ದೇಶ

ಎಲ್ಲಾ ಬರೀ ಡ್ರಾಮಾ: ಪ್ರಧಾನಿ ಮೋದಿ 'Jhalmuri' ಖರೀದಿ ಕುರಿತು Mamata Banerjee ಕೆಂಡ!

ಪ್ರಧಾನಿ ಬರುವ ಮೊದಲೇ ಅಲ್ಲಿ ಕ್ಯಾಮೆರಾಗಳು ಹೇಗೆ ಸಿದ್ಧವಾಗಿದ್ದವು? ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲವೇ ಅಲ್ಲ. ಪ್ರಧಾನಿಯವರ ಜೇಬಿನಲ್ಲಿ ಸರಿಯಾಗಿ 10 ರೂಪಾಯಿ ನೋಟು ಹೇಗಿತ್ತು?

ಎಲ್ಲಾ ಬರೀ ಡ್ರಾಮಾ: ಪ್ರಧಾನಿ ಮೋದಿ 'Jhalmuri' ಖರೀದಿ ಕುರಿತು Mamata Banerjee ಕೆಂಡ!
ಜುಲ್ಮುರಿ ತಿಂದ ಪ್ರಧಾನಿ ಮೋದಿ ಮತ್ತು ಟೀಕಿಸಿದ ಮಮತಾ ಬ್ಯಾನರ್ಜಿ
Published On :

ಕೋಲ್ಕತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಪ್ರಚಾರದ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಸಿ 'ಝಲ್ ಮುರಿ' (ಖಾರಾ ಮಂಡಕ್ಕಿ) ಸವಿದ ಘಟನೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಾರವಾಗಿಯೇ ಟೀಕಿಸಿದ್ದಾರೆ.

ಇದೇ ಏಪ್ರಿಲ್ 19 ರಂದು ಪಶ್ಚಿಮ ಬಂಗಾಳದ ಝಾರ್ಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆಬದಿಯ ವ್ಯಾಪಾರಿಗೆ ಝಲ್ಮುರಿ (jhalmuri) ತಿಂದು 10 ರೂಪಾಯಿ ನಗದು ಪಾವತಿಸಿದ್ದರು.

ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದವು. ಅಲ್ಲದೆ ಮೋದಿ 10 ರೂ ನಗದು ಕೊಟ್ಟ ವಿಚಾರವಾಗಿಯೂ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.

ಈ ನಡುವೆ ಈ ಪ್ರಕರಣಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರವೇಶ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜುಲ್ಮುರಿ ಸೇವನೆ ಕುರಿತು ಕಿಡಿಕಾರಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಮಮತಾ ಬ್ಯಾನರ್ಜಿ ಇದನ್ನು 'ಸ್ಕ್ರಿಪ್ಟೆಡ್ ಡ್ರಾಮಾ' ಎಂದು ಕರೆದಿದ್ದಾರೆ.

'ಮೋದಿ ಅವರು ಝಲ್ ಮುರಿ ಖರೀದಿಸಿದ್ದು ಮೊದಲೇ ಯೋಜಿತವಾದ ನಾಟಕ. ಪ್ರಧಾನಿ ಬರುವ ಮೊದಲೇ ಅಲ್ಲಿ ಕ್ಯಾಮೆರಾಗಳು ಹೇಗೆ ಸಿದ್ಧವಾಗಿದ್ದವು? ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲವೇ ಅಲ್ಲ. ಪ್ರಧಾನಿಯವರ ಜೇಬಿನಲ್ಲಿ ಸರಿಯಾಗಿ 10 ರೂಪಾಯಿ ನೋಟು ಹೇಗಿತ್ತು?

ಮೈಕ್ರೋಫೋನ್ ಅಳವಡಿಸಿದ್ದು ಏಕೆ? ಇದೆಲ್ಲವೂ ಪ್ರಚಾರಕ್ಕಾಗಿ ಮಾಡಿದ ತಂತ್ರ. ಈ ಇಡೀ ಪ್ರಸಂಗವನ್ನು ಅವರ ಭದ್ರತಾ ಪಡೆ (SPG) ಮೊದಲೇ ನಿಗದಿಪಡಿಸಿತ್ತು. ಇದು ಹೇಗೆ ಸಾಧ್ಯ ಎಂದು ಅವರು ಲೇವಡಿ ಮಾಡಿದ್ದಾರೆ.

ಏನಿದು ಘಟನೆ?

ಭಾನುವಾರ ಝಾರ್‌ಗ್ರಾಮ್‌ನಲ್ಲಿ ಪ್ರಚಾರ ಮುಗಿಸಿ ಹಿಂದಿರುಗುವಾಗ ಪ್ರಧಾನಿ ಮೋದಿ ಅವರು ರಸ್ತೆ ಬದಿಯ ಗಾಡಿಯೊಂದರ ಬಳಿ ನಿಂತು ಝಲ್ ಮುರಿ ಖರೀದಿಸಿದ್ದರು. ವ್ಯಾಪಾರಿಗೆ ಹತ್ತು ರೂಪಾಯಿ ನೀಡಿ, "ನಾನು ಈರುಳ್ಳಿ ತಿನ್ನುತ್ತೇನೆ, ಆದರೆ ಜನರ ತಲೆ ತಿನ್ನುವುದಿಲ್ಲ" ಎಂದು ತಮಾಷೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪ್ರಚಾರದ ತಂತ್ರ ಆರೋಪ

ಇನ್ನು ಪ್ರಧಾನಿ ಮೋದಿ ಅವರು 'ಝಲ್ ಮುರಿ' ಸವಿಯುವ ಮೂಲಕ ತಳಮಟ್ಟದ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದಾರೆ. ಇದು ಅವರ "ಸಾಮಾನ್ಯ ವ್ಯಕ್ತಿ" (Common Man) ಎಂಬ ಬಿಂಬವನ್ನು ಹೆಚ್ಚಿಸಲು ಮತ್ತು ಬಂಗಾಳಿ ಸಂಸ್ಕೃತಿಯೊಂದಿಗೆ ಬೆರೆಯಲು ಮಾಡಿದ ತಂತ್ರ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇತರೆ ನಾಯಕರಿಗೆ ತೊಂದರೆ

ಇತ್ತ ತೃಣಮೂಲ ಕಾಂಗ್ರೆಸ್ (TMC) ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಘಟನೆಯಿಂದಾಗಿ ಬೇರೆ ನಾಯಕರ ಪ್ರಚಾರಕ್ಕೆ ತೊಂದರೆಯಾಗಿದೆ ಎಂದು ಗಂಭೀರ ಆರೋಪ ಮಾಡಿದೆ. ಪ್ರಧಾನಿಯವರ ಈ ಹಠಾತ್ ನಿಲುಗಡೆಯಿಂದಾಗಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಅವರ ಪತ್ನಿ ಕಲ್ಪನಾ ಸೊರೇನ್ ಅವರ ಹೆಲಿಕಾಪ್ಟರ್‌ಗೆ ಇಳಿಯಲು ಅನುಮತಿ ಸಿಗಲಿಲ್ಲ, ಇದರಿಂದ ಅವರು ಪ್ರಚಾರ ಮಾಡಲಾಗದೆ ರಾಂಚಿಗೆ ಮರಳಬೇಕಾಯಿತು ಎಂದು ಟಿಎಂಸಿ ದೂರಿದೆ.

ಮತದಾರರ ಮೇಲೆ ಪ್ರಭಾವ

ಝಾರ್‌ಗ್ರಾಮ್‌ನಂತಹ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಇಂತಹ ಸಣ್ಣ ಘಟನೆಗಳು ಮತದಾರರ ಮೇಲೆ ಹೆಚ್ಚಿನ ಪ್ರಭಾವ ಬೀರಬಹುದು. ವ್ಯಾಪಾರಿಯೊಂದಿಗಿನ ಮೋದಿ ಸಂಭಾಷಣೆ ಮತ್ತು "ಈರುಳ್ಳಿ ತಿನ್ನುತ್ತೇನೆ, ಜನರ ತಲೆ ತಿನ್ನುವುದಿಲ್ಲ" ಎಂಬ ಅವರ ಹಾಸ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಟಸ್ಥ ಮತದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ಘಟನೆಯು ಕೇವಲ ತಿಂಡಿ ಸವಿಯುವ ವಿಷಯವಾಗಿ ಉಳಿಯದೆ, ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವಿನ ತೀವ್ರ ಪೈಪೋಟಿಯ ಸಾಕ್ಷಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.