ದೇಶ

16 ಸಿಮ್‌, 8 ಫೋನ್‌, 1 ಡೆಡ್ಲಿ ಪ್ಲಾಟ್: ಪಾಕ್ ಬೆಂಬಲಿತ ಉಗ್ರರ ಸಂಚನ್ನು ದೆಹಲಿ ಪೊಲೀಸರು ಬೇಧಿಸಿದ್ದು ಹೇಗೆ?

ಫೆಬ್ರವರಿ 7-8 ರಂದು ದೆಹಲಿ ಮತ್ತು ಕೋಲ್ಕತ್ತಾದ ಹಲವು ಮೆಟ್ರೋ ನಿಲ್ದಾಣಗಳಲ್ಲಿ "ಕಾಶ್ಮೀರ ಮುಕ್ತ" ಮತ್ತು "ಕಾಶ್ಮೀರದಲ್ಲಿ ನರಮೇಧ ನಿಲ್ಲಿಸಿ" ಎಂಬ ಘೋಷಣೆಯುಳ್ಳ ಪೋಸ್ಟರ್‌ಗಳು ಕಂಡುಬಂದಿದ್ದವು.

16 ಸಿಮ್‌, 8 ಫೋನ್‌, 1 ಡೆಡ್ಲಿ ಪ್ಲಾಟ್: ಪಾಕ್ ಬೆಂಬಲಿತ ಉಗ್ರರ ಸಂಚನ್ನು ದೆಹಲಿ ಪೊಲೀಸರು ಬೇಧಿಸಿದ್ದು ಹೇಗೆ?
ದೆಹಲಿ ಪೊಲೀಸರ ವಿಶೇಷ ದಳ 10 ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಪ್ರಮುಖ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದೆ
Published On :

ನವದೆಹಲಿ: ದೆಹಲಿ ಪೊಲೀಸರ ವಿಶೇಷ ದಳವು 10 ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಪ್ರಮುಖ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದೆ. ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಯೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಘಟಕವನ್ನು ಭೇದಿಸಿ ಎಂಟು ಶಂಕಿತರನ್ನು ಬಂಧಿಸಿದ್ದಾರೆ. ಅವರಲ್ಲಿ ಏಳು ಮಂದಿ ಬಾಂಗ್ಲಾದೇಶದ ಪ್ರಜೆಗಳಾಗಿದ್ದಾರೆ.

ಏನಿದು ಕಾರ್ಯಾಚರಣೆ: ಫೆಬ್ರವರಿ 7-8 ರಂದು ದೆಹಲಿ ಮತ್ತು ಕೋಲ್ಕತ್ತಾದ ಹಲವು ಮೆಟ್ರೋ ನಿಲ್ದಾಣಗಳಲ್ಲಿ "ಕಾಶ್ಮೀರ ಮುಕ್ತ" ಮತ್ತು "ಕಾಶ್ಮೀರದಲ್ಲಿ ನರಮೇಧ ನಿಲ್ಲಿಸಿ" ಎಂಬ ಘೋಷಣೆಯುಳ್ಳ ಪೋಸ್ಟರ್‌ಗಳು ಕಂಡುಬಂದಿದ್ದವು. ಭದ್ರತಾ ಏಜೆನ್ಸಿಗಳು ಆಲರ್ಟ್ ಆದ ನಂತರ ಈ ವಿಷಯದ ತನಿಖೆಗಾಗಿ ದೆಹಲಿ ಪೊಲೀಸ್ ವಿಶೇಷ ಘಟಕವನ್ನು ಕಳುಹಿಸಲಾಗಿತ್ತು.

ಆರಂಭದಲ್ಲಿ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಉಮರ್ ಫಾರೂಕ್ ಮತ್ತು ರೋಬಿಲ್ ಉಲ್ ಇಸ್ಲಾಂ ಎಂದು ಗುರುತಿಸಲಾದ ಇಬ್ಬರು ಶಂಕಿತರನ್ನು ಬಂಧಿಸಲಾಯಿತು. ಅವರ ಮೊಬೈಲ್ ಫೋನ್‌ಗಳಲ್ಲಿ ಪತ್ತೆಯಾದ ವಿಷಯದ ಆಧಾರದ ಮೇಲೆ, ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ಹೆಚ್ಚಿನ ಶಂಕಿತರು ಅಡಗಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತು.

ಮುಂದಿನ ಹಂತದಲ್ಲಿ, ಪೊಲೀಸರು ಉತ್ತುಕುಳಿಯಿಂದ ಇಬ್ಬರು, ಪಲ್ಲಡಂನಿಂದ ಮೂವರು ಮತ್ತು ತಿರುಪ್ಪೂರ್ ಜಿಲ್ಲೆಯ ತಿರುಮುರುಗನಪೂಂಡಿಯಿಂದ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಅವರನ್ನು ಮಿಜಾನೂರ್ ರೆಹಮಾನ್, ಮಹಮ್ಮದ್ ಶಬತ್, ಉಮರ್, ಮೊಹಮ್ಮದ್ ಲಿಟಾನ್, ಮೊಹಮ್ಮದ್ ಶಾಹಿದ್ ಮತ್ತು ಮೊಹಮ್ಮದ್ ಉಜ್ಜಲ್ ಎಂದು ಗುರುತಿಸಲಾಗಿದೆ. ಎಲ್ಲರೂ ಗಾರ್ಮೆಂಟ್ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ನಕಲಿ ಆಧಾರ್ ಕಾರ್ಡ್ ಬಳಸುತ್ತಿದ್ದರು. ಇವರಿಂದ ಎಂಟು ಮೊಬೈಲ್ ಫೋನ್ ಗಳು ಮತ್ತು 16 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಾಂಗ್ಲಾದೇಶ ಮತ್ತು ಪಾಕಿಸ್ತಾನದೊಂದಿಗಿನ ಸಂಪರ್ಕ: ಸಂಪೂರ್ಣ ಭಯೋತ್ಪಾದಕ ಮಾಡ್ಯೂಲ್ ಅನ್ನು ಬಾಂಗ್ಲಾದೇಶದಿಂದ ನಿರ್ವಹಿಸಲಾಗುತ್ತಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಶಬ್ಬೀರ್ ಅಹಮದ್ ಲೋನ್ ಎಂಬ ಹ್ಯಾಂಡ್ಲರ್ ಸೂಚನೆ ನೀಡುತ್ತಿದ್ದ. ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದಕ್ಕಾಗಿ 2007ರಲ್ಲಿ ಶಬ್ಬೀರ್ ಅವರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಆತ ಹೊರಗೆ ಬಂದು ಭಾರತ ತೊರೆದು ಎಲ್ಇಟಿ ಸೇರಿದ್ದಎನ್ನಲಾಗಿದೆ.

ಬಾಂಗ್ಲಾದೇಶದಲ್ಲಿ ತನ್ನ ನೆಲೆ ಸ್ಥಾಪಿಸಿಕೊಂಡಿದ್ದ ಶಬ್ಬೀರ್ ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿದ್ದ. ದೆಹಲಿ ಪೊಲೀಸ್ ವಿಶೇಷ ಘಟಕದಿಂದ ಬಂಧಿಸಲ್ಪಟ್ಟ ಶಂಕಿತರು ಬಾಂಗ್ಲಾದೇಶದ ಇನ್ನೊಬ್ಬ ಹ್ಯಾಂಡ್ಲರ್ ಸೈದುಲ್ ಇಸ್ಲಾಂನೊಂದಿಗೆ ಸಂಪರ್ಕದಲ್ಲಿದ್ದ. ಆತ ಪ್ರಸ್ತುತ ಬೇರೆ ದೇಶದಲ್ಲಿ ನೆಲೆಸಿದ್ದಾರೆಂದು ನಂಬಲಾಗಿದೆ.

ತನಿಖಾ ಏಜೆನ್ಸಿಗಳು ಆರೋಪಿಗಳ ಮೊಬೈಲ್‌ನಿಂದ ವಿವಿಧ ಸ್ಥಳಗಳ ದೃಶ್ಯಗಳು ಮತ್ತು ಪೋಟೋಗಳನ್ನು ವಶಪಡಿಸಿಕೊಂಡಿವೆ. ಕೆಲವು ವೀಡಿಯೊಗಳಲ್ಲಿ ಶಸ್ತ್ರಾಸ್ತ್ರ ಖರೀದಿಸುವ ಪ್ರಯತ್ನ ನಡೆಸಿರುವುದು ಇದೆ. ಈ ವ್ಯಕ್ತಿಗಳು ದೇಶದ ವಿವಿಧ ಭಾಗಗಳಲ್ಲಿ ದೊಡ್ಡ ದಾಳಿ ನಡೆಸಲು ಯೋಜಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಇತ್ತೀಚೆಗಷ್ಟೇ ಎಲ್‌ಇಟಿ ಭಾರತದಲ್ಲಿ ದೊಡ್ಡ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ವರದಿ ಮಾಡಿದ್ದವು.

ಕಾರ್ಯಾಚರಣೆ ಮುಂದುವರಿದಿದೆ: ದೆಹಲಿ ಪೊಲೀಸ್ ವಿಶೇಷ ಘಟಕದ ಈ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಈ ಮಾಡ್ಯೂಲ್‌ನ ಇತರ ಕೆಲವು ಸದಸ್ಯರು ಸಕ್ರಿಯರಾಗಿದ್ದಾರೆ ಎನ್ನಲಾಗಿದೆ. ಪೋಸ್ಟರ್ ಘಟನೆಯು ಇಡೀ ನೆಟ್‌ವರ್ಕ್ ಬಗ್ಗೆ ಸುಳಿವು ನೀಡಿತು ಮತ್ತು ಕ್ರಮೇಣ ಸಂಪೂರ್ಣ ಮಾಡ್ಯೂಲ್ ಅನ್ನು ಭೇದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಎಲ್ಲ ಆರೋಪಿಗಳನ್ನು ದೆಹಲಿಗೆ ಕರೆತರಲಾಗುತ್ತಿದೆ. ಹಣ, ವಿದೇಶಿ ಸಂಪರ್ಕಗಳು ಮತ್ತು ಸಂಭಾವ್ಯ ದಾಳಿ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.