಿನಿಂದ, 2022ರ ಅಂಕಿತಾ ಕೊಲೆ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಲಾಗಿತ್ತು.

ಅಂಕಿತಾ ಕೊಲೆ ಪ್ರಕರಣದಲ್ಲಿ 'ವಿಐಪಿ'ಯೊಬ್ಬರ ಭಾಗಿಯಾಗಿದ್ದಾರೆಂದು ಆರೋಪಿಸಿ, ರಾಥೋಡ್ ಅವರೊಂದಿಗೆ ನಡೆಸಲಾದ ಸಂಭಾಷಣೆಯ ವಿಡಿಯೋಗಳು ಮತ್ತು ಆಡಿಯೊ ರೆಕಾರ್ಡಿಂಗ್‌ಗಳನ್ನು ನಟಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದರು.

ಮತ್ತೊಂದು ವಿಡಿಯೋದಲ್ಲಿ, ಆ 'ವಿಐಪಿ' ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಎಂದು ಅವರು ಹೇಳಿಕೊಂಡಿದ್ದಾರೆ. ಅಂದಿನಿಂದ, ಅವರ ಮತ್ತು ರಾಥೋಡ್ ವಿರುದ್ಧ ಡೆಹ್ರಾಡೂನ್ ಮತ್ತು ಹರಿದ್ವಾರದಲ್ಲಿ ಹಲವಾರು ಎಫ್‌ಐಆರ್‌ಗಳು ದಾಖಲಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.