ಪತ್ನಿಯಷ್ಟೇ ಲಿವ್-ಇನ್ ಸಂಗಾತಿಗೂ ಹಕ್ಕಿದೆ: ಲಿವ್-ಇನ್-ರಿಲೇಶನ್ ಶಿಪ್ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಲಿವ್-ಇನ್ ಸಂಬಂಧಗಳ ಸುರಕ್ಷತೆ ಮತ್ತು ಮಹಿಳೆಯರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ, ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬಾರದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಇತ್ತೀಚೆಗೆ ನಗರ ಪ್ರದೇಶದಲ್ಲಿ ಲಿವ್-ಇನ್-ರಿಲೇಶನ್ ಶಿಪ್ ಅನ್ನೋದು ಯಂಗ್ ಜನರೇಷನ್‌ನಲ್ಲಿ ತುಂಬಾ ಸಾಮಾನ್ಯವಾಗುತ್ತಿದೆ. ಈ ವೇಳೆ ಮದುವೆಯಾದ ನಂತರ ನಡೆಯುವ ಘಟನೆಗಳು ಲಿವ್-ಇನ್-ರಿಲೇಶನ್ ಶಿಪ್ ವೇಳೆಯೂ ನಡೆಯುತ್ತಿದೆ. ಹಾಗಾಗಿ, ಲಿವ್-ಇನ್-ರಿಲೇಶನ್ ಶಿಪ್ ಸಂಬಂಧಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅದ್ರಂತೆ, ಪತ್ನಿಯಷ್ಟೇ ಲಿವ್-ಇನ್ ಪಾರ್ಟ್‌ನರ್‌ಗೂ ಹಕ್ಕಿದೆ ಎಂದು ತಿಳಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಶಿವಮೊಗ್ಗದ ಡಾ. ಬಿ.ಎಚ್. ಲೋಕೇಶ್ ಎಂಬುವವರು ತಮಗೆ ಈಗಾಗಲೇ ಮದುವೆಯಾಗಿದ್ದ ವಿಷಯವನ್ನು ಮುಚ್ಚಿಟ್ಟು, ಮತ್ತೊಬ್ಬ ಮಹಿಳೆಯೊಂದಿಗೆ ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ಲಿವ್-ಇನ್ ಸಂಬಂಧದಲ್ಲಿದ್ದರು. ಆದ್ರೆ, ಆ ಮಹಿಳೆಯು, ಲೋಕೇಶ್ ಮತ್ತು ಅವರ ಕುಟುಂಬದವರು ತನಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಮತ್ತು ತನ್ನ ಕಾಲಿಗೆ ಬೆಂಕಿ ಹಚ್ಚಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸೆಕ್ಷನ್ 498-A ಅಡಿಯಲ್ಲಿ ದೂರು ದಾಖಲಿಸಿದ್ದರು.
ಏತನ್ಮಧ್ಯೆ, ಲೋಕೇಶ್ ಅವರು ತಮಗೆ ಈಗಾಗಲೇ ಮೊದಲ ಮದುವೆ ಚಾಲ್ತಿಯಲ್ಲಿ ಇರುವುದರಿಂದ, ಈ ಎರಡನೇ ಸಂಬಂಧ ಕಾನೂನುಬದ್ಧ ಮದುವೆಯಲ್ಲ. ಆದ್ದರಿಂದ ತಾನು ಆಕೆಯ ಪತಿ ಆಗಲು ಸಾಧ್ಯವಿಲ್ಲ ಮತ್ತು ಸೆಕ್ಷನ್ 498-A ಕೇವಲ ಕಾನೂನುಬದ್ಧ ವಿವಾಹಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಈ ಕೇಸ್ ರದ್ದು ಮಾಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು.
ಮುಂದುವರೆದು, ನವೆಂಬರ್ 2025 ರಲ್ಲಿ ಕರ್ನಾಟಕ ಹೈಕೋರ್ಟ್ ಲೋಕೇಶ್ ಅವರ ಅರ್ಜಿಯನ್ನು ತಿರಸ್ಕರಿಸಿ, ಮದುವೆಯ ಸ್ವರೂಪದಲ್ಲೇ ಇರುವ ಲಿವ್-ಇನ್ ಸಂಬಂಧಗಳಿಗೂ ಈ ಕಾನೂನು ಅನ್ವಯಿಸುತ್ತದೆ ಎಂದು ಹೇಳಿತ್ತು. ಆದ್ರೆ, ಇದನ್ನ ಪ್ರಶ್ನಿಸಿ ಲೋಕೇಶ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಲಿವ್-ಇನ್-ರಿಲೇಶನ್ ಶಿಪ್ ಕೂಡ ಮದುವೆಯೇ...
ಇನ್ನು, ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಂಜಯ್ ಕರೋಲ್ ಮತ್ತು ನ್ಯಾ. ನೋಂಗ್ಮೈಕಪಮ್ ಕೋಟೀಶ್ವರ್ ಸಿಂಗ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ಇಬ್ಬರು ವಯಸ್ಕರು ಮದುವೆಯಾಗುವ ಸ್ಪಷ್ಟ ಉದ್ದೇಶದಿಂದ ಒಟ್ಟಿಗೆ ವಾಸಿಸುತ್ತಿದ್ದರೆ, ಆ ಸಂಬಂಧವು ಮದುವೆಯ ಸ್ವರೂಪದ್ದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಿತು. ಇಂತಹ ಸಂದರ್ಭದಲ್ಲಿ ಮಹಿಳೆಯ ಮೇಲೆ ಕ್ರೌರ್ಯ ಎಸಗಿದರೆ ಸೆಕ್ಷನ್ 498-A ಅಡಿಯಲ್ಲಿ ಕ್ರಮ ಜರುಗಿಸಿ ಜೈಲಿಗೆ ಹಾಕಬಹುದು ಎಂದು ಮಹತ್ವದ ಆದೇಶ ಹೊರಡಿಸಿದೆ.
ಇದರೊಂದಿಗೆ, ಕೇವಲ ಅಧಿಕೃತವಾಗಿ ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಲಿವ್-ಇನ್ ಸಂಬಂಧದಲ್ಲಿರುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಡೆಗಣಿಸುವುದು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಕ್ಕೆ ಧಕ್ಕೆ ತರುತ್ತದೆ ಎಂದು ಸ್ಪಷ್ಟಪಡಿಸಿದೆ.
ಹಾಗಾದ್ರೆ, ಏನಿದು IPC ಸೆಕ್ಷನ್ 498-A?
ಐಪಿಸಿ ಸೆಕ್ಷನ್ 498-A (ಪ್ರಸ್ತುತ ಭಾರತೀಯ ನ್ಯಾಯ ಸಂಹಿತೆ - BNS ಅಡಿಯೂ ಅನ್ವಯ) ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಮಹಿಳೆಯನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ಹಿಂಸಿಸುವುದು ಮತ್ತು ಕಾನೂನುಬಾಹಿರ ಬೇಡಿಕೆಗಳಿಗೆ (ವರದಕ್ಷಿಣೆ ಇತ್ಯಾದಿ) ಕಿರುಕುಳ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




