ಫೋರ್ಟ್ ವಿಲಿಯಂ ಫೋಟೋ, ನಕ್ಷೆ ಪತ್ತೆ: ಪಾಕ್ ಮೂಲದ ಶಂಕಿತರ ಬಂಧನ
ಫೋರ್ಟ್ ವಿಲಿಯಂಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿರುವುದು ತನಿಖೆಯ ಪ್ರಮುಖ ಆಯಾಮವಾಗಿದ್ದು, ಅವು ಎಲ್ಲಿಂದ ಬಂದವು ಹಾಗೂ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು..

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಿನ್ನೆ ಬಂಧನಕ್ಕೀಡಾಗಿದ್ದ ಪಾಕ್ ಮೂಲದ ಶಂಕಿತರ ಬಳಿ ಫೋರ್ಟ್ ವಿಲಿಯಂ ಫೋಟೋ, ನಕ್ಷೆ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಶಂಕಿತ ಪಾಕಿಸ್ತಾನ ಪ್ರಜೆ ಹಾಗೂ ಆತನ ಸಹಚರನನ್ನು ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ (STF) ಬಂಧಿಸಿದ ಒಂದು ದಿನದ ಬಳಿಕ, ಅವರ ಬಳಿ ಭಾರತೀಯ ಸೇನೆಯ ಪೂರ್ವ ಕಮಾಂಡ್ ಕೇಂದ್ರವಾಗಿರುವ ಫೋರ್ಟ್ ವಿಲಿಯಂನ ನಕ್ಷೆ ಮತ್ತು ಛಾಯಾಚಿತ್ರಗಳು ಹೇಗೆ ಬಂದವು ಎಂಬ ಕುರಿತು ತನಿಖೆ ತೀವ್ರಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ರಾಣಾ ರೌಫ್ ಖಾಲಿದ್ ಅಲಿಯಾಸ್ ವಹಾಬ್ ಆಲಂ ಮತ್ತು ಆತನ ಶಂಕಿತ ಸಹಚರ ಮೊಹಮ್ಮದ್ ಇಜಾಜ್ ಅವರನ್ನು ಮಂಗಳವಾರ ತಡರಾತ್ರಿ ಉತ್ತರ 24 ಪರಗಣಾ ಜಿಲ್ಲೆಯ ಹಬ್ರಾದಲ್ಲಿ, ಜಸ್ಸೋರ್ ರಸ್ತೆಯ ಮೂಲಕ ಬಾಂಗ್ಲಾದೇಶ ಗಡಿ ತಲುಪಲು ಯತ್ನಿಸುತ್ತಿದ್ದ ವೇಳೆ ಪಶ್ಚಿಮ ಬಂಗಾಳ ಎಸ್‌ಟಿಎಫ್ ಬಂಧಿಸಿತ್ತು. ಫೋರ್ಟ್ ವಿಲಿಯಂಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿರುವುದು ತನಿಖೆಯ ಪ್ರಮುಖ ಆಯಾಮವಾಗಿದ್ದು, ಅವು ಎಲ್ಲಿಂದ ಬಂದವು ಹಾಗೂ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು ಎಂಬುದನ್ನು ಎಸ್‌ಟಿಎಫ್ ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ.
ಫೋರ್ಟ್ ವಿಲಿಯಂನ ನಕ್ಷೆ, ಫೋಟೋ ಸಿಕ್ಕಿದ್ದು ಹೇಗೆ?
"ಫೋರ್ಟ್ ವಿಲಿಯಂನ ನಕ್ಷೆ ಮತ್ತು ಛಾಯಾಚಿತ್ರಗಳು ಆರೋಪಿಗಳ ಬಳಿ ಹೇಗೆ ಬಂದವು ಹಾಗೂ ಅವು ಮಾಹಿತಿ ಸಂಗ್ರಹಿಸುವ ಚಟುವಟಿಕೆಯ ಭಾಗವಾಗಿತ್ತೇ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ" ಎಂದು ಎಸ್‌ಟಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳ ಡಿಜಿಟಲ್ ಚಟುವಟಿಕೆಗಳನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅವರಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ಗಳಲ್ಲಿ ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಕ್ಕೆ ಸಂಬಂಧಿಸಿದ ಸಾಮಾಜಿಕ ಜಾಲತಾಣ ಚಾಟ್‌ಗಳು ಮತ್ತು ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ ಎನ್ನಲಾಗಿದೆ.
ಕೆಲವು ಚಾಟ್‌ಗಳು ಮತ್ತು ದೂರವಾಣಿ ಸಂಖ್ಯೆಗಳನ್ನು ಅಳಿಸಿರುವ ಸುಳಿವು ಕೂಡ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. "ಅಳಿಸಲಾದ ಚಾಟ್‌ಗಳು ಮತ್ತು ಸಂಖ್ಯೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಸಂಪರ್ಕಗಳ ಸ್ವರೂಪ, ಸಂವಹನದ ವಿವರಗಳು ಹಾಗೂ ಈ ಮಾರ್ಗಗಳ ಮೂಲಕ ಯಾವುದೇ ಮಾಹಿತಿ ಹಂಚಿಕೊಳ್ಳಲಾಗಿತ್ತೇ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಜಿಟಲ್ ಮಾಹಿತಿಯನ್ನು ಅಳಿಸಿರುವ ಆರೋಪಕ್ಕೆ ತನಿಖೆಯಲ್ಲಿ ಮಹತ್ವ ಸಿಕ್ಕಿದ್ದು, ಆರೋಪಿಗಳು ದೊಡ್ಡ ಜಾಲದ ಭಾಗವಾಗಿದ್ದರೇ? ಭಾರತೀಯ ಸೇನಾ ನೆಲೆಗಳು ಮತ್ತು ಸೇನಾ ಚಲನವಲನಗಳಿಗೆ ಸಂಬಂಧಿಸಿದ ಮಾಹಿತಿಯನ್ನು ದೇಶದ ಹೊರಗೆ ರವಾನಿಸಲಾಗುತ್ತಿತ್ತೇ? ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ರಾಣಾಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸಂಪರ್ಕವಿರಬಹುದೆಂದು ತನಿಖಾಧಿಕಾರಿಗಳು ಶಂಕಿಸಿದ್ದು, ಭಾರತದಲ್ಲಿನ ಆತನ ಚಟುವಟಿಕೆಗಳು, ಸಂಪರ್ಕಗಳು ಮತ್ತು ಸಂಚಾರದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಭಾರತ-ಬಾಂಗ್ಲಾದೇಶ ಗಡಿಯ ಪೆಟ್ರಾಪೋಲ್ ಮತ್ತು ಘೋಜಾಡಂಗಾ ಪ್ರದೇಶಗಳ ಸಮೀಪ ಸೇನಾ ಚಲನವಲನಗಳು ಹಾಗೂ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿರುವ ಆರೋಪದ ಬಗ್ಗೆಯೂ ಎಸ್‌ಟಿಎಫ್ ತನಿಖೆ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



