OLA, UBER ಆ್ಯಪ್‌ಗಳ Advance Tip ದಂಧೆಗೆ ಕೇಂದ್ರ ಸರ್ಕಾರ ಬ್ರೇಕ್: ಪ್ರಯಾಣಕ್ಕೂ ಮುನ್ನ ಟಿಪ್ ಕೇಳದಂತೆ ಖಡಕ್ ಆದೇಶ..!
ಕ್ಯಾಬ್ ಅಥವಾ ಆಟೋ ಬುಕ್ ಮಾಡುವಾಗ ಗ್ರಾಹಕರಿಂದ ಮುಂಗಡವಾಗಿ ಟಿಪ್ (Advance Tip) ಕೇಳುವ ಆಯ್ಕೆಯನ್ನು ಆ್ಯಪ್‌ಗಳಿಂದ ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಬೆಂಗಳೂರು: ಓಲಾ, ಉಬರ್ ಸೇರಿದಂತೆ ದೇಶದ ಪ್ರಮುಖ ರೈಡ್-ಹೇಲಿಂಗ್ ಆ್ಯಪ್‌ಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಬಿಗ್ ಶಾಕ್ ನೀಡಿದ್ದು, ಪ್ರಯಾಣಕ್ಕೂ ಮುನ್ನ ಟಿಪ್ ಕೇಳದಂತೆ ಖಡಕ್ ಆದೇಶ ಹೊರಡಿಸಿದೆ.
ಕ್ಯಾಬ್ ಅಥವಾ ಆಟೋ ಬುಕ್ ಮಾಡುವಾಗ ಗ್ರಾಹಕರಿಂದ ಮುಂಗಡವಾಗಿ ಟಿಪ್ (Advance Tip) ಕೇಳುವ ಆಯ್ಕೆಯನ್ನು ಆ್ಯಪ್‌ಗಳಿಂದ ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಹೊಸ 'ಮೋಟಾರು ವಾಹನ ಸಂಯೋಜಕರ ಮಾರ್ಗಸೂಚಿಗಳು, 2025'ರ ಅಡಿಯಲ್ಲಿ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ಗ್ರಾಹಕರು ಪ್ರಯಾಣ ಪೂರ್ಣಗೊಳಿಸಿದ ನಂತರವಷ್ಟೇ ಚಾಲಕರಿಗೆ ಟಿಪ್ ನೀಡುವ ಆಯ್ಕೆಯನ್ನು ತೋರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಓಲಾ, ಉಬರ್ ಆ್ಯಪ್‌ಗಳು ರೈಡ್ ಬುಕ್ ಮಾಡುವ ಮುನ್ನವೇ "ಅಡ್ವಾನ್ಸ್ ಟಿಪ್ ನೀಡಿ, ಬೇಗ ರೈಡ್ ಪಡೆಯಿರಿ" ಎಂಬಂತಹ ಆಯ್ಕೆಗಳನ್ನು ಗ್ರಾಹಕರಿಗೆ ತೋರಿಸುತ್ತಿದ್ದವು. ಇದರಿಂದಾಗಿ ಗ್ರಾಹಕರು ಹೆಚ್ಚುವರಿ ಹಣ ನೀಡದಿದ್ದರೆ ರೈಡ್ ಸಿಗುವುದಿಲ್ಲ ಅಥವಾ ಚಾಲಕರು ರೈಡ್ ಕ್ಯಾನ್ಸಲ್ ಮಾಡುತ್ತಾರೆ ಎಂಬ ಭಯದ ವಾತಾವರಣ ಸೃಷ್ಟಿಯಾಗಿತ್ತು. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಇದನ್ನು ತೀವ್ರವಾಗಿ ಖಂಡಿಸಿವೆ.
ಟಿಪ್ ನೀಡುವ ಆಯ್ಕೆ ನಿಷೇಧಿಸಿ
ಇದರಂತೆ ಪ್ರಯಾಣವನ್ನು ಚಾಲಕ ಸ್ವೀಕರಿಸುವ ಮೊದಲು, ಪ್ರಯಾಣ ಆರಂಭಕ್ಕೂ ಮುನ್ನ ಅಥವಾ ಪ್ರಯಾಣದ ಮಧ್ಯೆ ಟಿಪ್ ನೀಡುವ ಆಯ್ಕೆಯನ್ನು ಆ್ಯಪ್‌ಗಳಲ್ಲಿ ತೋರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಯಾಣ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಮಾತ್ರ ಪ್ರಯಾಣಿಕರಿಗೆ ಟಿಪ್ ನೀಡುವ ಆಯ್ಕೆ ಲಭ್ಯವಿರಬೇಕು ಎಂದು ತಿಳಿಸಿದೆ.
ಟಿಪ್ ನೀಡಿದರೆ ಬೇಗ ಕ್ಯಾಬ್ ದೃಢೀಕರಣವಾಗುತ್ತದೆ, ಕಾಯುವ ಸಮಯ ಕಡಿಮೆಯಾಗುತ್ತದೆ, ಚಾಲಕ ಶೀಘ್ರವಾಗಿ ನಿಯೋಜನೆಯಾಗುತ್ತಾರೆ ಅಥವಾ ಉತ್ತಮ ಸೇವೆ ದೊರೆಯುತ್ತದೆ ಎಂಬ ಭಾವನೆ ಮೂಡಿಸುವ ಆ್ಯಪ್ ವಿನ್ಯಾಸಗಳು ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಉಲ್ಲಂಘನೆಯಾಗುತ್ತವೆ.
ಇದಲ್ಲದೆ, ಪ್ರಯಾಣಿಕರು ಸ್ವಯಂಪ್ರೇರಿತವಾಗಿ ನೀಡುವ ಸಂಪೂರ್ಣ ಟಿಪ್ ಮೊತ್ತ ಚಾಲಕನಿಗೆ ನೇರವಾಗಿ ಸೇರಬೇಕು. ಅಗ್ರಿಗೇಟರ್ ಸಂಸ್ಥೆಗಳು ಅದರಿಂದ ಯಾವುದೇ ಕಮಿಷನ್ ಅಥವಾ ಪ್ಲಾಟ್‌ಫಾರ್ಮ್ ಶುಲ್ಕವನ್ನು ಕಡಿತಗೊಳಿಸುವಂತಿಲ್ಲ.

ಮೋಟಾರು ವಾಹನ ಕಾಯ್ದೆ, 1988ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರೈಡ್ ಅಗ್ರಿಗೇಟರ್‌ಗಳು ತಮ್ಮ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ತಕ್ಷಣ ಪರಿಶೀಲಿಸಿ, ನಿಯಮಗಳಿಗೆ ವಿರುದ್ಧವಾಗಿರುವ ಎಲ್ಲಾ ಬಳಕೆದಾರ ಇಂಟರ್‌ಫೇಸ್ ವೈಶಿಷ್ಟ್ಯಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ.
ಟಿಪ್ ಎಂಬುದು ಚಾಲಕರ ಉತ್ತಮ ಸೇವೆಗೆ ಕೊಡುವ ಗೌರವ ಧನವೇ ಹೊರತು, ರೈಡ್ ಬುಕ್ ಮಾಡಲು ಕೊಡುವ ಲಂಚದಂತಾಗಬಾರದು ಎಂದು ಸರ್ಕಾರ ಎಚ್ಚರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



