'ನಿಮ್ಮ ಕಾನೂನಿಗೆ ತಿದ್ದುಪಡಿ ತನ್ನಿ': ಅತ್ಯಾಚಾರ ಸಂತ್ರಸ್ತ ಬಾಲಕಿ ಗರ್ಭಪಾತ ತಡೆದ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ..!
ಅತ್ಯಾಚಾರಕ್ಕೊಳಗಾಗಿ 31 ವಾರಗಳ ಗರ್ಭಿಣಿಯಾಗಿದ್ದ 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ 'ಕ್ಯುರೇಟಿವ್' ಅರ್ಜಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ.

ನವದೆಹಲಿ: ಅತ್ಯಾಚಾರದಿಂದ ಉಂಟಾಗುವ ಗರ್ಭಧಾರಣೆಯ ಪ್ರಕರಣಗಳಲ್ಲಿ 20 ವಾರಗಳ ಕಾನೂನು ಮಿತಿಯನ್ನು ಮೀರಿ ಗರ್ಭಪಾತಕ್ಕೆ ಅವಕಾಶ ನೀಡುವ ಕುರಿತು ಕಾನೂನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಒತ್ತಾಯಿಸಿದೆ.
ಅತ್ಯಾಚಾರಕ್ಕೊಳಗಾಗಿ 31 ವಾರಗಳ ಗರ್ಭಿಣಿಯಾಗಿದ್ದ 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ 'ಕ್ಯುರೇಟಿವ್' ಅರ್ಜಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಇದೇ ವೇಳೆ ಈ ವಿಷಯದಲ್ಲಿ ಕಾನೂನು “ಕಾಲಾನುಸಾರ ಜೀವಂತವಾಗಿರಬೇಕು” ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜ್ಯೋತಿರ್ಮಯ ಬಾಗ್ಚಿ ಅವರಿದ್ದ ಪೀಠವು, ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಗಂಭೀರವಾಗಿದ್ದು, ಆಕೆಯನ್ನು ಬಲವಂತವಾಗಿ ತಾಯ್ತನಕ್ಕೆ ಒತ್ತಾಯಿಸುವುದು ಆಕೆಯ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇದು ಬಾಲಿಕಿ ಮೇಲಿನ ಅತ್ಯಾಚಾರ ಪ್ರಕರಣ. 15 ವರ್ಷದ ಮಗುವಿನ ಅನಗತ್ಯ ಗರ್ಭಧಾರಣೆಯಾಗಿದೆ. ಅವಳು ಈಗ ಓದುತ್ತಿರಬೇಕು, ಆದರೆ, ನಾವು ಅವಳನ್ನು ತಾಯಿಯಾಗುವಂತೆ ಒತ್ತಾಯಿಸುತ್ತಿದ್ದೇವೆ. ಅವಳು ಅನುಭವಿಸಿದ ನೋವು ಮತ್ತು ಅವಮಾನವನ್ನು ಊಹಿಸಿ, ಅನಗತ್ಯ ಗರ್ಭಧಾರಣೆಯನ್ನು ವ್ಯಕ್ತಿಯ ಮೇಲೆ ಹೇರಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಗರ್ಭಧಾರಣೆಯನ್ನು ಮುಂದುವರಿಸುವ ಅಥವಾ ಅಂತ್ಯಗೊಳಿಸುವ ಆಯ್ಕೆಯು ಸಂತ್ರಸ್ತೆಯ ಮೇಲೆ ಇರಬೇಕು ಎಂದು ಹೇಳಿತು.
ಏಮ್ಸ್ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು, 30 ವಾರಗಳ ಗರ್ಭಧಾರಣೆಯಲ್ಲಿ ಭ್ರೂಣವು ಜೀವಂತವಾಗಿರುವುದರಿಂದ ವೈದ್ಯಕೀಯ ಅಪಾಯಗಳು ಹೆಚ್ಚಾಗುತ್ತವೆ ಎಂದು ವಾದಿಸಿದರು.
ತಾಯಿ ಆರೋಗ್ಯಕ್ಕೂ ದೀರ್ಘಕಾಲದ ಹಾನಿ ಸಂಭವಿಸಬಹುದು ಎಂದು ಅವರು ಹೇಳಿದರು. ಜೊತೆಗೆ ದತ್ತು ನೀಡುವ ಆಯ್ಕೆಯನ್ನೂ ಪರಿಗಣಿಸಬಹುದು ಎಂಬ ಸಲಹೆ ನೀಡಿದರು.
ಆದರೆ, ನ್ಯಾಯಾಲಯವು ಅಂತಿಮ ನಿರ್ಧಾರವು ಸಂತ್ರಸ್ತೆ ಹಾಗೂ ಆಕೆಯ ಪೋಷಕರ ಕೈಯಲ್ಲೇ ಇರಬೇಕು ಎಂದು ಸ್ಪಷ್ಟಪಡಿಸಿತು.
ಈ ನಿರ್ಧಾರಕ್ಕೆ ವೈದ್ಯಕೀಯ ಮತ್ತು ಮಾನಸಿಕ ತಜ್ಞರ ಸಲಹೆ ಅಗತ್ಯವಿದೆ ಎಂದು ಹೇಳಿ ಏಮ್ಸ್'ಗೆ ಕುಟುಂಬಕ್ಕೆ ಸೂಕ್ತ ಕೌನ್ಸೆಲಿಂಗ್ ನೀಡುವಂತೆ ಸೂಚಿಸಿತು.
ನ್ಯಾಯಾಲಯವು ಸಂವಿಧಾನದ ಆರ್ಟಿಕಲ್ 142 ಅಡಿಯಲ್ಲಿ ತನ್ನ ವಿಶೇಷಾಧಿಕಾರವನ್ನು ಬಳಸಿಕೊಂಡು, ಅಪ್ರಾಪ್ತೆ ಮತ್ತು ಆಕೆಯ ಕುಟುಂಬವು ಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳಲು ಅಗತ್ಯ ಸಹಾಯ ಮತ್ತು ರಕ್ಷಣೆ ದೊರಕಬೇಕು ಎಂದು ಸೂಚಿಸಿತು. ಬಳಿಕ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜುಲೈ 14ಕ್ಕೆ ನಿಗದಿಪಡಿಸಿತು.
ಹಿಂದೆ ಏಪ್ರಿಲ್ 24ರಂದು ಇದೇ ಪ್ರಕರಣದಲ್ಲಿ 29 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಯಾವುದೇ ನ್ಯಾಯಾಲಯವು ಅಪ್ರಾಪ್ತೆಯಾದ ಮಹಿಳೆಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆಯನ್ನು ಪೂರ್ಣಗೊಳಿಸಲು ಒತ್ತಾಯಿಸಲಾಗುವುದಿಲ್ಲ ಎಂದು ಆಗ ಪೀಠ ಅಭಿಪ್ರಾಯಪಟ್ಟಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



