Yemen ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಸಮುದ್ರದಲ್ಲಿ ಮುಳುಗಿದ ಹಡಗು, 13 ಮಂದಿ ಭಾರತೀಯರು ಸೇರಿ ಎಲ್ಲಾ 14 ಸಿಬ್ಬಂದಿ ರಕ್ಷಣೆ..!
ಅದೃಷ್ಟವಶಾತ್, ಹಡಗಿನಲ್ಲಿದ್ದ 13 ಭಾರತೀಯರು ಸೇರಿದಂತೆ 14 ಮಂದಿ ಸಿಬ್ಬಂದಿಯನ್ನು ಯೆಮನ್ ಕರಾವಳಿ ರಕ್ಷಣಾ ಪಡೆ (ಕೋಸ್ಟ್ ಗಾರ್ಡ್) ಸುರಕ್ಷಿತವಾಗಿ ರಕ್ಷಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Yemen ಕರಾವಳಿಯಲ್ಲಿ ಭಾರತೀಯ ಧ್ವಜದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಸಮುದ್ರದಲ್ಲಿ ಮುಳುಗಿದ ಹಡಗು, 13 ಭಾರತೀಯರು ಸೇರಿ ಎಲ್ಲಾ 14 ಸಿಬ್ಬಂದಿ ರಕ್ಷಣೆ..!
ಯೆಮನ್ ಕರಾವಳಿ ಸಮೀಪದ ಕೆಂಪು ಸಮುದ್ರದಲ್ಲಿ (ರೆಡ್ ಸೀ) ಭಾರತೀಯ ಧ್ವಜ ಹೊಂದಿದ್ದ ವಾಣಿಜ್ಯ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯ ಪರಿಣಾಮ ಹಡಗು ಸಮುದ್ರದಲ್ಲಿ ಮುಳುಗಿದ ಆತಂಕಕಾರಿ ಘಟನೆ ನಡೆದಿದೆ.
ಅದೃಷ್ಟವಶಾತ್, ಹಡಗಿನಲ್ಲಿದ್ದ 13 ಭಾರತೀಯರು ಸೇರಿದಂತೆ 14 ಮಂದಿ ಸಿಬ್ಬಂದಿಯನ್ನು ಯೆಮನ್ ಕರಾವಳಿ ರಕ್ಷಣಾ ಪಡೆ (ಕೋಸ್ಟ್ ಗಾರ್ಡ್) ಸುರಕ್ಷಿತವಾಗಿ ರಕ್ಷಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಯೆಮನ್ ಸಮೀಪದ ಕೆಂಪು ಸಮುದ್ರದಲ್ಲಿ ಸಂಚರಿಸುತ್ತಿದ್ದ ಭಾರತೀಯ ಧ್ವಜದ ಎಂಎಸ್‌ವಿ ಫೈಜ್ ನೂರ್ ಒಲಿಯಾ (MSV Faize Noore Oliya) ಎಂಬ ಯಾಂತ್ರೀಕೃತ ಹಡಗಿನ ಮೇಲೆ ಆಗಸ್ಟ್ 4ರಂದು ಕ್ಷಿಪಣಿ ದಾಳಿ ನಡೆದ ಪರಿಣಾಮ ಹಡಗು ಮುಳುಗಿದೆ.
ದಾಳಿಯ ಬಳಿಕ ತಕ್ಷಣ ಕಾರ್ಯಾಚರಣೆ ಆರಂಭಿಸಿದ ಯೆಮನ್ ಕರಾವಳಿ ರಕ್ಷಣಾ ಪಡೆ, ಹಡಗಿನಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ಮೊಖಾ (Mokha) ಬಂದರಿಗೆ ಕರೆತಂದಿದೆ. ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದ್ದು, ಯಾರಿಗೂ ಗಾಯಗಳಾಗಿಲ್ಲ ಅಥವಾ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಭಾರತದ ವಿದೇಶಾಂಗ ಸಚಿವಾಲಯ (MEA) ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಕುರಿತು ಪ್ರತಿಕ್ರಿಯಿಸಿ, ಹಡಗಿನಲ್ಲಿ ಇದ್ದ 13 ಭಾರತೀಯ ಪ್ರಜೆಗಳನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ದೃಢಪಡಿಸಿದ್ದಾರೆ.
ಇದೇ ವಳೆ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾದ ಯೆಮನ್ ಅಧಿಕಾರಿಗಳಿಗೆ ಭಾರತ ಸರ್ಕಾರ ಕೃತಜ್ಞತೆ ಸಲ್ಲಿಸಿದೆ. ಜೊತೆಗೆ, ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಯೆಮನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಸಿಬ್ಬಂದಿಯ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಂಪು ಸಮುದ್ರ ಮತ್ತು ಅದರ ಸುತ್ತಮುತ್ತಲಿನ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಮೇಲೆ ಹೆಚ್ಚುತ್ತಿರುವ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
ಅಂತಾರಾಷ್ಟ್ರೀಯ ಸಮುದ್ರ ಮಾರ್ಗಗಳಲ್ಲಿ ಸಾಗುವ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವ ಇಂತಹ ದಾಳಿಗಳು ತಕ್ಷಣ ನಿಲ್ಲಬೇಕು ಎಂದು ಭಾರತ ಒತ್ತಾಯಿಸಿದೆ. ಅಲ್ಲದೆ, ಅಂತರರಾಷ್ಟ್ರೀಯ ಕಾನೂನುಗಳ ಅನುಸಾರ ಮುಕ್ತ ಮತ್ತು ಅಡೆತಡೆರಹಿತ ಸಮುದ್ರ ಸಂಚಾರ ಹಾಗೂ ವ್ಯಾಪಾರವನ್ನು ಶೀಘ್ರವೇ ಪುನಃಸ್ಥಾಪಿಸುವ ಅಗತ್ಯವಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಇನ್ನೊಂದೆಡೆ, ಕೇಂದ್ರ ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಕೂಡ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಾರತೀಯ ನಾವಿಕರ ಸುರಕ್ಷತೆಯೇ ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ರಕ್ಷಣೆಯಿಲ್ಲದ ಭಾರತೀಯ ಧ್ವಜದ ಯಾಂತ್ರೀಕೃತ ಹಡಗಿನ ಮೇಲೆ ನಡೆದ ಈ ಪ್ರಚೋದನಾರಹಿತ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ಹಡಗಿನಲ್ಲಿದ್ದ ಎಲ್ಲಾ 14 ಸಿಬ್ಬಂದಿ, ಅವರಲ್ಲಿ 13 ಭಾರತೀಯರು ಸೇರಿ, ಯೆಮನ್ ಕರಾವಳಿ ರಕ್ಷಣಾ ಪಡೆಯಿಂದ ಸುರಕ್ಷಿತವಾಗಿ ರಕ್ಷಿಸಲ್ಪಟ್ಟಿರುವುದು ಸಮಾಧಾನದ ಸಂಗತಿ" ಎಂದು ತಿಳಿಸಿದ್ದಾರೆ.
ಇದರ ಜೊತೆಗೆ, ಸಮುದ್ರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಡೈರೆಕ್ಟರ್ ಜನರಲ್ ಮೆರಿಟೈಮ್ ಅಡ್ಮಿನಿಸ್ಟ್ರೇಷನ್ (DGMA) ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸೋನೋವಾಲ್ ಹೇಳಿದ್ದಾರೆ. ರಕ್ಷಿಸಲ್ಪಟ್ಟ ಸಿಬ್ಬಂದಿಗೆ ಅಗತ್ಯವಿರುವ ಎಲ್ಲಾ ನೆರವು ಮತ್ತು ಸಹಾಯವನ್ನು ಸರ್ಕಾರ ಒದಗಿಸಲಿದೆ ಎಂದೂ ಅವರು ಭರವಸೆ ನೀಡಿದ್ದಾರೆ.
ಈ ಘಟನೆ ಮತ್ತೊಮ್ಮೆ ಕೆಂಪು ಸಮುದ್ರದಲ್ಲಿ ಉಲ್ಬಣಿಸುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಬೆಳಕಿಗೆ ತಂದಿದ್ದು, ಜಾಗತಿಕ ವಾಣಿಜ್ಯ ಹಡಗುಗಳ ಸುರಕ್ಷತೆ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಭಾರತದ ವಾಣಿಜ್ಯ ಹಡಗಿನ ಮೇಲೆ ನಡೆದ ಈ ದಾಳಿ, ಸಮುದ್ರ ಮಾರ್ಗಗಳಲ್ಲಿ ಹೆಚ್ಚುತ್ತಿರುವ ಅಪಾಯದ ಗಂಭೀರತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



