ದೇಶದ ಕೋಟ್ಯಂತರ ಜನರಿಗೆ ಮಾಡಿದ ಅಪಮಾನ; ಖರ್ಗೆ ವಿರುದ್ಧ ಹಿಮಂತ್ ಬಳಸಿದ ಭಾಷೆಗೆ ಪ್ರಧಾನಿ ಸಮ್ಮತಿ ಇದೆಯೇ: ಪ್ರಿಯಾಂಕಾ ಪ್ರಶ್ನೆ
ಖರ್ಗೆ ಅವರು ದೇಶದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು. ಅವರು ಕೇವಲ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಲ್ಲ, ಬದಲಿಗೆ ದಲಿತರು ಮತ್ತು ಶೋಷಿತ ವರ್ಗಗಳ ಧ್ವನಿಯಾಗಿದ್ದಾರೆ. ಅವರನ್ನು ಅವಮಾನಿಸುವುದು ದೇಶದ ಕೋಟ್ಯಂತರ ಜನರನ್ನು ಅವಮಾನಿಸಿದಂತೆ.

ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೀಡಿರುವ ಅವಹೇಳನಕಾರಿ ಹೇಳಿಕೆ ಸಂಬಂಧ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ, ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಹಿಮಂತ್ ಬಿಸ್ವಾ ಬಳಸಿದ ಭಾಷೆಯನ್ನು "ಸಂಪೂರ್ಣವಾಗಿ ನಾಚಿಕೆಗೇಡಿನ ಮತ್ತು ಸ್ವೀಕಾರಾರ್ಹವಲ್ಲ" ಎಂದು ಕರೆದಿದ್ದಾರೆ.
ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ಸಿಎಂ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕೇಂದ್ರ ಸಂಸ್ಥೆಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹಿಮಂತ ಬಿಸ್ವಾ ಶರ್ಮಾ, ಖರ್ಗೆ ಅವರಿಗೆ ವಯಸ್ಸಾದ ಕಾರಣದಿಂದ ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಖರ್ಗೆ ಅವರು ದೇಶದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು. ಅವರು ಕೇವಲ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಲ್ಲ, ಬದಲಿಗೆ ದಲಿತರು ಮತ್ತು ಶೋಷಿತ ವರ್ಗಗಳ ಧ್ವನಿಯಾಗಿದ್ದಾರೆ. ಅವರನ್ನು ಅವಮಾನಿಸುವುದು ದೇಶದ ಕೋಟ್ಯಂತರ ಜನರನ್ನು ಅವಮಾನಿಸಿದಂತೆ. ಅಸ್ಸಾಂ ಸಿಎಂ ಅವರ ಈ ಹೇಳಿಕೆಯನ್ನು ಪ್ರಧಾನಿ ಮೋದಿ ಅವರು ಬೆಂಬಲಿಸುತ್ತಾರೆಯೇ? ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹಿಮಂತ ಬಿಸ್ವ ಶರ್ಮಾ ಅವರ ಭಾಷೆಯು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ದಲಿತ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಯಾವಾಗ ಒಬ್ಬ ದಲಿತ ನಾಯಕ ಸತ್ಯವನ್ನು ಮಾತನಾಡುತ್ತಾರೋ, ಆಗ ಅವರನ್ನು ಅವಮಾನಿಸುವುದು ಇವರ ಹಳೆಯ ಚಾಳಿ ಎಂದು ಟೀಕಿಸಿದ್ದಾರೆ.
ಪ್ರಧಾನಿಗೆ ಮೋದಿಗೆ ನೇರವಾಗಿ ಪ್ರಶ್ನಿಸಿರುವ ರಾಹುಲ್ ಗಾಂಧಿ, "ಹಿಮಾಂತ ಶರ್ಮಾ ಅವರ ಈ ಭಾಷೆಯ ಬಳಕೆಯನ್ನು ನೀವು ಬೆಂಬಲಿಸುತ್ತೀರಾ? ನಿಮ್ಮ ಮೌನ ಅಸಹಾಯಕತೆಯಲ್ಲ, ಅದು ಸಮ್ಮತಿ ಎಂದು ಕಿಡಿ ಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



