ರಾಷ್ಟ್ರೀಯ ಕೈಮಗ್ಗ ದಿನ: GRWM ವಿಡಿಯೋ ಮಾಡಿ ಕೈಮಗ್ಗವನ್ನು ಪ್ರೋತ್ಸಾಹಿಸಿ ಎಂದ ಪ್ರಧಾನಿ ಮೋದಿ; Video
ಆಗಸ್ಟ್ 7ರಂದು ಆಚರಿಸಲಾಗುವ ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಹಂಚಿಕೊಂಡಿರುವ ಈ ಇನ್‌ಸ್ಟಾಗ್ರಾಂ ರೀಲ್ಸ್ ನಲ್ಲಿ, 1905ರ ಆಗಸ್ಟ್ 7ರಂದು ಸ್ವದೇಶಿ ಚಳವಳಿ ಆರಂಭವಾದ ಐತಿಹಾಸಿಕ ಮಹತ್ವವನ್ನು ಪ್ರಧಾನಿ ಮೋದಿ ಸ್ಮರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಗುರುವಾರ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡು, ರಾಷ್ಟ್ರೀಯ ಕೈಮಗ್ಗ ದಿನವನ್ನು ವಿಶಿಷ್ಟವಾಗಿ ಆಚರಿಸುವಂತೆ ಯುವಜನತೆಗೆ ಕರೆ ನೀಡಿದ್ದಾರೆ. ಕೈಮಗ್ಗದ ಉಡುಪುಗಳನ್ನು ಧರಿಸಿ ‘ಗೆಟ್ ರೆಡಿ ವಿತ್ ಮೀ’ (Get Ready With Me - GRWM) ಶೈಲಿಯ ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳುವ ಮೂಲಕ ಭಾರತದ ಶ್ರೀಮಂತ ನೇಯ್ಗೆ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಬಹುದು ಹಾಗೂ ನೇಕಾರರ ಕುಟುಂಬಗಳಿಗೆ ಬೆಂಬಲ ನೀಡಬಹುದು ಎಂದು ಹೇಳಿದ್ದಾರೆ.
ಆಗಸ್ಟ್ 7ರಂದು ಆಚರಿಸಲಾಗುವ ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಹಂಚಿಕೊಂಡಿರುವ ಈ ಇನ್‌ಸ್ಟಾಗ್ರಾಂ ರೀಲ್ಸ್ ನಲ್ಲಿ, 1905ರ ಆಗಸ್ಟ್ 7ರಂದು ಸ್ವದೇಶಿ ಚಳವಳಿ ಆರಂಭವಾದ ಐತಿಹಾಸಿಕ ಮಹತ್ವವನ್ನು ಪ್ರಧಾನಿ ಮೋದಿ ಸ್ಮರಿಸಿದರು. ಬ್ರಿಟಿಷರ ಆಡಳಿತದ ವಿರುದ್ಧ ದೇಶಾದ್ಯಂತ ಜನರು ಒಂದಾಗಿ ಸ್ವದೇಶಿ ಚಳವಳಿಗೆ ಚಾಲನೆ ನೀಡಿದ ದಿನವೇ ಆಗಸ್ಟ್ 7 ಎಂದು ಅವರು ನೆನಪಿಸಿದರು.
ಕಳೆದ ವಾರ ನೀವು ಸ್ನೇಹಿತರ ದಿನವನ್ನು ಸಂಭ್ರಮದಿಂದ ಆಚರಿಸಿದ್ದೀರಿ. ಅದೇ ಉತ್ಸಾಹ ಮತ್ತು ಮನೋಭಾವದಿಂದ ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನೂ ಆಚರಿಸಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಭಾರತದ ನೇಕಾರ ಸಮುದಾಯದ ಕೊಡುಗೆಯನ್ನು ಉಲ್ಲೇಖಿಸಿದ ಪ್ರಧಾನಿ, ಸಾಂಪ್ರದಾಯಿಕ ಕೌಶಲ್ಯದ ಮೂಲಕ ಕೈಯಿಂದ ನೇಯ್ದ ಸುಂದರ ವಸ್ತ್ರಗಳನ್ನು ತಯಾರಿಸುವ ನೇಕಾರ ಕುಟುಂಬಗಳನ್ನು ಗುರುತಿಸಿ ಬೆಂಬಲಿಸುವ ಅವಕಾಶವೇ ರಾಷ್ಟ್ರೀಯ ಕೈಮಗ್ಗ ದಿನ ಎಂದು ಹೇಳಿದರು.
ರಾಷ್ಟ್ರೀಯ ಕೈಮಗ್ಗ ದಿನವೆಂದರೆ ನಮ್ಮ ನೇಕಾರ ಕುಟುಂಬಗಳನ್ನು ಗುರುತಿಸಿ, ಅವರಿಗೆ ಬೆಂಬಲ ನೀಡುವ ದಿನ. ಅವರು ತಮ್ಮ ಕೈಗಳಿಂದ ಅತ್ಯಂತ ಸುಂದರವಾದ ಬಟ್ಟೆಗಳನ್ನು ನೇಯುತ್ತಾರೆ. ನಮ್ಮ ದೇಶದಲ್ಲಿ ಲಭ್ಯವಿರುವ ಕೈಮಗ್ಗ ಉತ್ಪನ್ನಗಳ ವೈವಿಧ್ಯವನ್ನು ಒಮ್ಮೆ ಗಮನಿಸಿ ಎಂದು ಹೇಳಿದರು.
ಕೈಮಗ್ಗ ಪ್ರಚಾರಕ್ಕೆ ‘GRWM’ ಟ್ರೆಂಡ್ ಬಳಸಿ: ಮೋದಿ
ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ‘ಗೆಟ್ ರೆಡಿ ವಿತ್ ಮೀ’ (GRWM) ಟ್ರೆಂಡ್ ಉಲ್ಲೇಖಿಸಿದ ಪ್ರಧಾನಿ, ಕೈಮಗ್ಗದ ಉಡುಪುಗಳನ್ನು ಧರಿಸಿ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಜನರಿಗೆ ಕರೆ ನೀಡಿದರು.
ನನಗೆ ನಿಮ್ಮಲ್ಲಿ ಒಂದು ಸಣ್ಣ ಮನವಿ ಇದೆ. ಕೈಮಗ್ಗದ ಉಡುಪು ಧರಿಸಿ ‘ಗೆಟ್ ರೆಡಿ ವಿತ್ ಮೀ’ (GRWM) ವಿಡಿಯೋ ಮಾಡಿ ಜಗತ್ತಿನೊಂದಿಗೆ ಹಂಚಿಕೊಳ್ಳಿ. ಇತರರಿಗೂ ಕೈಮಗ್ಗವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿ ಮತ್ತು ನಮ್ಮ ಕರಕುಶಲಕರ್ಮಿಗಳಿಗೆ ಬೆಂಬಲ ನೀಡಿ ಎಂದು ಹೇಳಿದರು.
ಈ ಉಪಕ್ರಮವು ದೇಶದ ನೇಕಾರ ಕುಟುಂಬಗಳ ಜೀವನೋಪಾಯವನ್ನು ಬಲಪಡಿಸುವ ಮೂಲಕ ಆತ್ಮನಿರ್ಭರ ಭಾರತ ನಿರ್ಮಾಣದ ಕನಸಿಗೆ ಕೊಡುಗೆ ನೀಡಲಿದೆ ಎಂದು ಪ್ರಧಾನಿ ಹೇಳಿದರು.
ಅತ್ಯಂತ ಸಣ್ಣ ಮತ್ತು ಬಡ ನೇಕಾರ ಕುಟುಂಬಗಳಿಗೂ ಆರ್ಥಿಕವಾಗಿ ಶಕ್ತಿ ತುಂಬುವ ಮೂಲಕ ಆತ್ಮನಿರ್ಭರ ಭಾರತವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಪ್ರತಿಯೊಬ್ಬರೂ ಕನಿಷ್ಠ ಒಂದು ಕೈಮಗ್ಗ ಉತ್ಪನ್ನವನ್ನು ಖರೀದಿಸಿ, ಅದರ ಬಗ್ಗೆ ಒಂದು ವಿಡಿಯೋ ಮಾಡಿ ವ್ಯಾಪಕವಾಗಿ ಹಂಚಿಕೊಳ್ಳೋಣ. ಇದರಿಂದ ನಮ್ಮ ನೇಕಾರ ಸಹೋದರ-ಸಹೋದರಿಯರ ಪ್ರತಿಭೆ ಮತ್ತು ಕರಕುಶಲ ಕೌಶಲ್ಯ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಜನರನ್ನು ತಲುಪಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



