ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಶುದ್ಧೀಕರಣ: ಅಟ್ರಾಸಿಟಿ ಕಾಯ್ದೆಯಡಿ FIR ದಾಖಲಿಸಲು ರಾಹುಲ್ ಗಾಂಧಿ ಒತ್ತಾಯ! Video
ಇಂದಿರಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಂಧಿ, ಶುದ್ಧೀಕರಣ ವಿಧಾನವನ್ನು ಅಸ್ಪೃಶ್ಯತೆಯ ಆಚರಣೆ ಮತ್ತು ಸಂವಿಧಾನದ ಉಲ್ಲಂಘನೆ ಎಂದು ಹೇಳಿದರು.

ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಶುದ್ಧೀಕರಣ ನಡೆಸಿದ ಬಿಜೆಪಿ ನಾಯಕರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ (FIR) ದಾಖಲಿಸಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಒತ್ತಾಯಿಸಿದರು.
ಇಂದಿರಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಂಧಿ, ಶುದ್ಧೀಕರಣ ವಿಧಾನವನ್ನು ಅಸ್ಪೃಶ್ಯತೆಯ ಆಚರಣೆ ಮತ್ತು ಸಂವಿಧಾನದ ಉಲ್ಲಂಘನೆ ಎಂದು ಹೇಳಿದರು. ದಲಿತರ ಘನತೆ ಮತ್ತು ಪ್ರಗತಿಯನ್ನು ವಿರೋಧಿಸುವ "ಬಿಜೆಪಿ-ಆರ್‌ಎಸ್‌ಎಸ್ ಮನಸ್ಥಿತಿ"ಯನ್ನು ಈ ಘಟನೆ ಪ್ರತಿಬಿಂಬಿಸುತ್ತದೆ ಎಂದರು.
ಖರ್ಗೆ ಅವರು ಆಗಸ್ಟ್ 8 ರಂದು ಹಲ್ದ್ವಾನಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಎರಡು ದಿನಗಳ ನಂತರ, ಶ್ರೀ ರಾಮ್ ಸೇನೆಯ ಸದಸ್ಯರು ಅದೇ ಸ್ಥಳದಲ್ಲಿ "ಶುದ್ಧೀಕರಣ ಹವನ" ನಡೆಸಿದ್ದಾರೆ ಎಂದು ವರದಿಯಾಗಿದೆ.
ಖರ್ಗೆ ಅವರ ದಲಿತ ಹಿನ್ನೆಲೆಯನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಈ ವಿಧಾನವು ಜಾತಿ ಆಧಾರಿತ ತಾರತಮ್ಯಕ್ಕೆ ಸಮಾನವಾಗಿದೆ ಎಂದು ಆರೋಪಿಸಿದೆ. ಈ ಘಟನೆಯು ತಮಗೆ "ಅಸ್ಪೃಶ್ಯತೆಯ ನೋವು" ಉಂಟುಮಾಡಿದೆ ಎಂದು ಹೇಳುವ ಮೂಲಕ ಖರ್ಗೆ ಈ ವಿಷಯವನ್ನು ಈ ಹಿಂದೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದರು.
ಜಾತಿ ತಾರತಮ್ಯವನ್ನು ಹೋಗಲಾಡಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಪ್ರಶ್ನಿಸಿದ ಗಾಂಧಿ, ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು. ಬಿಜೆಪಿ ಈ ಶುದ್ಧೀಕರಣ ಘಟನೆಯಿಂದ ಅಂತರ ಕಾಯ್ದುಕೊಂಡಿದೆ.
ಬಿಜೆಪಿ ಅಧ್ಯಕ್ಷ ಮತ್ತು ಸದನದ ನಾಯಕ ಜೆ.ಪಿ. ನಡ್ಡಾ ಅವರು ಈ ಘಟನೆಯನ್ನು "ನೋವಿನ ಮತ್ತು ಸ್ವೀಕಾರಾರ್ಹವಲ್ಲ ಎಂದು ಖಂಡಿಸಿದ್ದರು. ಹಾಗೂ ಕಾರ್ಯಕ್ರಮ ಆಯೋಜಕರೊಂದಿಗೆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ, ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್, ಶುದ್ಧೀಕರಣ ಘಟನೆ ಖರ್ಗೆ ಅವರ ಜಾತಿಗಿಂತ ಹೆಚ್ಚಾಗಿ ಅಲ್ಲಿನ ರಾಜಕೀಯ ವಾತಾವರಣ ಮತ್ತು ಅಲ್ಲಿ ಕೂಗಲಾದ ಘೋಷಣೆಗಳಿಗೆ ಸಂಬಂಧಿಸಿದೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಈ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಅವರು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



