ಕಾರು ತೊಳೆಯೋಕೆ ಸರ್ಕಾರಿ ಅಗ್ನಿಶಾಮಕ ವಾಹನ ಬಳಕೆನಾ?: BJP ಶಾಸಕ ವಿರುದ್ಧ ಗಂಭೀರ ಆರೋಪ; Video
ಮೂವರು ಅಗ್ನಿಶಾಮಕ ಸಿಬ್ಬಂದಿ ಪೈಪ್ ಹಿಡಿದು ನಿವಾಸದ ಹೊರಗೆ ನಿಲ್ಲಿಸಿದ್ದ ಇನ್ನೋವಾ ಕಾರಿಗೆ ನೀರು ಸಿಂಪಡಿಸುತ್ತಿರುವುದು ವಿಡಿಯೊದಲ್ಲಿದೆ.

ಮಧ್ಯಪ್ರದೇಶ: ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಬಿಜೆಪಿ ಶಾಸಕರೊಬ್ಬರ ಅಧಿಕೃತ ನಿವಾಸದ ಹೊರಗೆ ಅವರ ಖಾಸಗಿ ಕಾರನ್ನು ತೊಳೆಯಲು ಸರ್ಕಾರಿ ಅಗ್ನಿಶಾಮಕ ವಾಹನವನ್ನು ಬಳಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ವೈಯಕ್ತಿಕ ಉದ್ದೇಶಗಳಿಗಾಗಿ ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮಂಗಳವಾರ ದಾಖಲಾಗಿದೆ ಎನ್ನಲಾದ ಈ ವೀಡಿಯೊದಲ್ಲಿ, ಬಿಲೌಂಜಿಯಲ್ಲಿರುವ ಬಿಜೆಪಿ ಶಾಸಕ ರಾಮ್‌ನಿವಾಸ್ ಶಾ ಅವರ ಅಧಿಕೃತ ನಿವಾಸದ ಹೊರಗೆ ಅಗ್ನಿಶಾಮಕ ವಾಹನವೊಂದು ನಿಂತಿರುವುದು ಕಂಡುಬರುತ್ತದೆ. ಮೂವರು ಅಗ್ನಿಶಾಮಕ ಸಿಬ್ಬಂದಿ ಪೈಪ್ ಹಿಡಿದು ನಿವಾಸದ ಹೊರಗೆ ನಿಲ್ಲಿಸಿದ್ದ ಇನ್ನೋವಾ ಕಾರಿಗೆ ನೀರು ಸಿಂಪಡಿಸುತ್ತಿರುವುದು ವಿಡಿಯೊದಲ್ಲಿದೆ.
ಈ ಇನ್ನೋವಾ ಕಾರು ಸಿಂಗ್ರೌಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ರಾಮ್‌ನಿವಾಸ್ ಶಾ ಅವರಿಗೆ ಸೇರಿದ್ದು ಎನ್ನಲಾಗಿದೆ. ಶಾಸಕರ ನಿವಾಸದಲ್ಲಿ ಅಗ್ನಿಶಾಮಕ ವಾಹನ ಏಕಿತ್ತು ಮತ್ತು ಖಾಸಗಿ ವಾಹನವನ್ನು ತೊಳೆಯಲು ಅದನ್ನು ಬಳಸಲಾಗುತ್ತಿತ್ತೇ ಎಂಬ ಪ್ರಶ್ನೆಗಳನ್ನು ಎತ್ತಿದೆ. ಆದರೆ, ಯಾರ ಸೂಚನೆಯ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಅಲ್ಲಿದ್ದರು ಅಥವಾ ಯಾವ ಪರಿಸ್ಥಿತಿಯಲ್ಲಿ ವಾಹನವನ್ನು ಬಳಸಲಾಗುತ್ತಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ವಿಡಿಯೊ ಕುರಿತು ಶಾಸಕ ರಾಮ್ ನಿವಾಸ್ ಶಾ ಅವರಾಗಲಿ ಅಥವಾ ಸಂಬಂಧಪಟ್ಟ ಇಲಾಖೆಯಾಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
‘ಕಾರು ತೊಳೆಯಲು ಅಗ್ನಿಶಾಮಕ ವಾಹನವೇ?’
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡಿದ್ದು, ಸರ್ಕಾರಿ ವಾಹನದ ದುರುಪಯೋಗದ ಬಗ್ಗೆ ಹಲವು ಬಳಕೆದಾರರು ಪ್ರಶ್ನಿಸಿದ್ದಾರೆ.
ಒಬ್ಬ ಬಳಕೆದಾರ ವ್ಯಂಗ್ಯವಾಗಿ, "ಇಂತಹ ಸವಲತ್ತುಗಳನ್ನು ನೋಡಿಯೇ ನನಗೂ ಕೆಲವೊಮ್ಮೆ ಶಾಸಕನಾಗಬೇಕು ಎನಿಸುತ್ತದೆ... ಇಲ್ಲದಿದ್ದರೆ ಸಭೆಯಲ್ಲಿ ನಿದ್ರೆ ಮಾಡಿ ಸಮಯ ಕಳೆಯುತ್ತಿದ್ದೆ " ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬ ಬಳಕೆದಾರ, "ಇತರ ದೇಶಗಳಲ್ಲಿ ಅಗ್ನಿಶಾಮಕ ವಾಹನಗಳನ್ನು ಬೆಂಕಿ ನಂದಿಸಲು ಬಳಸಲಾಗುತ್ತದೆ; ನಮ್ಮ ದೇಶದಲ್ಲಿ ಬಿಜೆಪಿ ಶಾಸಕರ ಇನ್ನೋವಾ ಕಾರುಗಳನ್ನು ತೊಳೆಯಲು ಬಳಸಲಾಗುತ್ತದೆ!" ಎಂದಿದ್ದಾರೆ. ಮತ್ತೊಬ್ಬರು, ಮಧ್ಯಪ್ರದೇಶದ ಜನರು ಇದಕ್ಕಾಗಿಯೇ ಮತ ಹಾಕಿದ್ದು ಎಂದು ಕಾಮೆಂಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


