ಸಂಸತ್ತಿನಲ್ಲಿ ತೀವ್ರ ಗದ್ದಲ: ಅಮಿತ್ ಶಾ ಹೇಳಿಕೆಗೆ ವಿಪಕ್ಷಗಳ ಪಟ್ಟು; ಆಗಸ್ಟ್ 10ರವರೆಗೆ ಲೋಕಸಭೆ-ರಾಜ್ಯಸಭೆ ಕಲಾಪ ಮುಂದೂಡಿಕೆ..!
ಲೋಕಸಭೆಯಲ್ಲೂ ಇದೇ ವಿಚಾರವಾಗಿ ಗದ್ದಲ ಮುಂದುವರಿಯಿತು. ಅಮಿತ್ ಶಾ ಹೇಳಿಕೆಗೆ ಆಗ್ರಹಿಸಿದ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿದರು. ರಾಮ ಮಂದಿರ ದೇಣಿಗೆ ಕಳವು ಆರೋಪದ ವಿಚಾರವನ್ನೂ ಪ್ರಸ್ತಾಪಿಸಿದರು.

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ, ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮ ಹಾಗೂ ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳವು ಆರೋಪಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಆಗ್ರಹಿಸಿ ಪ್ರತಿಪಕ್ಷಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ಆಗಸ್ಟ್ 10ರವರೆಗೆ ಮುಂದೂಡಲಾಗಿದೆ
ರಾಜ್ಯಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಸದಸ್ಯರು ಅಮಿತ್ ಶಾ ಸದನಕ್ಕೆ ಹಾಜರಾಗಿ, ಜುಲೈ 20ರಂದು ಸಂಸತ್ ಕಡೆಗೆ ಮೆರವಣಿಗೆ ನಡೆಸಿದ ನೀಟ್ ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸ್ ಕ್ರಮದ ಕುರಿತು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು. ಇದರಿಂದಾಗಿ ಮೊದಲಿಗೆ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.
ಮಧ್ಯಾಹ್ನ ಕಲಾಪ ಪುನರಾರಂಭವಾದ ಬಳಿಕವೂ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮುಂದುವರಿಸಿದರು.
ಇದೇ ವೇಳೆ ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳವು ಆರೋಪದ ವಿಚಾರವನ್ನೂ ಪ್ರಸ್ತಾಪಿಸಿದರು. ಸಭಾಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರ ಮನವಿಗೂ ಸ್ಪಂದಿಸದ ಹಿನ್ನೆಲೆಯಲ್ಲಿ ಕಲಾಪವನ್ನು ದಿನಪೂರ್ತಿ ಮುಂದೂಡಲಾಯಿತು.
ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ನಡೆಯುತ್ತಿರುವ ಅಧಿವೇಶನದಲ್ಲಿ ಅಮಿತ್ ಶಾ ಅವರು ಮೇಲ್ಮನೆಗೆ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಗೃಹ ಸಚಿವರು ಇಡೀ ದಿನ ಸಂಸತ್‌ನಲ್ಲೇ ಇದ್ದರು ಎಂದು ತಿಳಿಸಿದರು.
ಯಾವ ಸಚಿವರು ಯಾವಾಗ ಸದನಕ್ಕೆ ಹಾಜರಾಗಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಪ್ರತಿಪಕ್ಷಗಳಿಗೆ ಇಲ್ಲ ಎಂದು ಹೇಳಿದರು. ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗಿ ಬಳಿಕ ಸದನದಿಂದ ಹೊರನಡೆಯುತ್ತಿವೆ ಎಂದು ಆರೋಪಿಸಿದರು.
ಗದ್ದಲದ ನಡುವೆಯೇ ಸಭಾಧ್ಯಕ್ಷರು ನಿಗದಿತ ಕಲಾಪಗಳನ್ನು ಮುಂದುವರಿಸಲು ಪ್ರಯತ್ನಿಸಿದರು. ಕೆಲ ಸದಸ್ಯರ ಶೂನ್ಯವೇಳೆ ಪ್ರಸ್ತಾಪಗಳು ಹಾಗೂ ದಾಖಲೆ ಮಂಡನೆ ಕಾರ್ಯಗಳು ನಡೆದವು. ಬಳಿಕ ಕಲಾಪವನ್ನು ಮುಂದೂಡಲಾಯಿತು.
ಲೋಕಸಭೆಯಲ್ಲೂ ಇದೇ ವಿಚಾರವಾಗಿ ಗದ್ದಲ ಮುಂದುವರಿಯಿತು. ಅಮಿತ್ ಶಾ ಹೇಳಿಕೆಗೆ ಆಗ್ರಹಿಸಿದ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿದರು. ರಾಮ ಮಂದಿರ ದೇಣಿಗೆ ಕಳವು ಆರೋಪದ ವಿಚಾರವನ್ನೂ ಪ್ರಸ್ತಾಪಿಸಿದರು.
ಪ್ರತಿಭಟನೆ ನಡುವೆಯೇ ಲೋಕಸಭೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ಮಸೂದೆ, 2026 ಅನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು. ವಿವಿಧ ಸಂಸದೀಯ ಸಮಿತಿಗಳ ವರದಿಗಳು ಹಾಗೂ ದಾಖಲೆಗಳನ್ನು ಮಂಡಿಸಲಾಯಿತು.
ಕಿರಣ್ ರಿಜಿಜು ಅವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡು, ಅಮಿತ್ ಶಾ ಪ್ರತಿದಿನ ಸಂಸತ್‌ಗೆ ಆಗಮಿಸುತ್ತಿದ್ದು, ತಡ ಸಂಜೆವರೆಗೂ ಅಲ್ಲೇ ಇರುತ್ತಾರೆ ಎಂದು ಹೇಳಿದರು. ಯಾವ ಸಚಿವರು ಉತ್ತರ ನೀಡಬೇಕು ಎಂದು ಪ್ರತಿಪಕ್ಷಗಳು ನಿರ್ದೇಶಿಸಲು ಸಾಧ್ಯವಿಲ್ಲ ಎಂದರು.
ಲೋಕಸಭೆಯ ಅಧ್ಯಕ್ಷತೆ ವಹಿಸಿದ್ದ ದಿಲೀಪ್ ಸೈಕಿಯಾ ಅವರು, ಹಲವು ಬಾರಿ ಸದಸ್ಯರನ್ನು ತಮ್ಮ ಆಸನಗಳಿಗೆ ಮರಳುವಂತೆ ಮನವಿ ಮಾಡಿದರು. ಆದರೆ, ತೀವ್ರ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಶೂನ್ಯವೇಳೆಯನ್ನು ಕೇವಲ 16 ನಿಮಿಷಗಳಲ್ಲೇ ಮುಂದೂಡಲಾಯಿತು. ಬಳಿಕ ಲೋಕಸಭೆಯ ಕಲಾಪವನ್ನೂ ದಿನಪೂರ್ತಿ ಮುಂದೂಡಲಾಯಿತು.
ಜುಲೈ 20ರಂದು ಆರಂಭವಾದ ಮುಂಗಾರು ಅಧಿವೇಶನದಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ನಿರಂತರ ಗದ್ದಲ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



