ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗು.. ಚೈನ್ ಎಳೆದರೂ ನಿಲ್ಲದ ರೈಲು; ಅದ್ಯಾವ ಪುರುಷಾರ್ಥಕ್ಕೆ Emergency ಚೈನ್ ಇಟ್ಟಿದ್ದೀರಾ? ಪ್ರಯಾಣಿಕರ ಆಕ್ರೋಶ! Video
ಈ ವೇಳೆ ಸಹ ಪ್ರಯಾಣಿಕರು ರೈಲಿನ ತುರ್ತು ಚೈನ್ ಎಳೆದಿದ್ದಾರೆ. ಆದರೆ ರೈಲು ನಿಂತಿಲ್ಲ, ಬಳಿಕ ಅಲ್ಲಿಯೇ ಇದ್ದ ಇತರೆ ಬೋಗಿಗಳ ಪ್ರಯಾಣಿಕರೂ ಕೂಡ ಚೈನ್ ಎಳೆದಿದ್ದಾರೆ. ಆದರೂ ರೈಲು ನಿಂತಿಲ್ಲ.

ಕೋಲ್ಕತಾ: ನಿತ್ಯ ಕೋಟ್ಯಂತರ ಮಂದಿ ಪ್ರಯಾಣಿಕರು ಸಂಚರಿಸುವ ಭಾರತೀಯ ರೈಲಿನಲ್ಲಿ ಇಂದು ಮತ್ತೊಂದು ದುರಂತ ಸಂಭವಿಸಿದ್ದು, ರೈಲಿನಿಂದ ಮಗುವೊಂದು ತಾಯಿಕೈಯಿಂದ ಜಾರಿ ಹೊರಗೆ ಬಿದ್ದಿದೆ.
ಹೌದು.. ಪಶ್ಚಿಮ ಬಂಗಾಳದ ಜಲ್ಪೈಗುರಿ-ರಾಮನಗರ ಮಾರ್ಗದಲ್ಲಿ ಈ ದುರಂತ ಸಂಭವಿಸಿದ್ದು, ಮಗು ರೈಲಿನಿಂದ ಕೆಳಗೆ ಬೀಳುತ್ತಲೇ ತಾಯಿ ಆಘಾತಗೊಂಡು ಕಿರುಚಿಕೊಂಡಿದ್ದಾರೆ. ಈ ವೇಳೆ ಸಹ ಪ್ರಯಾಣಿಕರು ರೈಲಿನ ತುರ್ತು ಚೈನ್ ಎಳೆದಿದ್ದಾರೆ. ಆದರೆ ರೈಲು ನಿಂತಿಲ್ಲ, ಬಳಿಕ ಅಲ್ಲಿಯೇ ಇದ್ದ ಇತರೆ ಬೋಗಿಗಳ ಪ್ರಯಾಣಿಕರೂ ಕೂಡ ಚೈನ್ ಎಳೆದಿದ್ದಾರೆ. ಆದರೂ ರೈಲು ನಿಂತಿಲ್ಲ.
ಬೋಗಿಯಲ್ಲಿದ್ದ ಇತರ ಪ್ರಯಾಣಿಕರು ಕೂಡ ಸತತವಾಗಿ ಚೈನ್ ಎಳೆದರೂ ರೈಲು ನಿಲುಗಡೆಯಾಗಲಿಲ್ಲ. ತುರ್ತು ಸಂದರ್ಭದಲ್ಲಿ ರೈಲನ್ನು ನಿಲ್ಲಿಸಲು ಬಳಸುವ ಚೈನ್ ಎಳೆದರೂ ರೈಲು ಸುಮಾರು 10 ರಿಂದ 15 ಕಿಲೋಮೀಟರ್ ವರೆಗೆ ಚಲಿಸುತ್ತಲೇ ಇತ್ತು ಎಂದು ವರದಿಯಾಗಿದೆ.
ಈ ವೇಳೆ ಬೇರೆ ದಾರಿಯಿಲ್ಲದೇ ಸ್ಥಳದಲ್ಲಿದ್ದ ಯುವಕನೊಬ್ಬ ಪೊಲೀಸ್ ಮತ್ತು ಆರ್‌ಪಿಎಫ್ (RPF) ಗೆ ಕರೆ ಮಾಡಿದರೂ ತಕ್ಷಣದ ಸ್ಪಂದನೆ ಸಿಗಲಿಲ್ಲ. ರೈಲ್ವೆ ಅಧಿಕಾರಿಗಳು ಅಥವಾ ಟಿಟಿಇ (TTE) ಕಡೆಯಿಂದಲೂ ಯಾವುದೇ ಸಹಾಯ ಸಿಗಲಿಲ್ಲ. ಹೀಗಾಗಿ ಪ್ರಯಾಣಿಕರ ಸಂಯಮದ ಕಟ್ಟೆ ಹೊಡೆಯಿತು. ರೈಲ್ವೇ ಇಲಾಖೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ
ಈ ದಾರುಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲ್ವೆ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತನಿಖೆ ಮತ್ತು ರೈಲ್ವೆ ಇಲಾಖೆಯ ಪ್ರತಿಕ್ರಿಯೆ
ಜಲ್ಪೈಗುರಿ-ರಾಮನಗರ ಮಾರ್ಗದಲ್ಲಿ ಮಗು ರೈಲಿನಿಂದ ಬಿದ್ದ ದಾರುಣ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ, ರೈಲ್ವೆ ಇಲಾಖೆಯು ತನಿಖೆಗೆ ಆದೇಶಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಸಾರ್ವಜನಿಕರ ಆಕ್ರೋಶಕ್ಕೆ ಸ್ಪಂದಿಸಿರುವ Railway Seva, ಈ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದೆ.
ವಿಭಾಗೀಯ ರೈಲ್ವೆ ವ್ಯವಸ್ಥಾಪಕರ (DRM) ಕಚೇರಿಯು ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಘಟನೆಯ ಬಗ್ಗೆ ವಿವರವಾದ ವಿಚಾರಣೆಯನ್ನು ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಅಂತೆಯೇ ಪ್ರಯಾಣಿಕರು ತುರ್ತು ಚೈನ್ ಎಳೆದರೂ ರೈಲು ಏಕೆ ನಿಲ್ಲಲಿಲ್ಲ ಎಂಬ ಬಗ್ಗೆ ತಾಂತ್ರಿಕ ತಪಾಸಣೆ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಚೈನ್ ಎಳೆದಾಗ ಬ್ರೇಕ್ ಪೈಪ್‌ನಲ್ಲಿ ಗಾಳಿಯ ಒತ್ತಡ ಕಡಿಮೆಯಾಗಿ ರೈಲು ನಿಲ್ಲಬೇಕು, ಆದರೆ ಈ ಸಂದರ್ಭದಲ್ಲಿ ಅದು ವಿಫಲವಾದ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ
ಘಟನೆಯ ಸಮಯದಲ್ಲಿ ರೈಲ್ವೆ ಸಹಾಯವಾಣಿ ಮತ್ತು ರೈಲಿನಲ್ಲಿದ್ದ ಟಿಟಿಇ (TTE) ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಪ್ರಯಾಣಿಕರ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



