'ಕೇಂದ್ರ ಅದೊಂದು ಕೆಲಸ ಮಾಡದಿದ್ದರೆ... PoK ಜಮ್ಮು ಮತ್ತು ಕಾಶ್ಮೀರದೊಂದಿಗೆ ಸೇರುತ್ತಿತ್ತು': ಒಮರ್ ಅಬ್ದುಲ್ಲಾ
ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಒತ್ತಾಯಿಸಿದ್ದಕ್ಕಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಡಜನ್‌ಗಟ್ಟಲೆ ಜನರು ಸಾವಿಗೀಡಾಗಿ, ಅನೇಕರು ಗಾಯಗೊಂಡು ಹಾಗೂ ಜೈಲುಪಾಲಾಗಿರುವ ಪರಿಸ್ಥಿತಿ ತಮಗೆ ನೋವುಂಟುಮಾಡಿದೆ ಎಂದು ಹೇಳಿದರು.

ಶ್ರೀನಗರ: ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸದೆ ಹಾಗೂ ಆ ಪ್ರದೇಶದ ರಾಜ್ಯದ ಸ್ಥಾನಮಾನವನ್ನು ಕಿತ್ತುಕೊಳ್ಳದೆ ಇದ್ದಿದ್ದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಜನರು ಜಮ್ಮು ಮತ್ತು ಕಾಶ್ಮೀರದೊಂದಿಗೆ ವಿಲೀನಗೊಳ್ಳಲು ಮುಂದಾಗುತ್ತಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶನಿವಾರ ಹೇಳಿದರು.
ಶ್ರೀನಗರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅಬ್ದುಲ್ಲಾ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಸದ್ಯದ ಪರಿಸ್ಥಿತಿಯು ಒಂದು ವಿಷಯವನ್ನು ಸಾಬೀತುಪಡಿಸುತ್ತದೆ. 1947ರಲ್ಲಿ ಪಾಕಿಸ್ತಾನದಿಂದ ಕಾಶ್ಮೀರಕ್ಕೆ ನುಸುಳಿದ್ದ ಬುಡಕಟ್ಟು ದಾಳಿಕೋರರನ್ನು ವಿರೋಧಿಸಿ ಭಾರತದೊಂದಿಗೆ ಸೇರಲು ನಿರ್ಧರಿಸುವ ಮೂಲಕ ಕಾಶ್ಮೀರದ ಜನರು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದರು.
ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಒತ್ತಾಯಿಸಿದ್ದಕ್ಕಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಡಜನ್‌ಗಟ್ಟಲೆ ಜನರು ಸಾವಿಗೀಡಾಗಿ, ಅನೇಕರು ಗಾಯಗೊಂಡು ಹಾಗೂ ಜೈಲುಪಾಲಾಗಿರುವ ಪರಿಸ್ಥಿತಿಯು ತಮಗೆ ನೋವುಂಟುಮಾಡಿದೆ ಎಂದು ಅಬ್ದುಲ್ಲ ಹೇಳಿದರು.
1947ರಲ್ಲಿ ಭಾರತೀಯ ಸೇನೆಯು ಕಾಶ್ಮೀರಕ್ಕೆ ಆಗಮಿಸುವ ಮೊದಲೇ, ಪಾಕಿಸ್ತಾನಿ ಆಕ್ರಮಣಕಾರರ ವಿರುದ್ಧ ಹೋರಾಡಲು ಮತ್ತು ತಮ್ಮ ತಾಯ್ನಾಡನ್ನು ರಕ್ಷಿಸಿಕೊಳ್ಳಲು ಕಾಶ್ಮೀರದ ಜನರನ್ನು ಮುನ್ನಡೆಸಿದ್ದ ತಮ್ಮ ಅಜ್ಜ ಹಾಗೂ ಜಮ್ಮು ಮತ್ತು ಕಾಶ್ಮೀರದ ಮೊದಲ ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರಿಗೆ ಅವರು ಗೌರವ ನಮನ ಸಲ್ಲಿಸಿದರು.
'ಗಡಿಯಾಚೆಗಿನ ಪರಿಸ್ಥಿತಿಯನ್ನು ನೋಡಿದಾಗ, 'ಆಕ್ರಮಣಕಾರರೇ ಎಚ್ಚರ, ನಾವು ಕಾಶ್ಮೀರಿಗಳು ಸಿದ್ಧರಿದ್ದೇವೆ' ಎಂದು ಹೇಳಿದ ನಮ್ಮ ಪೂರ್ವಜರು ಸರಿಯಾಗಿಯೇ ಹೇಳಿದ್ದರು ಎಂಬುದು ನನಗೆ ಅರಿವಾಗುತ್ತದೆ. ಪಿಒಕೆಯಲ್ಲಿನ ಪರಿಸ್ಥಿತಿಯನ್ನು ನೋಡಿ ನನಗೆ ನೋವಾಗುತ್ತಿದೆ. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಸ್ಥಾನಮಾನ ಮತ್ತು ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸದಿದ್ದಿದ್ದರೆ, ಜಮ್ಮು ಮತ್ತು ಕಾಶ್ಮೀರದೊಂದಿಗೆ ಮರು-ವಿಲೀನಗೊಳ್ಳಲು ಪಿಒಕೆ ಜನರು ಇಂದು ಖಂಡಿತವಾಗಿಯೂ ದನಿ ಎತ್ತುತ್ತಿದ್ದರು ಎಂದು ನನಗೆ ಖಾತ್ರಿಯಿದೆ' ಎಂದು ಅಬ್ದುಲ್ಲಾ ಹೇಳಿದರು.
'ಒಂದಲ್ಲ ಒಂದು ದಿನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರತಿನಿಧಿಗಳು ಆ ಸ್ಥಾನಗಳನ್ನು ಅಲಂಕರಿಸಲು ಸಾಧ್ಯವಾಗಬಹುದು ಎಂಬ ನಿರೀಕ್ಷೆಯೊಂದಿಗೆ, ಸರ್ಕಾರವು ವಿಧಾನಸಭೆಯಲ್ಲಿ ಕೆಲವು ಸ್ಥಾನಗಳನ್ನು ಉದ್ದೇಶಪೂರ್ವಕವಾಗಿ ಖಾಲಿ ಬಿಟ್ಟಿದೆ' ಎಂದರು.
'ಆಗಸ್ಟ್ 2019ರಲ್ಲಿ ರದ್ದುಪಡಿಸಲಾದ ರಾಜ್ಯದ ಸ್ಥಾನಮಾನ ಮತ್ತು ಸಾಂವಿಧಾನಿಕ ಖಾತರಿಗಳನ್ನು ಮರುಸ್ಥಾಪಿಸಲು ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಗುರಿಗಳನ್ನು ಸಾಕಾರಗೊಳಿಸಲು ನಾವು ಶ್ರಮಿಸುತ್ತೇವೆ' ಎಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಒಮರ್ ಅಬ್ದುಲ್ಲಾ ಪುನರುಚ್ಚರಿಸಿದರು.
ಅಬ್ದುಲ್ಲಾ ಅವರ ಹೇಳಿಕೆಗಳನ್ನು 'ಜವಾಬ್ದಾರಿರಹಿತ' ಎಂದು ಬಣ್ಣಿಸುವ ಮೂಲಕ ಬಿಜೆಪಿ ತಿರುಗೇಟು ನೀಡಿದೆ.
'ಇದು ಮುಖ್ಯಮಂತ್ರಿಯವರ ಬೇಜವಾಬ್ದಾರಿಯುತ ಹೇಳಿಕೆ. ನಮ್ಮ ಧ್ವಜವನ್ನು ಸಂಭ್ರಮಿಸಬೇಕಾದ ಈ ರಾಷ್ಟ್ರೀಯ ದಿನದಂದು ಅವರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕಾರ್ಯಕ್ಷಮತೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಲು ಅವರು ಈ ಸಂದರ್ಭವನ್ನು ಬಳಸಿಕೊಳ್ಳಬೇಕಿತ್ತು. ಆದರೆ ದುರದೃಷ್ಟವಶಾತ್ ಅವರು ಇದನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ' ಎಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ನಾಯಕ ಸುನೀಲ್ ಶರ್ಮಾ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



