ಅಯೋಧ್ಯೆ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಕೆ ಟಿಪ್ಪಣಿ ಪತ್ತೆ: ಪ್ರಥಮ ವರ್ಷದ ವಿದ್ಯಾರ್ಥಿ ಪೊಲೀಸರ ವಶಕ್ಕೆ
ಈ ಕೈಬರಹದ ದಾಖಲೆಯಲ್ಲಿ ಬಾಂಬ್ ತಯಾರಿಸಲು ಬೇಕಾದ ಅಮೋನಿಯಂ ಕಾರ್ಬೋನೇಟ್, ನೈಟ್ರಿಕ್ ಆಮ್ಲ, ಕೆಂಪು ರಂಜಕ, ಕೆಂಪು ಸಲ್ಫೈಡ್ ಹಾಗೂ ಗೇಜ್ ವೈರ್‌ನಂತಹ ರಾಸಾಯನಿಕಗಳ ವಿವರಗಳಿದ್ದವು.

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಜರ್ಷಿ ದಶರಥ್ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಸುವ ವಿವರಗಳಿದ್ದ ಕೈಬರಹದ ಟಿಪ್ಪಣಿ ಸಿಕ್ಕ ಬೆನ್ನಲ್ಲೇ, ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿದ್ಯಾರ್ಥಿಯನ್ನು ಬಲರಾಂಪುರ ಮೂಲದ ಸರ್ಫರಾಜ್ ಖಾನ್ ಎಂದು ಗುರುತಿಸಲಾಗಿದೆ. ಈತ ಕಾಲೇಜಿನ 2025 ರ ಎಕ್ಸ್-ರೇ ಟೆಕ್ನಾಲಜಿ ಬ್ಯಾಚ್‌ನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಶನಿವಾರ ಬೆಳಗ್ಗೆ ಎಕ್ಸ್-ರೇ ಕೊಠಡಿಗೆ ಕರ್ತವ್ಯಕ್ಕೆ ತೆರಳಿದ್ದ ವಿದ್ಯಾರ್ಥಿಗಳಿಗೆ ಕಾಗದದ ಟಿಪ್ಪಣಿಯೊಂದು ಸಿಕ್ಕಿದೆ. ಶುಕ್ರವಾರ ರಾತ್ರಿ ಇದೇ ಕೊಠಡಿಯಲ್ಲಿ ಸರ್ಫರಾಜ್ ಇದ್ದ ಎನ್ನಲಾಗಿದೆ.
ಈ ಕೈಬರಹದ ದಾಖಲೆಯಲ್ಲಿ ಬಾಂಬ್ ತಯಾರಿಸಲು ಬೇಕಾದ ಅಮೋನಿಯಂ ಕಾರ್ಬೋನೇಟ್, ನೈಟ್ರಿಕ್ ಆಮ್ಲ, ಕೆಂಪು ರಂಜಕ, ಕೆಂಪು ಸಲ್ಫೈಡ್ ಹಾಗೂ ಗೇಜ್ ವೈರ್‌ನಂತಹ ರಾಸಾಯನಿಕಗಳ ವಿವರಗಳಿದ್ದವು.
ಕಾಲೇಜಿನ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಸಿಂಗ್ ಅವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, ಸರ್ಫರಾಜ್ ಜೊತೆ ಕರ್ತವ್ಯದಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ತೀವ್ರಗೊಂಡ ಭದ್ರತೆ ಮತ್ತು ತನಿಖೆ ಟಿಪ್ಪಣಿ ಬರೆದಿರುವುದರ ಹಿಂದೆ ಯಾವುದೇ ಕ್ರಿಮಿನಲ್ ಅಥವಾ ಭಯೋತ್ಪಾದನಾ ಸಂಚು ಇದೆಯೇ ಎಂಬ ಬಗ್ಗೆ ಪೊಲೀಸರು ಹಾಗೂ ಉತ್ತರ ಪ್ರದೇಶ ಎಟಿಎಸ್ ಪಡೆಗಳು ತನಿಖೆ ನಡೆಸುತ್ತಿವೆ.
ಘಟನೆ ಬೆನ್ನಲ್ಲೇ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯು ಕ್ಯಾಂಪಸ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ಎಕ್ಸ್-ರೇ, ಲ್ಯಾಬ್ ಹಾಗೂ ಹಾಸ್ಟೆಲ್ ಕೊಠಡಿಗಳಲ್ಲಿ ತಪಾಸಣೆ ನಡೆಸಿದೆ.
2025ರ ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡು 15 ಜನರು ಮೃತಪಟ್ಟಿದ್ದರು. ಆ ಪ್ರಕರಣದಲ್ಲಿ ಹರಿಯಾಣದ ‘ಅಲ್ ಫಲಾಹ್ ವಿಶ್ವವಿದ್ಯಾಲಯ’ದ ಸಿಬ್ಬಂದಿ ಭಾಗಿಯಾಗಿದ್ದ ‘ಜೈಶ್-ಎ-ಮೊಹಮ್ಮದ್’ ಜಾಲ ಬೆಳಕಿಗೆ ಬಂದಿತ್ತು. ಇದೀಗ ಅಯೋಧ್ಯೆಯಂತಹ ಸೂಕ್ಷ್ಮ ಪ್ರದೇಶದ ವೈದ್ಯಕೀಯ ಕಾಲೇಜಿನಲ್ಲೇ ಇಂತಹ ಟಿಪ್ಪಣಿ ಪತ್ತೆಯಾಗಿರುವುದು ತನಿಖಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿದೆ.
ಬಂಧಿತ ವಿದ್ಯಾರ್ಥಿ ಸರ್ಫರಾಜ್ ಖಾನ್‌ಗೆ ಯಾವುದೇ ಉಗ್ರ ಸಂಘಟನೆಗಳ ಜೊತೆ ಸಂಪರ್ಕವಿದೆಯೇ ಅಥವಾ ಪ್ರಚೋದನಾಕಾರಿ ಜಾಲಕ್ಕೆ ಬಿದ್ದಿದ್ದಾನೆಯೇ ಎಂಬ ದೃಷ್ಟಿಯಲ್ಲಿ ಎಸ್‌ಟಿಎಫ್ (STF) ಮತ್ತು ವಿಧಿವಿಜ್ಞಾನ ತಂಡಗಳು ತನಿಖೆ ಚುರುಕುಗೊಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



