CJP protest: ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ಬೇಡ; ಪೊಲೀಸರಿಗೆ ಸುಪ್ರೀಂ ಕೋರ್ಟ್ ಪಾಠ
ಪ್ರತಿಭಟನೆಗಳನ್ನು ನಿಭಾಯಿಸುವ ಸಂದರ್ಭದಲ್ಲಿ ಕಾನೂನು ಜಾರಿ ಸಂಸ್ಥೆಗಳು ಸಂಯಮದಿಂದ ವರ್ತಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಒತ್ತಿ ಹೇಳಿದೆ.

ನವದೆಹಲಿ: ಪ್ರತಿಭಟಿಸುವ ವಿದ್ಯಾರ್ಥಿಗಳ ವಿರುದ್ಧ ಅತಿಯಾದ ಬಲಪ್ರಯೋಗ ಬೇಡ ಎಂದು ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಬುಧವಾರ ಕಿವಿಮಾತು ಹೇಳಿದೆ.
ಪ್ರತಿಭಟನೆಗಳನ್ನು ನಿಭಾಯಿಸುವ ಸಂದರ್ಭದಲ್ಲಿ ಕಾನೂನು ಜಾರಿ ಸಂಸ್ಥೆಗಳು ಸಂಯಮದಿಂದ ವರ್ತಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಒತ್ತಿ ಹೇಳಿದ್ದು, ಕೆಲವು 'ದಾರಿ ತಪ್ಪಿದ ಅಂಶಗಳು' ಕಲ್ಲು ತೂರಾಟ ನಡೆಸಿದರೂ ಯುವಕರಿಗೆ ಸೂಕ್ತ ಸಲಹೆ ನೀಡಿ, ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಜುಲೈ 20ರಂದು ನಡೆದ 'ಸಂಸದ್ ಚಲೋ' ಮೆರವಣಿಗೆಯ ಆಯೋಜಕರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಕಿ ಇರುವ ಮತ್ತೊಂದು ಅರ್ಜಿಯೊಂದಿಗೆ ಇದನ್ನೂ ಜೋಡಿಸಿತು.
ಅರ್ಜಿದಾರ ಹಾಗೂ ನಿವೃತ್ತ ವಾಯುಪಡೆಯ ಅಧಿಕಾರಿ ಮನೀಷ್ ಕುಮಾರ್ ಸೋಲಂಕಿ ಪರ ವಕೀಲ ರಿಜ್ವಾನ್ ಅಹ್ಮದ್ ವಾದ ಮಂಡಿಸಿ, ಪ್ರತಿಭಟನೆ ನಡೆದು 15 ದಿನಗಳಾದರೂ ಆಯೋಜಕರ ವಿರುದ್ಧ ಯಾವುದೇ ಹೊಣೆಗಾರಿಕೆ ನಿಗದಿಯಾಗಿಲ್ಲ ಎಂದು ಪ್ರಶ್ನಿಸಿದರು.
"ಅವರು ವಾಹಿನಿಯಿಂದ ವಾಹಿನಿಗೆ ತೆರಳಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪರಿಸ್ಥಿತಿಯನ್ನು ಶಾಂತಗೊಳಿಸುವ ಬದಲು ಮತ್ತಷ್ಟು ಉಲ್ಬಣಗೊಳಿಸುತ್ತಿದ್ದಾರೆ" ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಕಾನೂನು ಮತ್ತು ಸುವ್ಯವಸ್ಥೆ ಘಟನೆ ಉಲ್ಲೇಖಿಸಿದ ವಕೀಲರು, ಪ್ರತಿಭಟನಾಕಾರರನ್ನು ಸಮಾಧಾನಪಡಿಸುವ ಹೆಸರಿನಲ್ಲಿ ಸರ್ಕಾರಗಳು ಅತಿಯಾದ ಮೃದು ಧೋರಣೆ ತಾಳಬಾರದು ಎಂದು ವಾದಿಸಿದರು.
ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಿಗಳು ಅತಿಯಾದ ಸಡಿಲಿಕೆ ತೋರಿದರೆ, ದೇಶದ ಇತರ ಭಾಗಗಳಲ್ಲಿಯೂ ಇದೇ ರೀತಿಯ ಪ್ರತಿಭಟನೆಗಳನ್ನು ನಿಭಾಯಿಸುವಲ್ಲಿ ಅದು ಮಾದರಿಯಾಗಬಹುದು ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಕೆಲವರು ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದರೂ ಯುವ ಪ್ರತಿಭಟನಾಕಾರರಿಗೆ ಸಲಹೆ ನೀಡಿ, ಅವರನ್ನು ಶಾಂತಗೊಳಿಸುವುದೇ ಸೂಕ್ತ ಮಾರ್ಗ ಎಂದು ಹೇಳಿದರು.
"ಅವರಿಗೆ ಮಾರ್ಗದರ್ಶನ ಮತ್ತು ಸಮಾಲೋಚನೆ ಅಗತ್ಯ. ಪ್ರಬಲವಾದ ರಾಜ್ಯದಿಂದ ಆಕ್ರಮಣಕಾರಿ ಕ್ರಮಗಳು ನಡೆದರೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡು ಹಿಂಸಾಚಾರ ಹೆಚ್ಚಾಗಬಹುದು. ಅದನ್ನು ತಪ್ಪಿಸಬೇಕು" ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಪೊಲೀಸರು ಸಂಯಮದಿಂದ ವರ್ತಿಸಬೇಕು
ಹಿಂಸಾಚಾರದಲ್ಲಿ ಭಾಗಿಯಾದವರು ಯಾವುದೇ ಕಾರಣಕ್ಕೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಾರದು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಸಂಸತ್ತು ಪ್ರಜಾಪ್ರಭುತ್ವದ ದೇವಾಲಯವಾಗಿದ್ದು, ಪ್ರತಿಭಟನಾಕಾರರು ಸಂಸತ್ ಸಂಕೀರ್ಣ ಪ್ರವೇಶಿಸಲು ಯತ್ನಿಸಿದ್ದರೆ ಅದರ ಭದ್ರತಾ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
"ಅವರು ಗುಂಡು ಹಾರಿಸಿದ್ದರೆ ಏನಾಗುತ್ತಿತ್ತು? ಅವರು ಪ್ರಜಾಪ್ರಭುತ್ವದ ದೇವಾಲಯದತ್ತ ಸಾಗುತ್ತಿದ್ದರು. ಪ್ರತಿಯೊಬ್ಬರೂ ತಮ್ಮ ಕೃತ್ಯಕ್ಕೆ ಹೊಣೆಗಾರರಾಗಬೇಕು," ಎಂದು ಅವರು ಹೇಳಿದರು. ಆದರೆ, ಹಿಂಸಾಚಾರ ನಡೆದರೂ ಪೊಲೀಸರು ಅತ್ಯಂತ ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು ಮತ್ತು ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸುವುದೇ ಆದ್ಯತೆ ಎಂದು ನ್ಯಾಯಪೀಠ ಪುನರುಚ್ಚರಿಸಿತು.
"ಮುಖ್ಯವಾದುದು ಶಾಂತಿಯುತ ಮೆರವಣಿಗೆಗೆ ಅವಕಾಶ ನೀಡುವುದು. ಯಾವುದೇ ಘಟನೆ ನಡೆದರೂ ಪರಿಸ್ಥಿತಿ ನಿಯಂತ್ರಣ ತಪ್ಪದಂತೆ ಪೊಲೀಸರು ಅತ್ಯಂತ ಸಂಯಮದಿಂದ ವರ್ತಿಸಬೇಕು. ಇಂತಹ ಘಟನೆಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕು," ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಪ್ರತಿಭಟನಾಕಾರರ ಮಾತುಗಳನ್ನು ಆಲಿಸುವುದೇ ಹಿಂಸಾಚಾರ ತಡೆಯುವ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟರು.
ಎಚ್ಚರಿಕೆ ಅತ್ಯಗತ್ಯ
"ಈ ಯುವಕರು ಹಿಂಸೆಗೆ ಇಳಿಯದಂತೆ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಅವರಿಗೆ ಸಲಹೆ ನೀಡಿ, ಸಮಾಧಾನಪಡಿಸುವುದೇ ಉತ್ತಮ ಮಾರ್ಗ. ಅತ್ಯಂತ ಶಕ್ತಿಶಾಲಿ ಸಾಧನವೆಂದರೆ ಆಲಿಸುವುದು. ಅವರು ಏಕೆ ಕೂಗುತ್ತಿದ್ದಾರೆ ಎಂಬುದನ್ನು ಮೊದಲು ಕೇಳಿ, ಅರ್ಥಮಾಡಿಕೊಳ್ಳಿ," ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಇಂತಹ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಿರ್ಧರಿಸಲು ಕಾನೂನು ಜಾರಿ ಸಂಸ್ಥೆಗಳೇ ಸೂಕ್ತವಾಗಿವೆ ಎಂದೂ ಅವರು ಹೇಳಿದರು. ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದವರನ್ನು ಗುರುತಿಸಿ, ಅವರಿಗೆ ಸಮುದಾಯ ಸೇವೆ ಕಡ್ಡಾಯಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.





