ದೇಶ

CJP ಫಂಡಿಂಗ್ ಬಗ್ಗೆ ತನಿಖೆ? ಅಭಿಜೀತ್ ದಿಪ್ಕೆ ತಂದೆಯ ಹಣಕಾಸಿನ ಮೂಲಗಳ ಬಗ್ಗೆ RTI ಕಾರ್ಯಕರ್ತ ದೂರು

CJP ಸಂಸ್ಥಾಪಕ ಅಭಿಜೀತ್ ದಿಪ್ಕೆ ವಿರುದ್ಧ ಅತಿ ದೊಡ್ಡ ಆರೋಪ ಕೇಳಿ ಬಂದಿದೆ. ಅದುವೇ, ಅಭಿಜೀತ್ ದಿಪ್ಕೆ ಅವರ ತಂದೆ, ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ಭಗವಾನ್‌ರಾವ್ ದಿಪ್ಕೆಯ ಹಣಕಾಸಿನ ಮೂಲಗಳ ಬಗ್ಗೆ ತನಿಖೆ ನಡೆಸುವಂತೆ RTI ಕಾರ್ಯಕರ್ತ ಅಮಿತ್ ತಿವಾರಿ ದೂರು ದಾಖಲಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ

CJP ಫಂಡಿಂಗ್ ಬಗ್ಗೆ ತನಿಖೆ? ಅಭಿಜೀತ್ ದಿಪ್ಕೆ ತಂದೆಯ ಹಣಕಾಸಿನ ಮೂಲಗಳ ಬಗ್ಗೆ RTI ಕಾರ್ಯಕರ್ತ ದೂರು
ಅಭಿಜೀತ್ ದಿಪ್ಕೆ — Online Desk
Published On :

ಮುಂಬೈ: ಕಾಕ್ರೋಚ್ ಜನತಾ ಪಾರ್ಟಿ (CJP) ಮೂಲಕ ಕ್ರಾಂತಿ ಮಾಡುತ್ತೇನೆ ಎನುತ್ತಾ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಹೋರಾಟ ಮಾಡಿ ಸದ್ದು ಮಾಡಿದ್ದ CJP ಸಂಸ್ಥಾಪಕ ಅಭಿಜೀತ್ ದಿಪ್ಕೆ ವಿರುದ್ಧ ಅತಿ ದೊಡ್ಡ ಆರೋಪ ಕೇಳಿ ಬಂದಿದೆ. ಅದುವೇ, ಅಭಿಜೀತ್ ದಿಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿಯಾಗಿರುವ ಭಗವಾನ್‌ರಾವ್ ದಿಪ್ಕೆಯ ಹಣಕಾಸಿನ ಮೂಲಗಳ ಬಗ್ಗೆ ತನಿಖೆ ನಡೆಸುವಂತೆ ಗುಜರಾತ್‌ನ ಸೂರತ್ ಮೂಲದ RTI ಕಾರ್ಯಕರ್ತ ಅಮಿತ್ ತಿವಾರಿ ದೂರು ದಾಖಲಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಸೂರತ್ ಮೂಲದ RTI ಕಾರ್ಯಕರ್ತ ಅಮಿತ್ ತಿವಾರಿ ಅವರು CJP ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ತಂದೆ ಭಗವಾನ್‌ರಾವ್ ದಿಪ್ಕೆ ವಿರುದ್ಧ ಆರೋಪಿಸಿರುವಂತೆ, "ಭಗವಾನ್‌ರಾವ್ ದಿಪ್ಕೆ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಜೂನಿಯರ್ ಇಂಜಿನಿಯರ್ ಆಗಿ ನಿವೃತ್ತರಾಗಿದ್ದಾರೆ. ಇನ್ನು, ಕೆಲಸದ ವೇಳೆ ತಿಂಗಳಿಗೆ ಕೇವಲ ₹60,000 ದಿಂದ ₹65,000 ಸಂಬಳ ಪಡೆಯುತ್ತಿದ್ದ ಒಬ್ಬ ಸರ್ಕಾರಿ ನೌಕರ, ತಮ್ಮ ಮಗನನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಕಳುಹಿಸಲು ಹೇಗೆ ಸಾಧ್ಯವಾಯಿತು" ಎಂದು ಪ್ರಶ್ನಿಸಿದ್ದಾರೆ. ಅದರಂತೆ, ಇದು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕಾರವಾಗಿರಬಹುದು ಎಂದು ಶಂಕಿಸಿ ತನಿಖೆ ನಡೆಸುವಂತೆ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ದೂರು ನೀಡಿದ್ದಾರೆ.

ನೋಂದಣಿ ಆಗದೇ ರಾಜಕೀಯ ಪಕ್ಷದ ಹೆಸರಿನಲ್ಲಿ...

ಮುಂದುವರೆದು, CJP ಸಂಘಟನೆಯ ಕಾನೂನು ಮಾನ್ಯತೆ ಬಗ್ಗೆಯೂ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ತಿವಾರಿ, "CJP ಯಾವುದೇ ನೋಂದಣಿ ಇಲ್ಲದೆ ರಾಜಕೀಯ ಪಕ್ಷದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಾರ್ವಜನಿಕರಿಂದ ನಿಧಿ ಸಂಗ್ರಹಿಸುತ್ತಿದೆ. ಹಾಗಾಗಿ, ಪ್ರಜಾಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 29A ಅಡಿಯಲ್ಲಿ CJP ನೋಂದಾಯಿತವಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ" ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಏತನ್ಮಧ್ಯೆ, ಇತ್ತೀಚೆಗೆ ನೀಟ್ ಪೇಪರ್ ಸೋರಿಕೆ ಹಗರಣದ ಪ್ರತಿಭಟನೆ ವೇಳೆ ಬಂಧನಕ್ಕೊಳಗಾದ CJP ಕಾರ್ಯಕರ್ತರ ಕಾನೂನು ಹೋರಾಟಕ್ಕಾಗಿ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ₹1 ಕೋಟಿ ನೆರವು ಘೋಷಿಸಿದ್ದರು. ಇದರ ವಿರುದ್ದವೂ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಗೆ ದೂರು ನೀಡಿರುವ ತಿವಾರಿ, "ನೋಂದಾಯಿತವಲ್ಲದ ಸಂಘಟನೆಗೆ ಇಂತಹ ದೊಡ್ಡ ಮೊತ್ತದ ಹಣ ವರ್ಗಾವಣೆಯಾಗುತ್ತಿರುವುದರಿಂದ, ಇದಕ್ಕೆ ಶೇ. 18 ರಷ್ಟು GST ಅನ್ವಯಿಸುತ್ತದೆಯೇ ಎಂಬುದನ್ನು ತನಿಖೆ ಮಾಡುವಂತೆ" ಕೋರಿದ್ದಾರೆ.

ಮುಂದುವರೆದು, ತಮ್ಮ ದೂರಿನಲ್ಲಿ ನೀಟ್ ಆಂದೋಲನದ ಬಗ್ಗೆಯೂ ಉಲ್ಲೇಖಿಸಿರುವ ಅಮಿತ್ ತಿವಾರಿ, ಆರಂಭದಲ್ಲಿ ಈ ಆಂದೋಲನವು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು ಮತ್ತು ಅದಕ್ಕೆ ವ್ಯಾಪಕ ಬೆಂಬಲ ಸಿಕ್ಕಿತು. ಆದಾಗ್ಯೂ, ನಂತರದ ಪ್ರತಿಭಟನೆಗಳ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ, ಅವರ ದಿವಂಗತ ತಾಯಿ ಮತ್ತು ಇತರ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ. ಇದು ಪ್ರಜಾಪ್ರಭುತ್ವ ಪ್ರತಿಭಟನೆಯ ಸಭ್ಯತೆಗೆ ಹೊಂದಿಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.