ಭಾರತವನ್ನು 'ನರಕಕೂಪ'ವೆಂದು ಹೀಯಾಳಿಸಿದ ಟ್ರಂಪ್: ಅಜ್ಞಾನಪೂರ್ಣ ಹೇಳಿಕೆ; ವಿದೇಶಾಂಗ ಇಲಾಖೆ ತೀವ್ರ ಕಿಡಿ; Video
ಭಾರತ ಸೇರಿದಂತೆ ಕೆಲವು ದೇಶಗಳನ್ನು ಅವಮಾನಕಾರಿ ರೀತಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ವಲಸೆ ನೀತಿ ಮತ್ತು ಜನ್ಮಸಿದ್ಧ ಪೌರತ್ವದ ಕುರಿತು ತೀವ್ರ ಟೀಕೆಗಳನ್ನು ಮಾಡಲಾಗಿತ್ತು.

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು “ನರಕಕೂಪ”ವೆಂದು ಉಲ್ಲೇಖಿಸಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಭಾರತ ಸರ್ಕಾರ ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದು, “ಅಜ್ಞಾನಪೂರ್ಣ ಹೇಳಿಕೆ” ಎಂದು ಖಂಡಿಸಿದೆ.
ಈ ವಿವಾದಕ್ಕೆ ಕಾರಣವಾದದ್ದು ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಮರುಹಂಚಿಕೊಂಡ ಅಮೆರಿಕದ ಪ್ರಮುಖ ಸಂಪ್ರದಾಯವಾದಿ ಲೇಖಕ ಮತ್ತು ರೇಡಿಯೋ ನಿರೂಪಕ ಮೈಕೆಲ್ ಸ್ಯಾವೇಜ್ ಅವರ ಪಾಡ್‌ಕಾಸ್ಟ್.
ಅದರಲ್ಲಿ ಭಾರತ ಸೇರಿದಂತೆ ಕೆಲವು ದೇಶಗಳನ್ನು ಅವಮಾನಕಾರಿ ರೀತಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ವಲಸೆ ನೀತಿ ಮತ್ತು ಜನ್ಮಸಿದ್ಧ ಪೌರತ್ವದ ಕುರಿತು ತೀವ್ರ ಟೀಕೆಗಳನ್ನು ಮಾಡಲಾಗಿತ್ತು.
ಟ್ರಂಪ್ ಟೀಕೆ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದು, ಇಂತಹ ಹೇಳಿಕೆಗಳು ಅಜ್ಞಾನಪೂರ್ಣವಾಗಿದ್ದು, ಅಸಮಂಜಸ ಹಾಗೂ ಕೆಟ್ಟ ಅಭಿರುಚಿಯುಳ್ಳದ್ದಾಗಿದೆ ಎಂದು ಹೇಳಿದ್ದಾರೆ.
ಭಾರತ–ಅಮೆರಿಕ ಸಂಬಂಧಗಳು ದೀರ್ಘಕಾಲದಿಂದ ಪರಸ್ಪರ ಗೌರವ ಮತ್ತು ಹಂಚಿಕೊಂಡ ಹಿತಾಸಕ್ತಿಗಳ ಮೇಲೆ ನಿರ್ಮಿತವಾಗಿವೆ, ಈ ರೀತಿಯ ಮಾತುಗಳು ಆ ಸಂಬಂಧದ ನೈಜ ಸ್ವರೂಪವನ್ನು ಪ್ರತಿಬಿಂಬಿಸುವುದಿಲ್ಲ ಎಂದು ತಿಳಿಸಿದ್ದಾರೆ.
ವಿವಾದ ಹೆಚ್ಚಾಗುತ್ತಿದ್ದಂತೆ ಅಮೆರಿಕಾ ಕೂಡ ಸ್ಪಷ್ಟನೆ ನೀಡಲು ಮುಂದಾಗಿದೆ. ಅಮೆರಿಕದ ರಾಯಭಾರ ಕಚೇರಿ, ಟ್ರಂಪ್ ಭಾರತವನ್ನು “ಮಹಾನ್ ದೇಶ” ಎಂದು ಹಾಗೂ ತಮ್ಮ “ಒಳ್ಳೆಯ ಸ್ನೇಹಿತನ ದೇಶ” ಎಂದು ಹೇಳಿರುವುದಾಗಿ ತಿಳಿಸಿದೆ. ಆದರೆ, ಈ ಹೇಳಿಕೆ ಯಾವ ಸಂದರ್ಭದಲ್ಲಿ ನೀಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಲಾಗಿಲ್ಲ.
ಈ ಘಟನೆ ಭಾರತದಲ್ಲಿ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು ಟ್ರಂಪ್ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದು, ಕೇಂದ್ರ ಸರ್ಕಾರವು ಈ ವಿಚಾರ ಕುರಿತು ಧ್ವನಿ ಎತ್ತಬೇಕು ಎಂದು ಆಗ್ರಹಿಸಿವೆ. ಭಾರತೀಯರು ಅಮೆರಿಕದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನೂ ಕೆಲವರು ನೆನಪಿಸಿದ್ದಾರೆ.
.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ರಂಪ್ ಅವರ ಪೋಸ್ಟ್ ಅನ್ನು ಉಲ್ಲೇಖಿಸಿ, “ಮೋದಿಯ ಆತ್ಮೀಯ ಸ್ನೇಹಿತ” ಇಂತಹ ಅವಮಾನಕಾರಿ ಭಾಷೆಯನ್ನು ಹಂಚಿಕೊಂಡಿರುವುದು ಗಂಭೀರ ವಿಷಯ ಎಂದು ಹೇಳಿದ್ದಾರೆ.
ಮೈಕಲ್ ಸಾವೇಜ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾರತ, ಚೀನಾ ಸೇರಿದಂತೆ ಹಲವು ದೇಶಗಳಿಂದ ಆಗುವ ವಲಸೆಯನ್ನು ತೀವ್ರವಾಗಿ ಟೀಕಿಸಲಾಗಿದ್ದು, “ಹೆಲ್‌ಹೋಲ್ಸ್” ಎಂದು ಹೀಯಾಳಿಸಲಾಗಿದೆ. ಅಲ್ಲದೆ, ಭಾರತ ಮತ್ತು ಚೀನಾದ ವಲಸಿಗರನ್ನು “ಲ್ಯಾಪ್‌ಟಾಪ್ ಹೊಂದಿರುವ ಗ್ಯಾಂಗ್ಸ್ಟರ್‌ಗಳು” ಎಂದು ಅವಮಾನಕಾರಿ ರೀತಿಯಲ್ಲಿ ಉಲ್ಲೇಖಿಸಿರುವುದು ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹೇಳಿಕೆಗಳು ಅಮೆರಿಕದ ವಲಸೆ ನೀತಿ ಮತ್ತು ಜನ್ಮಸಿದ್ಧ ಪೌರತ್ವದ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ತೀವ್ರಗೊಳ್ಳುವಂತೆ ಮಾಡಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



