ದೇಶ

ಮಧ್ಯಪ್ರದೇಶದ ರಾಜಕೀಯ ಚಿತ್ರಣವನ್ನು ಬದಲಿಸಲಿವೆ ಕೇರಳ, ತಮಿಳುನಾಡಿನ ವಿಧಾನಸಭಾ ಚುನಾವಣೆ: ಹೇಗೆ?: ಇಲ್ಲಿದೆ ಮಾಹಿತಿ

ಕೇರಳ ಮತ್ತು ತಮಿಳುನಾಡಿನ ಎರಡು ಕ್ಷೇತ್ರಗಳ ಮತದಾನ ಫಲಿತಾಂಶಗಳು, ದಕ್ಷಿಣ ರಾಜ್ಯಗಳಿಂದ ಸುಮಾರು 2,000 ಕಿಲೋಮೀಟರ್ ದೂರದಲ್ಲಿರುವ ಮಧ್ಯಪ್ರದೇಶ ರಾಜ್ಯದಲ್ಲಿ ತೀವ್ರ ರಾಜಕೀಯ ಚಟುವಟಿಕೆಗೆ...

ಮಧ್ಯಪ್ರದೇಶದ ರಾಜಕೀಯ ಚಿತ್ರಣವನ್ನು ಬದಲಿಸಲಿವೆ ಕೇರಳ, ತಮಿಳುನಾಡಿನ ವಿಧಾನಸಭಾ ಚುನಾವಣೆ: ಹೇಗೆ?: ಇಲ್ಲಿದೆ ಮಾಹಿತಿ
Published On :

ಭೋಪಾಲ್: ಕೇರಳ ಮತ್ತು ತಮಿಳುನಾಡಿನ ಎರಡು ಕ್ಷೇತ್ರಗಳ ಮತದಾನ ಫಲಿತಾಂಶಗಳು, ದಕ್ಷಿಣ ರಾಜ್ಯಗಳಿಂದ ಸುಮಾರು 2,000 ಕಿಲೋಮೀಟರ್ ದೂರದಲ್ಲಿರುವ ಮಧ್ಯಪ್ರದೇಶ ರಾಜ್ಯದಲ್ಲಿ ತೀವ್ರ ರಾಜಕೀಯ ಚಟುವಟಿಕೆಗೆ ಕಾರಣವಾಗುವ ಸಾಧ್ಯತೆ ಇದೆ.

ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಇಬ್ಬರು ಸಂಸದರು – ಕೇಂದ್ರ ಸಚಿವ ಡಾ. ಎಲ್. ಮುರುಗನ್ ಮತ್ತು ಜಾರ್ಜ್ ಕುರಿಯನ್ – ಕ್ರಮವಾಗಿ ತಮಿಳುನಾಡು ಮತ್ತು ಕೇರಳದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರ ಚುನಾವಣಾ ಭವಿಷ್ಯ ಮಧ್ಯಪ್ರದೇಶದ ರಾಜ್ಯಸಭಾ ಸ್ಥಾನಗಳನ್ನು ಖಾಲಿ ಮಾಡುವ ಸಾಧ್ಯತೆಯಿದ್ದು, ರಾಜ್ಯದ ರಾಜಕೀಯ ವಲಯದಲ್ಲಿ ಚುರುಕು ಚಟುವಟಿಕೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ಈ ತಿಂಗಳು ಮಧ್ಯಪ್ರದೇಶದ ಮೂರು ರಾಜ್ಯಸಭಾ ಸ್ಥಾನಗಳು ಈಗಾಗಲೇ ಖಾಲಿಯಾಗಿವೆ; ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮತ್ತು ಬಿಜೆಪಿ ನಾಯಕರು ಡಾ. ಸುಮೇರ್ ಸಿಂಗ್ ಸೊಲಂಕಿ ಹಾಗೂ ಜಾರ್ಜ್ ಕುರಿಯನ್ ಅವರ ಅವಧಿ ಪೂರ್ಣಗೊಂಡಿದೆ.

ಈಗ, ಮುರುಗನ್ ತಮಿಳುನಾಡಿನ ಚುನಾವಣೆಯಲ್ಲಿ ಗೆದ್ದು ಅಲ್ಲಿ ವಿಧಾನಸಭೆಗೆ ಸೇರುವ ಪರಿಸ್ಥಿತಿ ಉಂಟಾದರೆ, ಮಧ್ಯಪ್ರದೇಶದಿಂದ ಮತ್ತೊಂದು ರಾಜ್ಯಸಭಾ ಸ್ಥಾನ ಖಾಲಿಯಾಗಲಿದೆ. ಇದರಿಂದ ತೀವ್ರ ರಾಜಕೀಯ ಪೈಪೋಟಿ ಆರಂಭವಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಎರಡರಲ್ಲೂ ಹೊಸ ರಾಜಕೀಯ ಸಮೀಕರಣಗಳು, ಪುನರ್‌ಸಂಯೋಜನೆಗಳು ಮತ್ತು ಅಧಿಕಾರದ ಹೊಸ ಸಮತೋಲನಗಳಿಗೆ ದಾರಿ ತೆರೆದುಕೊಳ್ಳುವ ಸಾಧ್ಯತೆ ಇದೆ.

ಸಂಖ್ಯೆಗಳ ಲೆಕ್ಕಾಚಾರ

ರಾಜ್ಯಸಭೆ ಚುನಾವಣೆಯು ಒಂದು ಸಂಕೀರ್ಣ ಸೂತ್ರದ ಮೇಲೆ ಆಧಾರಿತವಾಗಿದೆ: (ಒಟ್ಟು ಶಾಸಕರ ಸಂಖ್ಯೆ ÷ (ಖಾಲಿ ಸ್ಥಾನಗಳ ಸಂಖ್ಯೆ + 1) + 1). ಮಧ್ಯಪ್ರದೇಶದಲ್ಲಿ 230 ಮಂದಿ ಶಾಸಕರಿದ್ದಾರೆ. ಮೂರು ಸ್ಥಾನಗಳು ಖಾಲಿಯಾಗಿವೆ ಎಂದು ತೆಗೆದುಕೊಂಡರೆ, ಸೂತ್ರ ಹೀಗಾಗುತ್ತದೆ: (230 ÷ (3 + 1) + 1). ಇದರಿಂದ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಬೇಕಾಗುವ ಕನಿಷ್ಠ ಮತಗಳ ಪ್ರಮಾಣ 58 ಆಗುತ್ತದೆ.

ಬಿಜೆಪಿಗೆ 160 ಕ್ಕೂ ಹೆಚ್ಚು ಶಾಸಕರಿರುವುದರಿಂದ, ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸಾಮರ್ಥ್ಯವಿದೆ. ಕಾಂಗ್ರೆಸ್ ಬಳಿ 65 ಶಾಸಕರಿದ್ದು, ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲುವ ಸ್ಥಿತಿಯಲ್ಲಿತ್ತು. ಆದರೆ ಇಲ್ಲಿ ಒಂದು ತಿರುವು ಇದೆ. ವಂಚನೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪಾದ ನಂತರ ಕಾಂಗ್ರೆಸ್‌ನ ರಾಜೇಂದ್ರ ಭಾಟಿ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ. ಮತ್ತೊಬ್ಬ ಕಾಂಗ್ರೆಸ್ ಶಾಸಕರಾದ ಮುಕೇಶ್ ಮಲ್ಹೋತ್ರಾ ಅವರ ವಿರುದ್ಧ ಬಾಕಿ ಇದ್ದ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ಮರೆಮಾಚಿದ ಕಾರಣ, ಅವರ ಚುನಾವಣೆಯನ್ನು ಅಮಾನ್ಯ ಎಂದು ಘೋಷಿಸಲಾಗಿದೆ.

ಕಾಂಗ್ರೆಸ್‌ನಿಂದ ಬಿಜೆಪಿ ಸೇರಿರುವ ನಿರ್ಮಲಾ ಸಪ್ರೇ ಅವರಿಗೆ ಸಹ ಮತದಾನ ಹಕ್ಕಿಲ್ಲ. ಈ ಎಲ್ಲದರಿಂದ ಕಾಂಗ್ರೆಸ್‌ನ ಪರಿಣಾಮಕಾರಿ ಮತಶಕ್ತಿ 62 ಕ್ಕೆ ಇಳಿದಿದೆ, ಅಂದರೆ ಅಗತ್ಯ ಪ್ರಮಾಣಕ್ಕಿಂತ ಕೇವಲ ನಾಲ್ಕು ಮತಗಳು ಹೆಚ್ಚು. ಹೀಗಾಗಿ ಕೇವಲ ನಾಲ್ಕು ಶಾಸಕರು ಕ್ರಾಸ್‌ವೋಟಿಂಗ್ ಮಾಡಿದರೂ, ಕಾಂಗ್ರೆಸ್‌ಗೆ ಖಚಿತವಾಗಿದ್ದ ಒಂದು ಸ್ಥಾನ ಕೈತಪ್ಪುವ ಸಾಧ್ಯತೆ ಇದೆ.

ಇತ್ತೀಚಿನ ಬೆಳವಣಿಗೆಗಳು ಕೂಡ ಆತಂಕಕಾರಿಯಾಗಿದೆ. ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಎರಡೂ ಪಕ್ಷಗಳ ಶಾಸಕರು ಒಂದೇ ವೇದಿಕೆ ಹಂಚಿಕೊಳ್ಳುವುದು, ಸಿದ್ಧಾಂತಾತ್ಮಕ ಘರ್ಷಣೆಗಳು – ಇವೆಲ್ಲವು ಒಳಗಿನ ಬಿರುಕುಗಳನ್ನು ಬಯಲಿಗೆಳೆಯುತ್ತಿವೆ. ಬಿಜೆಪಿಯ ಕಡೆ ನೋಡಿದರೆ, ಅದರ ಬಳಿ 47 ಹೆಚ್ಚುವರಿ ಮತಗಳಿದ್ದು, ಅಗತ್ಯವಾದ 58 ಮತಗಳ ಕೋಟಾಗಿಂತ 11 ಕಡಿಮೆ ಇದೆ. ಈ ಅಂತರವನ್ನು ತುಂಬಲು, ಕಾಂಗ್ರೆಸ್‌ನ ಕೆಲ ಶಾಸಕರನ್ನು ತನ್ನತ್ತ ಸೆಳೆಯುವ ಮೂಲಕ, ಆ ಪಕ್ಷದ ಒಳಜಗಳವನ್ನು ಬಳಸಿಕೊಳ್ಳುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗುವ ಸಾಧ್ಯತೆಯಿದೆ.

ಈಗ ಮುರುಗನ್ ಅವರ ಸ್ಥಾನವೂ ಖಾಲಿಯಾಗಿದೆಯೆಂದರೆ, ಕೋಟಾ 47ಕ್ಕೆ ಇಳಿದು, ಸ್ಪರ್ಧೆಯನ್ನು ಇನ್ನಷ್ಟು ಕಠಿಣಗೊಳಿಸುತ್ತದೆ. ಇದಕ್ಕೆ ಇತರ ಪರಿಣಾಮಗಳೂ ಇವೆ. ಮುರುಗನ್ ಮತ್ತು ಕುರಿಯನ್ ರಾಜ್ಯ ರಾಜಕೀಯಕ್ಕೆ ತಿರುಗಿದರೆ, ಕೇಂದ್ರ ಸಚಿವ ಸಂಪುಟದಲ್ಲೂ ಖಾಲಿ ಸ್ಥಾನಗಳು ಉಂಟಾಗುತ್ತವೆ. ಮಧ್ಯಪ್ರದೇಶದ ನಾಯಕರು ಈಗಾಗಲೇ ‘ಟೀಮ್ ಮೋದಿ’ಯಲ್ಲಿ ಸ್ಥಾನಕ್ಕಾಗಿ ಕಣ್ಣಿಟ್ಟಿದ್ದಾರೆ. ಹರ್ಷ ಚೌಹಾನ್ ಮತ್ತು ರಂಜನಾ ಬಾಘೇಲ್ ಅವರ ಹೆಸರುಗಳು ಮುಂಚೂಣಿಯಲ್ಲಿದೆ.

ಇದೇ ವೇಳೆ, ಕಾಂಗ್ರೆಸ್ ಶಿಬಿರದಲ್ಲೂ ಚರ್ಚೆಗಳು ಜೋರಾಗಿವೆ. ದಿಗ್ವಿಜಯ್ ಸಿಂಗ್ ರಾಜ್ಯಸಭೆಗೆ ಮೂರನೇ ಅವಧಿಗೆ ಸ್ಪರ್ಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದ ನಂತರ, ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಲಾಬಿ ಆರಂಭವಾಗಿದೆ. ದಲಿತ, ಬ್ರಾಹ್ಮಣ, ಈಗ ಸಿಂಧಿ ಪ್ರತಿನಿಧಿತ್ವದ ಬೇಡಿಕೆಗಳೂ ಮುಂದಕ್ಕೆ ಬಂದಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಸೂಕ್ಷ್ಮ ಸಮತೋಲನದ ಚಟುವಟಿಯಾಗಿ ಪರಿಣಮಿಸಿದೆ.

ಈ ಅನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸುತ್ತಿರುವವರು ಭಾರತ ಆದಿವಾಸಿ ಪಕ್ಷದ ಏಕೈಕ ಶಾಸಕರಾದ ಕಮ್ಲೇಶ್ವರ್ ಡೋಡಿಯಾರ್; ಅವರು ತಮ್ಮ ಪಕ್ಷದಿಂದಲೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶವನ್ನು ಸೂಚಿಸಿದ್ದಾರೆ. ಇಷ್ಟು ಕಠಿಣ ಸ್ಪರ್ಧೆಯಲ್ಲಿ ಒಂದೇ ಒಂದು ಮತವೂ ಅಂತಿಮ ಫಲಿತಾಂಶವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.