ದೇಶ

Operation Sindoor ಆರಂಭಿಸಿದ ಅರ್ಧಗಂಟೆ ನಂತರ ಪಾಕಿಸ್ತಾನಕ್ಕೆ ಮಾಹಿತಿ: ವಿದೇಶಾಂಗ ಸಚಿವ ಜೈಶಂಕರ್

ಆಪರೇಷನ್ ಸಿಂಧೂರ್ ಆರಂಭವಾದ ಅರ್ಧಗಂಟೆ ನಂತರವೇ ಉಗ್ರರ ಅಡಗುತಾಣಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನಕ್ಕೆ ತಿಳಿಸಲಾಗಿದೆ.

Operation Sindoor ಆರಂಭಿಸಿದ ಅರ್ಧಗಂಟೆ ನಂತರ ಪಾಕಿಸ್ತಾನಕ್ಕೆ ಮಾಹಿತಿ: ವಿದೇಶಾಂಗ ಸಚಿವ ಜೈಶಂಕರ್
ವಿದೇಶಾಂಗ ಸಚಿವ ಜೈಶಂಕರ್
Published On :

ನವದೆಹಲಿ: ಭಾರತ ಆಪರೇಷನ್ ಸಿಂಧೂರ್ ಬಗ್ಗೆ ಪಾಕಿಸ್ತಾನದ ಸೇನೆಗೆ ಮೊದಲೇ ಮಾಹಿತಿ ನೀಡಿದೆ ಎಂಬ ಕಾಂಗ್ರೆಸ್ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಇಸ್ಲಾಮಾಬಾದ್‌ನ ಭೂಪ್ರದೇಶದಲ್ಲಿರುವ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಭಾರತ ದಾಳಿ ನಡೆಸಿದ ನಂತರವೇ ಮಾಹಿತಿ ನೀಡಲಾಯಿತು ಎಂದು ಸೋಮವಾರ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಜೈಶಂಕರ್ ಮಾಧ್ಯಮಗಳಿಗೆ "ಕಾರ್ಯಾಚರಣೆಯ ಆರಂಭದಲ್ಲಿ ಭಾರತವು, "ನಾವು ಭಯೋತ್ಪಾದಕ ನೆಲೆಗಳ ಮೇಲೆ ಮಾತ್ರ ದಾಳಿ ಮಾಡುತ್ತಿದ್ದೇವೆ ಮತ್ತು ಮಿಲಿಟರಿಯ ಮೇಲೆ ಅಲ್ಲ. ಆದ್ದರಿಂದ ನೀವು ಈ ದಾಳಿಯಿಂದ ದೂರವಿರಬೇಕು ಮತ್ತು ಮಧ್ಯಪ್ರವೇಶಿಸಬಾರದು ಎಂಬ ಸಂದೇಶವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು" ಎಂದು ಹೇಳಿದ್ದರು.

ಜೈಶಂಕರ್ ಅವರ ಈ ಹೇಳಿಕೆ ಕಾಂಗ್ರೆಸ್‌ನಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಈ ಕ್ರಮವನ್ನು "ಅಪರಾಧ" ಎಂದು ಟೀಕಿಸಿದ್ದರು ಮತ್ತು ಸಚಿವರಿಗೆ "ಇದಕ್ಕೆ ಅಧಿಕಾರ ನೀಡಿದರು ಯಾರು"? ಎಂದು ಪ್ರಶ್ನಿಸಿದ್ದರು. ಅಲ್ಲದೆ ಇದರ "ಪರಿಣಾಮವಾಗಿ ಭಾರತ ಎಷ್ಟು ವಿಮಾನಗಳನ್ನು ಕಳೆದುಕೊಂಡಿತು" ಎಂದು ಪದೇ ಪದೇ ಕೇಳಿದ್ದರು.

ಇಂದು ವಿದೇಶಾಂಗ ವ್ಯವಹಾರಗಳ ಕುರಿತ ಸಂಸದೀಯ ಸಮಾಲೋಚನಾ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವರು, ಪಾಕಿಸ್ತಾನದೊಂದಿಗೆ ತಾವು ಎಂದಿಗೂ ಮಾತನಾಡಿಲ್ಲ. ಪಾಕಿಸ್ತಾನದ ಕೋರಿಕೆಯ ಮೇರೆಗೆ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ನಿರ್ಧಾರವನ್ನು ದ್ವಿಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳುವ ಮೂಲಕ ಅಮೆರಿಕದ "ಹಸ್ತಕ್ಷೇಪ"ದ ಬಗ್ಗೆ ಸ್ಪಷ್ಟನೆ ನೀಡಿದರು.

ಆಪರೇಷನ್ ಸಿಂಧೂರ್ ಆರಂಭವಾದ ಅರ್ಧಗಂಟೆ ನಂತರವೇ ಉಗ್ರರ ಅಡಗುತಾಣಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನಕ್ಕೆ ತಿಳಿಸಲಾಗಿದೆ. ಪಾಕಿಸ್ತಾನದ ಡಿಜಿಎಂಒ ಯುದ್ಧವನ್ನು ನಿಲ್ಲಿಸುವಂತೆ ಕೇಳಿದ ನಂತರವೇ ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಲಾಯಿತು. ಇದರಲ್ಲಿ ಅಮೆರಿಕದ ಮಧ್ಯಸ್ಥಿಕೆಯ ಪ್ರಶ್ನೆಯೇ ಇಲ್ಲ ಎಂದು ಅವರು ಪುನರುಚ್ಚರಿಸಿದರು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಸಿಂಧೂ ಜಲ ಒಪ್ಪಂದವನ್ನು ಪುನರಾರಂಭಿಸಲು ಅಥವಾ ಮಾರ್ಪಡಿಸಲು ಸರ್ಕಾರ ಉದ್ದೇಶಿಸಿದೆಯೇ ಎಂದು ಸಂಸದರು ಪ್ರಶ್ನಿಸಿದರು. ಈ ಒಪ್ಪಂದವು ಪ್ರಸ್ತುತ ಸ್ಥಗಿತಗೊಂಡಿದೆ. ಅದರ ನಿಯಮಗಳನ್ನು ಮರುಪರಿಶೀಲಿಸಲು ಅಥವಾ ಬದಲಾಯಿಸಲು ಯಾವುದೇ ತಕ್ಷಣದ ಯೋಜನೆಗಳಿಲ್ಲ ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.