ಪುಲ್ವಾಮಾ ದಾಳಿಗೆ 7 ವರ್ಷ: 40 ಯೋಧರ ಬಲಿದಾನ; ಆ 'ಕರಾಳ ದಿನ' ನಡೆದದ್ದೇನು? ಭಾರತ ಪ್ರತಿಕ್ರಿಯಿಸಿದ್ದು ಹೇಗೆ?
ರಜೆ ಮುಗಿಸಿ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧರು ಸೇರಿದಂತೆ ಒಟ್ಟು 2547 ಸಿಆರ್‌ಪಿಎಫ್ ಯೋಧರು 78 ವಾಹನಗಳಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದರು. ಆಗಲೇ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿ ಈ ಭೀಕರ ದಾಳಿ ನಡೆಯಿತು.

ನವದೆಹಲಿ: ಪ್ರತಿ ವರ್ಷ ಪ್ರೇಮಿಗಳ ದಿನವನ್ನಾಗಿ (Lovers Day) ಆಚರಿಸುವ ಪ್ರತಿಯೊಬ್ಬರಿಗೂ ಇದು ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನ ಎನ್ನುವುದೂ ಕೂಡ ನೆನಪಿಗೆ ಬರುತ್ತದೆ.
ಇದೇ ದಿನ ಸರಿಯಾಗಿ 6 ವರ್ಷಗಳ ಹಿಂದೆ ಭಾರತೀಯ ಸೇನೆ (Indian Army) ಭದ್ರತಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ಸಿಆರ್‌ಪಿಎಫ್ (CRPF) ಯೋಧರು ಹುತಾತ್ಮರಾಗಿದ್ದರು. ಆ ದಿನ ನಡೆದ ಘಟನೆಯನ್ನು ಕೇಳಿ ಇಡೀ ದೇಶವೇ ಆಘಾತಕ್ಕೆ ಒಳಗಾಗಿತ್ತು.
ರಜೆ ಮುಗಿಸಿ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧರು ಸೇರಿದಂತೆ ಒಟ್ಟು 2547 ಸಿಆರ್‌ಪಿಎಫ್ ಯೋಧರು 78 ವಾಹನಗಳಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದರು. ಆಗಲೇ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿ ಈ ಭೀಕರ ದಾಳಿ ನಡೆಯಿತು.
ಆತ್ಮಾಹುತಿ ದಾಳಿಕೋರನೊಬ್ಬ 100 ಕೆ.ಜಿ. ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಯೋಧರ ಬಸ್‌ಗೆ ಬಂದು ಗುದ್ದಿಸಿದ್ದ. ಈ ಸ್ಫೋಟದ ತೀವ್ರತೆಗೆ ಕಾರು ಮತ್ತು ಬಸ್ ಗುರುತೇ ಸಿಗದಂತೆ ನಜ್ಜುಗುಜ್ಜಾಗಿದ್ದವು. ಯೋಧರ ಮೃತದೇಹಗಳು 100 ಮೀಟರ್ ವ್ಯಾಪ್ತಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಿಂದಿನಿಂದ ಬರುತ್ತಿದ್ದ ಇತರ ಬಸ್‌ಗಳಿಗೂ ಸ್ಫೋಟದಿಂದ ಹಾನಿಯಾಗಿತ್ತು.
ಸಂಪೂರ್ಣವಾಗಿ ಜಖಂಗೊಂಡ ಬಸ್ 76ನೇ ಬೆಟಾಲಿಯನ್‌ಗೆ ಸೇರಿದ್ದಾಗಿದ್ದು, ಅದರಲ್ಲಿ 40 ಯೋಧರಿದ್ದರು. ಕೇರಳದ ವಸಂತಕುಮಾರ್ 82ನೇ ಬೆಟಾಲಿಯನ್ ಯೋಧರಾಗಿದ್ದರು. ಪುಲ್ವಾಮಾದ ಕಾಕಪೋರಾ ನಿವಾಸಿ ಆದಿಲ್ ಅಹ್ಮದ್ ಈ ಆತ್ಮಾಹುತಿ ದಾಳಿ ನಡೆಸಿದ್ದ. ಘಟನೆ ನಡೆದ ಆರು ದಿನಗಳ ನಂತರ, ಕಾಶ್ಮೀರ ಪೊಲೀಸರಿಂದ ರಾಷ್ಟ್ರೀಯ ತನಿಖಾ ದಳ (NIA) ತನಿಖೆಯನ್ನು ವಹಿಸಿಕೊಂಡಿತು.
ಈ ಉಗ್ರ ದಾಳಿ ಸಂಚು ರೂಪಿಸಿದ್ದು 23 ವರ್ಷದ ಜೈಶ್-ಎ-ಮೊಹಮ್ಮದ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಎಂಬುದು ತನಿಖೆಯಿಂದ ಬಯಲಾಯಿತು. ನಂತರ ನಡೆದ ಎನ್‌ಕೌಂಟರ್‌ನಲ್ಲಿ ಸೇನೆ ಆತನನ್ನು ಹತ್ಯೆ ಮಾಡಿತ್ತು.
ಲೋಕಸಭಾ ಚುನಾವಣೆಗೂ ಎರಡು ತಿಂಗಳು ಮುಂಚೆ ಈ ದಾಳಿ ನಡೆದಿದ್ದರಿಂದ, ರಾಜಕೀಯವಾಗಿಯೂ ಇದು ದೊಡ್ಡ ಚರ್ಚೆಗೆ ಕಾರಣವಾಯಿತು.
ಈ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪಕ್ಷಭೇದ ಮರೆತು ರಾಜಕೀಯ ನಾಯಕರು, ಸಮಾಜದ ಗಣ್ಯರು ಘಟನೆಯನ್ನು ಖಂಡಿಸಿದರು. ಪ್ರಧಾನಿ ಮೋದಿ ಈ ದಾಳಿ ನಂತರ ನನ್ನ ಹೃದಯದೊಳಗೆ ಸಹ ಅದೇ ರೀತಿ ದಾಳಿ ಮಾಡಬೇಕೆಂಬ ಆಕ್ರೋಶ ಕುದಿಯುತ್ತಿದೆ ಎಂದು ಹೇಳಿದ್ದರು.
ಯೋಧರನ್ನು ಕಳೆದುಕೊಂಡ ದುಃಖದ ಕಣ್ಣೀರಿಗೆ ಪ್ರತೀಕಾರ ಖಂಡಿತಾ ತೀರಿಸುತ್ತೇವೆ. ಶತ್ರುಗಳ ಜೊತೆ ಪ್ರತೀಕಾರ ತೀರಿಸಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಘೋಷಿಸಿದ್ದರು.
ಪುಲ್ವಾಮಾ ದಾಳಿಯನ್ನು ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನಾದ್ಯಂತ ದೇಶಗಳು ಖಂಡಿಸಿ ಭಾರತಕ್ಕೆ ಉಗ್ರರ ವಿರುದ್ಧ ದಾಳಿಯಲ್ಲಿ ಬೆಂಬಲ ಸೂಚಿಸಿದ್ದವು. ಪಾಕಿಸ್ತಾನದ ಮಿತ್ರರಾಷ್ಟ್ರ ಚೀನಾ ಕೂಡ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಕ್ಕೆ ಬೆಂಬಲ ಸೂಚಿಸಿ ಇದೊಂದು ಹೇಡಿ ಕೃತ್ಯ ಎಂದು ಟೀಕಿಸಿತ್ತು.
ಈ ಭೀಕರ ದಾಳಿ ನಂತರ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಬೇಕೆಂಬ ಭಾರತದ ರಾಜತಾಂತ್ರಿಕ ಪ್ರಯತ್ನ ಕೊನೆಗೆ ಕಳೆದ ವರ್ಷ ಮೇ 1ರಂದು ಕಾರ್ಯರೂಪಕ್ಕೆ ಬಂತು.
ಈ ಪುಲ್ವಾಮಾ ದಾಳಿ ನಡೆದು ಸರಿಯಾಗಿ 12 ದಿನಗಳ ನಂತರ ಭಾರತ ಪ್ರತೀಕಾರ ತೀರಿಸಿಕೊಂಡಿತು. ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರರ ತರಬೇತಿ ಕೇಂದ್ರವನ್ನು ಭಾರತೀಯ ವಾಯುಸೇನೆ ಮಿಂಚಿನ ಕಾರ್ಯಾಚರಣೆಯಲ್ಲಿ ಧ್ವಂಸಗೊಳಿಸಿತು. ಈ ವೈಮಾನಿಕ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.
ಜಮ್ಮು-ಕಾಶ್ಮೀರದಲ್ಲಿ ಹೈಅಲರ್ಟ್
ಏತನ್ಮದ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಎಲ್ಲೆಡೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಭಾವ್ಯ ದಾಳಿಯನ್ನು ತಡೆಗಟ್ಟಲು ಈ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ಜನರ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



