ಭಾರತದ ರಾಜತಂತ್ರಕ್ಕೆ ಜಗತ್ತೇ ನಿಬ್ಬೆರಗು: ಸಂಘರ್ಷದ ನಡುವೆ ಯಾರಿಗೂ ಸಿಗದ ಸೌಲಭ್ಯ!; Hormuz ದಾಟಿದ 8ನೇ ಹಡಗು; ಇರಾನ್ ನಿಂದ ವಿಶೇಷ ಸಂದೇಶ!
ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ ಅವರು ಹಾರ್ಮೋಜ್ ನಿಂದ ಎಲ್‌ಪಿಜಿ ಟ್ಯಾಂಕರ್ ಹಾದುಹೋಗಿರುವುದನ್ನು ‘ಭಾರತೀಯ ರಾಜತಾಂತ್ರಿಕತೆಯ ಜಯ’ ಎಂದು ಕೊಂಡಾಡಿದ್ದರು.

ನವದೆಹಲಿ: ಮಧ್ಯಪ್ರಾಚ್ಯ ಯುದ್ಧಗ್ರಸ್ತವಾಗಿದ್ದರೂ ತನಗೆ ತೈಲದ ಸಮಸ್ಯೆ ಕಿಂಚಿತ್ತೂ ಎದುರಾಗದಂತೆ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ಭಾರತದ ನಿರ್ವಹಣೆ ಜಾಗತಿಕ ಮಟ್ಟದಲ್ಲಿ ಅಚ್ಚರಿ ಮೂಡಿಸಿದೆ.
ನಿರ್ಬಂಧಗಳ ಹೊರತಾಗಿಯೂ, ಯುದ್ಧಗ್ರಸ್ತ ಮಾರ್ಗದ ಮೂಲಕ ಅತಿ ಹೆಚ್ಚು ಹಡಗುಗಳನ್ನು ಸಾಗಣೆ ಮಾಡಿದ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಸಂಘರ್ಷ ಆರಂಭವಾದ ನಂತರ ಈ ವರೆಗೂ ಕನಿಷ್ಠ 8 ಭಾರತೀಯ ಹಡಗುಗಳು ಹೋರ್ಮುಜ್ ಜಲಸಂಧಿಯನ್ನು ದಾಟಿವೆ.
ಯುದ್ಧದ ನಡುವೆ ಶುಕ್ರವಾರ ಏಳನೇ ಭಾರತ ಧ್ವಜ ಹಾರಿಸಿರುವ ಎಲ್‌ಪಿಜಿ ಟ್ಯಾಂಕರ್ ‘ಗ್ರೀನ್ ಸಾನ್ವಿ’ ಹೋರ್ಮುಜ್ ಜಲಸಂಧಿಯನ್ನು ದಾಟಿದ ಸಂದರ್ಭದಲ್ಲಿ, ಇರಾನ್ ಭಾರತಕ್ಕೆ ವಿಶೇಷ ಸಂದೇಶವೊಂದನ್ನು ರವಾನಿಸಿರುವುದು ಭಾರತದ ರಾಜತಂತ್ರದ ಯಶಸ್ಸನ್ನು ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಮುಂಬೈಯಲ್ಲಿರುವ ಇರಾನ್ ದೂತಾವಾಸ ಕಚೇರಿ ಭಾರತ, ವಿಶೇಷವಾಗಿ ಗುಜರಾತ್, ನಮ್ಮ ‘ಸಾಮೂಹಿಕ ಇತಿಹಾಸದಲ್ಲಿ’ ಒಂದು ‘ಅತ್ಯಂತ ಮೌಲ್ಯವಾದ ಸ್ಥಾನ’ ಹೊಂದಿದೆ ಎಂದು ತಿಳಿಸಿದೆ.
ಇದಕ್ಕೂ ಮುನ್ನ ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ ಅವರು ಹಾರ್ಮೋಜ್ ನಿಂದ ಎಲ್‌ಪಿಜಿ ಟ್ಯಾಂಕರ್ ಹಾದುಹೋಗಿರುವುದನ್ನು ‘ಭಾರತೀಯ ರಾಜತಾಂತ್ರಿಕತೆಯ ಜಯ’ ಎಂದು ಕೊಂಡಾಡಿದ್ದರು. ಗುಜರಾತ್ ಉಪಮುಖ್ಯಮಂತ್ರಿಯ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ದೂತಾವಾಸ ಕಚೇರಿಯು ಈ ಹೇಳಿಕೆಯನ್ನು ನೀಡಿದೆ.
“ಭಾರತ, ವಿಶೇಷವಾಗಿ ಗುಜರಾತ್, ನಮ್ಮ ಸಂಯುಕ್ತ ಇತಿಹಾಸದಲ್ಲಿ ಅತಿ ಪ್ರೀತಿಪಾತ್ರ ಸ್ಥಾನವನ್ನು ಹೊಂದಿದೆ; ಭಾರತ ಶತಮಾನಗಳ ಹಿಂದೆ ನಮ್ಮ ನಾಡಿನ ಜನರನ್ನು ಆತ್ಮೀಯವಾಗಿ ಸ್ವಾಗತಿಸಿದೆ,” ಎಂದು ಇರಾನ್ ಮಹಾ ವಾಣಿಜ್ಯ ದೂತಾವಾಸವು ತಿಳಿಸಿದೆ. ಈ ಸಂದೇಶದಲ್ಲಿ ಬಹುಶಃ ಗುಜರಾತ್‌ನ ಪ್ರಾಚೀನ ಬಂದರು ಲೋಥಲ್‌ನ್ನು ಉಲ್ಲೇಖಿಸಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಲೋಥಲ್ ಸುಮಾರು 4,000 ವರ್ಷಗಳ ಹಿಂದೆ ಸಿಂಧೂ ಕಣಿವೆಯ ನಗರಗಳನ್ನು ಪರ್ಷಿಯನ್ ಕರಾವಳಿಯೊಂದಿಗೆ ಸಂಪರ್ಕಿಸುತ್ತಿತ್ತು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಈ ಶಾಶ್ವತ ನಾಗರಿಕತೆಯ ಬಂಧವನ್ನು ಆಧಾರವಾಗಿಸಿಕೊಂಡು, ಸ್ನೇಹ ಮತ್ತು ಸಹಕಾರದ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ಇರಾನ್ ತಿಳಿಸಿದೆ.
ಯುದ್ಧ ಆರಂಭವಾದ ನಂತರದಿಂದ ಇರಾನ್ ಪರಿಣಾಮಕಾರಿಯಾಗಿ ಮುಚ್ಚಿಟ್ಟಿರುವ ಪ್ರಮುಖ ಸಮುದ್ರ ಮಾರ್ಗದ ಸಂಕೀರ್ಣ ಬಿಂದುವನ್ನು ದಾಟಿ, 46,650 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಗ್ರೀನ್ ಸಾನ್ವಿ ಹಡಗು ತವರಿಗೆ ಮರಳುತ್ತಿದ್ದಂತೆ ಸಂಗವಿ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ಹೊರಬಂದಿದೆ. "ಇನ್ನೊಂದು ಹಡಗು. ಭಾರತೀಯ ರಾಜತಾಂತ್ರಿಕತೆಯ ಇನ್ನೊಂದು ಜಯ," ಎಂದು ಗುಜರಾತ್ ಉಪಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದರು.
ಇಲ್ಲಿಯವರೆಗೆ, ಹೋರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬಂದಿರುವ ಎಲ್‌ಪಿಜಿ ಸಾಗಣೆ ಹಡಗುಗಳ ಸಂಖ್ಯೆ 8ಕ್ಕೆ ತಲುಪಿದೆ. ಜಗತ್ತಿನ ಒಟ್ಟು ತೈಲ ಅವಶ್ಯಕತೆಯ ಐದನೇ ಭಾಗದ ಪೂರೈಕೆಗೆ ಈ ಹಾರ್ಮುಜ್ ಮಾರ್ಗವೇ ಪ್ರಮುಖವಾಗಿದ್ದು, ಪ್ರಸ್ತುತ ಸುಮಾರು 17 ಭಾರತೀಯ ಹಡಗುಗಳು ಜಲಸಂಧಿಯ ಪಶ್ಚಿಮ ಭಾಗದಲ್ಲಿ ಸಿಲುಕಿಕೊಂಡಿವೆ.
ಈ ಜೀವನಾಡಿ ಸಮುದ್ರ ಮಾರ್ಗದ ಪರಿಣಾಮಕಾರಿ ಬಂದ್, ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದ್ದು, ದರ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಸುತ್ತಮುತ್ತ ಏರಿಳಿತ ಕಾಣುತ್ತಿದೆ. ಇರಾನ್ ‘ಶತ್ರು ಹಡಗುಗಳ’ ಹಾದಿಯನ್ನು ಹೋರ್ಮುಜ್‌ನಲ್ಲಿ ತಡೆದಿದ್ದರೂ, ಭಾರತ, ರಷ್ಯಾ, ಚೀನಾ, ಇರಾಕ್ ಮತ್ತು ಪಾಕಿಸ್ತಾನ ಎಂಬ ಐದು ‘ಸ್ನೇಹಪರ ರಾಷ್ಟ್ರಗಳ’ ಹಡಗುಗಳಿಗೆ ಈ ಮಾರ್ಗವನ್ನು ತೆರೆಯಲಾಗಿದೆ.
ಇದಕ್ಕೆ ಜೊತೆಯಾಗಿ, ಈ ಪ್ರಮುಖ ಇಂಧನ ಮಾರ್ಗದ ಮೂಲಕ ಸಾಗುವ ಹಡಗುಗಳ ಮೇಲೆ ಟೋಲ್ ವಿಧಿಸುವ ಯೋಜನೆಗೂ ಇರಾನ್ ಅನುಮೋದನೆ ನೀಡಿದೆ. ಭಾರತಕ್ಕೆ ಮೀಸಲಾಗಿದ್ದ ಇರಾನಿಯನ್ ಕಚ್ಚಾ ತೈಲ ಹಡಗು ಚೀನಾಕ್ಕೆ ತಿರುಗಿಸಲಾಗಿದೆ ಎಂಬ ವರದಿಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು ಇಂಥಹ ಯಾವುದೇ ಘಟನೆ ನಡೆದಿರುವುದನ್ನು ತಳ್ಳಿ ಹಾಕಿದೆ. ಪಾವತಿ ಸಂಬಂಧಿತ ಸಮಸ್ಯೆಗಳ ಕಾರಣದಿಂದ ಭಾರತಕ್ಕೆ ಬರಬೇಕಿದ್ದ ಇರಾನಿಯನ್ ಕಚ್ಚಾ ತೈಲ ಹಡಗು ಚೀನಾಕ್ಕೆ ಮರುನಿರ್ದೇಶಿತವಾಗಿದೆ ಎಂಬ ವರದಿಗಳನ್ನು ಸರ್ಕಾರ ಖಂಡಿಸಿದೆ.
ಎಕ್ಸ್‌ನಲ್ಲಿ (ಹಳೆಯ ಟ್ವಿಟರ್) ಪ್ರಕಟಿಸಿದ ಸಂದೇಶದಲ್ಲಿ ಪೆಟ್ರೋಲಿಯಂ ಸಚಿವಾಲಯ, ಭಾರತೀಯ ರಿಫೈನರಿಗಳು ಈಗಾಗಲೇ ಇರಾನಿನಿಂದಲೂ ಸೇರಿದಂತೆ ಕಚ್ಚಾ ತೈಲ ಪೂರೈಕೆಯನ್ನು ಭದ್ರಪಡಿಸಿಕೊಂಡಿವೆ ಎಂದು ತಿಳಿಸಿದೆ.
“ಮಧ್ಯಪ್ರಾಚ್ಯದಲ್ಲಿ ಪೂರೈಕೆ ವ್ಯತ್ಯಯಗಳ ನಡುವೆಯೂ, ಭಾರತೀಯ ರಿಫೈನರಿಗಳು ತಮ್ಮ ಕಚ್ಚಾ ತೈಲ ಅವಶ್ಯಕತೆಗಳನ್ನು, ಇರಾನಿನಿಂದಲೂ ಸೇರಿ, ಭದ್ರಪಡಿಸಿಕೊಂಡಿದ್ದು, ಇರಾನಿಯನ್ ಕಚ್ಚಾ ತೈಲ ಆಮದುಗಳಿಗೆ ಪಾವತಿ ಸಂಬಂಧಿತ ಯಾವುದೇ ಅಡಚಣೆ ಇಲ್ಲ. ಈ ಬಗ್ಗೆ ಹರಡುತ್ತಿರುವ ವದಂತಿಗಳು ತಪ್ಪು” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕಳೆದ ತಿಂಗಳು ಅಮೆರಿಕ ನೀಡಿದ ವಿನಾಯಿತಿಯ ನಂತರ ಭಾರತ ಇರಾನಿಯನ್ ತೈಲವನ್ನು ಖರೀದಿಸುತ್ತಿದೆ ಎಂಬುದನ್ನು ನರೇಂದ್ರ ಮೋದಿ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




