ದೇಶ

ಸಂಸತ್ ಆವರಣದಲ್ಲಿ ಬಸವ ಜಯಂತಿ: ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಹೆಚ್.ಡಿ ಕುಮಾರಸ್ವಾಮಿ!

ಜಗಜ್ಯೋತಿ ಬಸವಣ್ಣನವರ ಸಂದೇಶಗಳು ಇಂದಿಗೂ ಎಂದಿಗೂ ಎಂದೆಂದಿಗೂ ನಮಗೆಲ್ಲರಿಗೂ ಅನುಕರಣೆಯ ಮತ್ತು ಪ್ರೇರಣದಾಯಕ ಆಗಿವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸಂಸತ್ ಆವರಣದಲ್ಲಿ ಬಸವ ಜಯಂತಿ: ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಹೆಚ್.ಡಿ ಕುಮಾರಸ್ವಾಮಿ!
ಕೇಂದ್ರ ಸಚಿವರಾದ ಕಿರಣ್ ರಿಜಿಜು, ವಿ. ಸೋಮಣ್ಣ ಅವರೊಂದಿಗೆ ಎಚ್. ಡಿ. ಕುಮಾರಸ್ವಾಮಿ
Published On :

ನವದೆಹಲಿ: ಇಂದು ಬಸವ ಜಯಂತಿ ಪ್ರಯುಕ್ತ ಸಂಸತ್ ಭವನದ ಆವರಣದಲ್ಲಿರುವ ಪ್ರೇರಣಾ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಕಿರಣ್ ರಿಜಿಜು ಹಾಗೂ ವಿ.ಸೋಮಣ್ಣ ಅವರೊಂದಿಗೆ ಪುಷ್ಪನಮನ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಜಗಜ್ಯೋತಿ ಬಸವಣ್ಣನವರ ಸಂದೇಶಗಳು ಇಂದಿಗೂ ಎಂದಿಗೂ ಎಂದೆಂದಿಗೂ ನಮಗೆಲ್ಲರಿಗೂ ಅನುಕರಣೆಯ ಮತ್ತು ಪ್ರೇರಣದಾಯಕ ಆಗಿವೆ ಎಂದರು.

12ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಹಾಗೂ ಜನರ ಆಡಳಿತದ ಬಗ್ಗೆ ಬಸವಣ್ಣನವರು ಆಲೋಚನೆ ಮಾಡಿದರು. ಆ ಸಂದರ್ಭದಲ್ಲಿಯೇ ಪುರುಷ, ಸ್ತ್ರೀ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಸ್ಥಾನಮಾನಗಳನ್ನು ದೊರಕಿಸಿಕೊಡುವಲ್ಲಿ ಅವರು ಶ್ರಮಿಸಿದರು. ಅಂತಹ ಮಹಾನ್ ಚೇತನ ಬಿಟ್ಟು ಹೋದ ಸಂದೇಶಗಳು ಮತ್ತು ಆದರ್ಶಗಳು ನಮಗೆ ದೊಡ್ಡ ಆಸ್ತಿಯಾಗಿವೆ ಎಂದು ಹೇಳಿದರು.

12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಬೀಜಾಂಕುರ ಹಾಕಿದ್ದ ಬಸವಣ್ಣನವರು, ಸರ್ವರ ಸಾಮರಸ್ಯವನ್ನು ಒತ್ತಿ ಹೇಳಿದ್ದರು. ಜೊತೆಗೆ ಎಲ್ಲ ಸಮಾಜಗಳಿಗೆ ಸಮಾನ ಪ್ರಾತಿನಿಧ್ಯ ನೀಡಿ ಅನುಭವ ಮಟ್ಟದಲ್ಲಿ ಕೂರಿಸಿದ್ದರು ಎಂದು ಕುಮಾರಸ್ವಾಮಿ ಹೇಳಿದರು.

ರಾಷ್ಟ್ರದ ಸಂಸತ್ ಭವನದ ಆವರಣದಲ್ಲಿ ಸ್ಥಾಪಿಸಲಾಗಿರುವ ಬಸವಣ್ಣನವರ ಪ್ರತಿಮೆಗೆ ಪುಷ್ಪ ನಮನ ಅರ್ಪಿಸುವ ಅವಕಾಶ ಸಿಕ್ಕಿದ್ದು ನನ್ನ ಸುಕೃತ. ಈ ಕಾರ್ಯಕ್ರಮದಲ್ಲಿ ಸಚಿವರಾದ ಕಿರಣ್ ರಿಜಿಜು ಹಾಗೂ ಸೋಮಣ್ಣ ಅವರೊಂದಿಗೆ ಭಾಗವಹಿಸಿದ್ದು ಬಹಳ ಸಂತೋಷ ಉಂಟು ಮಾಡಿದೆ. ಅಲ್ಲದೆ ಅನೇಕ ಸ್ವಾಮೀಜಿಗಳು ಹಾಗೂ ವಿವಿಧ ಕಡೆಗಳಿಂದ ಬಂದಿದ್ದ ಬಸವ ಅನುಯಾಯಿಗಳನ್ನು ಭೇಟಿ ಮಾಡಿದ್ದು ನನಗೆ ಸಂತಸ ತಂದಿದೆ ಎಂದು ಕುಮಾರಸ್ವಾಮಿ ನುಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.