ಪಹಲ್ಗಾಮ್ ದಾಳಿಗೆ ಒಂದು ವರ್ಷ: ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ಎಂದಿಗೂ ತಲೆಬಾಗಲ್ಲ; ಶತ್ರುಗಳಿಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್
ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಎಂಬ ಸುಂದರ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಸಂಭ್ರಮದಲ್ಲಿದ್ದರು. ಪ್ರವಾಸಿಗರು ತೆರೆದ ಕಣಿವೆಯಲ್ಲಿ ಆನಂದಿಸುತ್ತಿದ್ದಾಗ ಇದ್ದಕ್ಕಿದ್ದಂತೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಆ ಪ್ರದೇಶಕ್ಕೆ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು.

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದು ವರ್ಷ ಪೂರ್ಣಗೊಂಡಿದ್ದು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಾಳಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಿ, ಗೌರವ ಸಲ್ಲಿಸಿದ್ದಾರೆ. ಜೊತೆಗೆ ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ಎಂದಿಗೂ ತಲೆಬಾಗುವುದಿಲ್ಲ ಎಂದು ಶತ್ರುಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 26 ಮಂದಿಗೆ ಸಂತಾಪ ಸೂಚಿಸಿದ್ದಾರೆ.
ಕಳೆದ ವರ್ಷ ಈ ದಿನದಂದು ನಡೆದ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಮುಗ್ಧ ಜೀವಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ನಷ್ಟವನ್ನ ನಿಭಾಯಿಸುತ್ತಿರುವ ದುಃಖಿತ ಕುಟುಂಬಗಳೊಂದಿಗೆ ನನ್ನ ಆಲೋಚನೆಗಳು ಸಹ ಇವೆ. ಒಂದು ರಾಷ್ಟ್ರವಾಗಿ, ನಾವು ದುಃಖ ಮತ್ತು ದೃಢಸಂಕಲ್ಪದಲ್ಲಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತ ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ. ಭಯೋತ್ಪಾದಕರ ಹೇಯ ಯೋಜನೆಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಗುಡುಗಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಎಂಬ ಸುಂದರ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಸಂಭ್ರಮದಲ್ಲಿದ್ದರು. ಪ್ರವಾಸಿಗರು ತೆರೆದ ಕಣಿವೆಯಲ್ಲಿ ಆನಂದಿಸುತ್ತಿದ್ದಾಗ ಇದ್ದಕ್ಕಿದ್ದಂತೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಆ ಪ್ರದೇಶಕ್ಕೆ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದರು.
ಈ ವೇಳೆ ಪ್ರವಾಸಿಗರ ಮೇಲೆ ಏಕಾಏಕಿ ದಾಳಿ ನಡೆಸಿದ ಉಗ್ರರು, ಹಿಂದೂಗಳನ್ನು ಹುಡುಕಿ ಹುಡುಕಿ ಹತ್ಯೆಗೈದರು. ಈ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಹಲವರು ಗಾಯಗೊಂಡರು. ಕಣ್ಣೆದುರೇ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿತು. ಹೆಣ್ಣೊಬ್ಬಳು ತನ್ನ ಪತಿಯ ಮೃತದೇಹದ ಮುಂದೆ ಕುಳಿತು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಅಮಾಯಕ ಜೀವಗಳನ್ನು ಬಲಿ ಪಡೆದ ಉಗ್ರರ ಈ ಕೃತ್ಯಕ್ಕೆ ಭಾರತ ಮೌನವಾಗಿರಲಿಲ್ಲ. ದಾಳಿ ನಡೆದ ಕೇವಲ 15 ದಿನಗಳಲ್ಲಿ, ಅಂದರೆ ಮೇ 7ರಂದು ಭಾರತೀಯ ವಾಯುಪಡೆ ಮತ್ತು ವಿಶೇಷ ಪಡೆಗಳು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿತ್ತು. ಇದರ ಗುರಿ ಲಷ್ಕರ್-ಎ-ತೊಯ್ಬಾ (LeT), ಜೈಶ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಹುಟ್ಟಡಗಿಸುವುದಾಗಿತ್ತು.
ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದ ಒಳಗಿರುವ ಉಗ್ರರ ಒಂಬತ್ತು ಪ್ರಮುಖ ಅಡಗುತಾಣಗಳನ್ನು ಧೂಳೀಪಟ ಮಾಡಿದವು. ಲಾಹೋರ್ ಸಮೀಪದ 200 ಎಕರೆ ವಿಸ್ತೀರ್ಣದ ಲಷ್ಕರ್ ಕೇಂದ್ರ ಕಚೇರಿ ಮುರಿಡ್ಕೆ ಅಕ್ಷರಶಃ ಸ್ಮಶಾನವಾಯಿತು.
ಜೈಷ್-ಇ-ಮೊಹಮ್ಮದ್‌ನ ಭದ್ರಕೋಟೆಯಾಗಿದ್ದ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಕ್ಯಾಂಪಸ್ ಅನ್ನು ಭಾರತೀಯ ಪಡೆಗಳು ಗುರಿಯಾಗಿಸಿಕೊಂಡವು. ಈ ದಾಳಿಯಲ್ಲಿ ಮಸೂದ್ ಅಜರ್ ಕೇವಲ ತನ್ನ ನೆಲೆಗಳನ್ನಷ್ಟೇ ಅಲ್ಲ, ತನ್ನ ಕುಟುಂಬದ 10 ಸದಸ್ಯರನ್ನೂ ಕಳೆದುಕೊಂಡಿದ್ದರು ಪಾಕ್ ಮಾಧ್ಯಮಗಳೇ ಒಪ್ಪಿಕೊಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



