NEET ಪ್ರತಿಭಟನೆ: ಪೊಲೀಸ್ ದೌರ್ಜನ್ಯ, ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಸುಪ್ರೀಂಕೋರ್ಟ್!
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಅವರ ನೇತೃತ್ವದಲ್ಲಿ ಐವರು ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯೊಂದನ್ನು ಸುಪ್ರೀಂ ಕೋರ್ಟ್ ರಚಿಸಿದೆ.

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ NEET ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಸಗಿದ್ದಾರೆನ್ನಲಾದ ದೌರ್ಜನ್ಯಗಳು ಹಾಗೂ ಪೊಲೀಸ್ ಸಿಬ್ಬಂದಿಯ ಮೇಲಿನ ಹಲ್ಲೆ ಘಟನೆಗಳ ಕುರಿತು ಪರಿಶೀಲಿಸಲು, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಅವರ ನೇತೃತ್ವದಲ್ಲಿ ಐವರು ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯೊಂದನ್ನು ಸುಪ್ರೀಂ ಕೋರ್ಟ್ ರಚಿಸಿದೆ.
ಈ ಸಮಿತಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರವಿ ಶಂಕರ್ ಝಾ, ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಶಾಲಿಂದರ್ ಕೌರ್, ಸಿಬಿಐನ ಮಾಜಿ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಮತ್ತು ಮೇಘಾಲಯದ ನಿವೃತ್ತ ಡಿಜಿಪಿ ಎಲ್.ಆರ್. ಬಿಷ್ಣೋಯಿ ಕೂಡ ಸದಸ್ಯರಾಗಿರುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ ತಿಳಿಸಿತು.
"ಸಮಿತಿಯ ಪ್ರತಿಯೊಬ್ಬ ಸದಸ್ಯರ ವೈಯಕ್ತಿಕ ಪರಿಣತಿ ಮತ್ತು ಅನುಭವ ಸೇರಿದಂತೆ ವಿವಿಧ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಉನ್ನತ ಮಟ್ಟದ ತನಿಖಾ ಸಮಿತಿಯನ್ನು (HPEC) ರಚಿಸಲಾಗಿದೆ. ಈ ಸಮಿತಿಯ ಶಿಫಾರಸುಗಳು ನ್ಯಾಯಾಲಯಕ್ಕೆ ಅತ್ಯಮೂಲ್ಯವಾದ ನೆರವನ್ನು ನೀಡಲಿವೆ ಮತ್ತು ಸೂಕ್ತ ಪರಿಶೀಲನೆಯ ಅಗತ್ಯವಿರುವ ಎಲ್ಲಾ ವಿಷಯಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲು ಸಮಿತಿಗೆ ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಪೀಠವು ಹೇಳಿದೆ.
ಅಲ್ಲದೇ, ಈ ಸಮಿತಿಯು ನಡೆಸುವ ತನಿಖೆಯು ಕೇವಲ ಒಂದು ಬಾರಿಯ ಪ್ರಕ್ರಿಯೆಯಾಗಿರುವುದಿಲ್ಲ. ಸಂಬಂಧಿತ ವಿಷಯಗಳ ಕುರಿತು ನಿರಂತರ ಮತ್ತು ಆಗಾಗ್ಗೆ ಪರಿಶೀಲನೆ ನಡೆಸುವಂತೆ ಹಾಗೂ ಕಾಲಕಾಲಕ್ಕೆ ತಮ್ಮ ಮಧ್ಯಂತರ ವರದಿಗಳನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ಕೆಲವು ವಿಷಯಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸುವಂತೆ ಸಮಿತಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಇದರಲ್ಲಿ ಮಹಿಳಾ ಪ್ರತಿಭಟನಾಕಾರರ ವಿರುದ್ಧ ಉದ್ದೇಶಪೂರ್ವಕ ಹಿಂಸಾಚಾರ, ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪಗಳಿಗೆ ಸಂಬಂಧಿಸಿದ ವಿಷಯವು ಪ್ರಮುಖವಾಗಿದೆ.
"ಅಂತೆಯೇ ಸಮಿತಿತಿಯು ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯಿಂದ ಪ್ರತಿಭಟನಾಕಾರರಿಗೆ ಉಂಟಾಗಿದೆ ಎನ್ನಲಾದ ಗಂಭೀರ ಹಾನಿ ಮತ್ತು ಗಾಯವನ್ನು ನಿರ್ಣಯಿಸಬಹುದು ಮತ್ತು ಅಂತಹ ಮಿತಿಮೀರಿದ ಕ್ರಮಗಳಿಗೆ ಆದೇಶ ನೀಡಿದವರು ಯಾರು? ಎಂಬುದು ಸೇರಿದಂತೆ ಯಾವುದೇ ಕಾನೂನುಗಳು, ನಿಯಮಗಳು ಅಥವಾ ಮಾನದಂಡಗಳ ಉಲ್ಲಂಘನೆಯಾಗಿದೆಯೇ ಎಂಬ ಅಂಶಗಳನ್ನು ತನಿಖೆ ಮಾಡಬಹುದು ಎಂದು ಪೀಠ ಹೇಳಿದೆ.
ಜುಲೈ 20 ರಂದು ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆಯುತ್ತಿದ್ದ ಸಂಸತ್ ಚಲೋ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆಗಳು ನಡೆದಿದ್ದವು. ಸಂಸತ್ತಿನ ಕಡೆಗೆ ಸಾಗಲು ಪ್ರಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಮತ್ತು ಅಶ್ರುವಾಯು ಶೆಲ್‌ಗಳನ್ನು ಬಳಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



