'ನಿಮಗೆ ಹಿಂದೂ ಸಂಸ್ಕೃತಿ ಗೊತ್ತಿಲ್ಲವೇ?': ಶಾರ್ಟ್ಸ್ ಧರಿಸಿದ್ದ ಹುಡುಗಿಯರ ಮೇಲೆ ಪುಣೆ ಕೋಟೆಯಲ್ಲಿ ಹಲ್ಲೆ; 8 ಮಂದಿ ವಿರುದ್ಧ ಕೇಸು ದಾಖಲು; Video
ಹಲ್ಲೆ ಹಾಗೂ ಗಲಭೆ ನಡೆಸಿದ ಆರೋಪದಡಿ ‘ಸಮಸ್ತ ಹಿಂದೂ ಬಂಧವ್ ಆರ್ಮಿ’ ಸಂಘಟನೆಯ ಎಂಟು ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 5ರ ಅವಧಿಯಲ್ಲಿ ನಾಲ್ಕು ಪ್ರತ್ಯೇಕ ಪ್ರವಾಸಿಗರ ಗುಂಪುಗಳ ಮೇಲೆ ಹಲ್ಲೆ ನಡೆದಿದೆ.

ಮಹಾರಾಷ್ಟ್ರದ ಪುಣೆಯ ಐತಿಹಾಸಿಕ ಸಿಂಹಗಢ ಕೋಟೆಯಲ್ಲಿ ಶಾರ್ಟ್ಸ್ ಹಾಗೂ ತೋಳುಗಳಿಲ್ಲದ ಉಡುಪು ಧರಿಸಿದ್ದಕ್ಕೆ ಮಹಿಳೆ ಸೇರಿದಂತೆ ನಾಲ್ವರು ಪ್ರವಾಸಿಗರ ಮೇಲೆ ಬಲಪಂಥೀಯ ಸಂಘಟನೆಯ ಸದಸ್ಯರು ಮೊನ್ನೆ ಭಾನುವಾರ ಮಧ್ಯಾಹ್ನ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಲ್ಲೆ ಹಾಗೂ ಗಲಭೆ ನಡೆಸಿದ ಆರೋಪದಡಿ ‘ಸಮಸ್ತ ಹಿಂದೂ ಬಂಧವ್ ಆರ್ಮಿ’ ಸಂಘಟನೆಯ ಎಂಟು ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 5ರ ಅವಧಿಯಲ್ಲಿ ನಾಲ್ಕು ಪ್ರತ್ಯೇಕ ಪ್ರವಾಸಿಗರ ಗುಂಪುಗಳ ಮೇಲೆ ಹಲ್ಲೆ ನಡೆದಿದೆ.
ಮೂವರು ಮಹಿಳೆಯರು ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹವೇಲಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಜೇಶ್ ರಾಮಘರೆ ತಿಳಿಸಿದ್ದಾರೆ.
ಪ್ರಕರಣದ ದೂರುದಾರರಾದ ಪುಣೆಯ ಖಾಸಗಿ ಸಂಸ್ಥೆಯೊಂದರ 39 ವರ್ಷದ ಹಿರಿಯ ವ್ಯವಸ್ಥಾಪಕರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕೋಟೆಗೆ ಹೋಗಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಸೇನಾ ದಂಡನಾಯಕ ತಾನಾಜಿ ಮಾಲುಸರೆ ಅವರ ಸ್ಮಾರಕಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದಾಗ, ಪುರುಷರು ಮತ್ತು ಮಹಿಳೆಯರಿದ್ದ ಗುಂಪೊಂದು ಅವರನ್ನು ತಡೆದು ಅವರು ಧರಿಸಿದ್ದ ಉಡುಪು ಬಗ್ಗೆ ಪ್ರಶ್ನಿಸಿದೆ.
ನೀವು ಶಾರ್ಟ್ಸ್ ಏಕೆ ಧರಿಸಿದ್ದೀರಿ ಎಂದು ಕೇಳಿದರು ಗುಂಪಿನಲ್ಲಿದ್ದ ಮೂವರು ಪುರುಷರು ಅವರಿಗೆ ಕಪಾಳಮೋಕ್ಷ ಮಾಡಿದ್ದು, ಓರ್ವ ಮಹಿಳೆ ಅವರ ಪತ್ನಿಯನ್ನು ಎಳೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಿಮಗೆ ಹಿಂದೂ ಸಂಸ್ಕೃತಿ ಅರ್ಥವಾಗುವುದಿಲ್ಲವೇ?’ ಎಂದು ಅವರು ನಿರಂತರವಾಗಿ ಕೂಗುತ್ತಿದ್ದರು ಎಂದು ದೂರುದಾರರು ತಿಳಿಸಿದ್ದಾರೆ.
ಕೋಟೆಯಿಂದ ಕೆಳಗಿಳಿದ ಬಳಿಕ ದೂರುದಾರರ ಗುಂಪು ಪೊಲೀಸ್ ಗಸ್ತು ತಂಡಕ್ಕೆ ಮಾಹಿತಿ ನೀಡಿತು. ಪೊಲೀಸರು ಅವರನ್ನು ಹವೇಲಿ ಪೊಲೀಸ್ ಠಾಣೆಗೆ ತೆರಳುವಂತೆ ಸೂಚಿಸಿದರು. ಠಾಣೆಗೆ ತೆರಳಿದಾಗ, ಮತ್ತೊಂದು ಮಹಿಳೆ ಸೇರಿದಂತೆ ಪ್ರತ್ಯೇಕ ಗುಂಪುಗಳ ಮೂವರು ಪ್ರವಾಸಿಗರ ಮೇಲೂ ಇದೇ ದಾಳಿಕೋರರು ಹಲ್ಲೆ ನಡೆಸಿದ್ದು, ಕಪಾಳಮೋಕ್ಷ ಮಾಡಿ ಪ್ಲಾಸ್ಟಿಕ್ ರಾಡ್‌ಗಳಿಂದ ಹೊಡೆದಿದ್ದಾರೆ ಎಂದು ದೂರುದಾರರಿಗೆ ತಿಳಿಸಿದ್ದಾರೆ.
ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು, ಅಪಾಯಕಾರಿ ಆಯುಧ ಅಥವಾ ಸಾಧನ ಬಳಸಿ ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು, ಕಾನೂನುಬಾಹಿರವಾಗಿ ಗುಂಪುಗೂಡುವುದು, ಗಲಭೆ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣದಲ್ಲಿ ಹೆಸರು ದಾಖಲಿಸಲಾದ ಎಂಟು ಆರೋಪಿಗಳನ್ನು ಸಂಕೇತ್ ಸಂಜಯ್ ಪಾಟೀಲ್, ಆಶಿಷ್ ದಿಲೀಪ್ ಅಪರ್, ರೇವಣ್ ನಾರಾಯಣ್ ಕೊಕ್ತೆ, ಸಯಾಲಿ ಸುಜಿತ್ ಚವಾಣ್, ಕೇತಕಿ ಸೂರಜ್ ಜಾಧವ್, ಅಮರ್ ರಾಮಚಂದ್ರ ಶಿರ್ಕೆ, ಕುನಾಲ್ ಕಿಸಾನ್ ನಲವಾಡೆ ಹಾಗೂ ಆರ್ಯ ಪ್ರವೀಣ್ ಕವಾಡೆ ಎಂದು ಪೊಲೀಸರು ಗುರುತಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಸಿಂಹಗಢ ಕೋಟೆಯ ಪ್ರವೇಶದ್ವಾರದಲ್ಲಿ ಕೆಲವರು “ಈ ಕೋಟೆ ಹಿಂದೂಗಳಿಗೆ ಸೇರಿದ್ದು, ಮುಸ್ಲಿಮರಿಗೆ ಪ್ರವೇಶವಿಲ್ಲ” ಎಂದು ಬರೆದಿದ್ದ ಪೋಸ್ಟರ್‌ವೊಂದನ್ನು ಹಾಕಿದ್ದರು. ಬಳಿಕ ಅರಣ್ಯ ಇಲಾಖೆ ಆ ಪೋಸ್ಟರ್‌ನ್ನು ತೆರವುಗೊಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



