ದೇಶ

4th Largest Economy: ದಶಕಗಳ ಕನಸು ಕೊನೆಗೂ ನನಸು; Japan ಹಿಂದಿಕ್ಕಿ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ!

ಭಾರತವು ಅಧಿಕೃತವಾಗಿ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಇದು ಆರ್ಥಿಕ ಹಾದಿಯಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ....

4th Largest Economy: ದಶಕಗಳ ಕನಸು ಕೊನೆಗೂ ನನಸು; Japan ಹಿಂದಿಕ್ಕಿ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ!
ಜಗತ್ತಿನ 4ನೇ ಅತೀ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ
Published On :

ನವದೆಹಲಿ: ಮಹತ್ವದ ಬೆಳವಣಿಗೆ ಭಾರತ ದೇಶದ ದಶಕಗಳ ಕನಸು ಕೊನೆಗೂ ನನಸಾಗಿದ್ದು ಜಪಾನ್ ದೇಶವನ್ನು ಹಿಂದಿಕ್ಕಿದ ಭಾರತ ಜಗತ್ತಿನ 4ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಈ ಬಗ್ಗೆ ನೀತಿ ಆಯೋಗ ಮಾಹಿತಿ ನೀಡಿದ್ದು, 'ಭಾರತವು ಅಧಿಕೃತವಾಗಿ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಇದು ಆರ್ಥಿಕ ಹಾದಿಯಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ' ಎಂದು ಹೇಳಿದರು.

ಈ ಬಗ್ಗೆ ಮಾಹಿತಿ ನೀಡಿದ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ನೀತಿ ಆಯೋಗದ 10 ನೇ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದರು. 'ಭಾರತ ಈಗ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿ ಎಂದು ತಿಳಿಸಲು ನಮಗೆ ಹೆಮ್ಮೆಯಾಗುತ್ತಿದೆ.

ಜಪಾನ್‌ ದೇಶವನ್ನು ಹಿಂದಿಕ್ಕಿ ಭಾರತವು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಇತ್ತೀಚಿನ ದತ್ತಾಂಶವನ್ನು ಉಲ್ಲೇಖಿಸಿದ ಅವರು, ಭಾರತವು $4 ಟ್ರಿಲಿಯನ್ ಒಟ್ಟು ದೇಶೀಯ ಉತ್ಪನ್ನವನ್ನು (GDP) ಹೊಂದಿದೆ' ಎಂದು ಹೇಳಿದರು.

'ನಾವು ಈಗ 4 ಟ್ರಿಲಿಯನ್ ಅಮೆರಿಕನ್‌ ಡಾಲರ್‌ ಆರ್ಥಿಕತೆಯನ್ನು ಹೊಂದಿದ್ದೇವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ದತ್ತಾಂಶದ ಪ್ರಕಾರ, "ಜಪಾನ್‌ ದೇಶದ ಆರ್ಥಿಕತೆಗಿಂತ ಭಾರತದ ಆರ್ಥಿಕತೆ ದೊಡ್ಡದಾಗಿದೆ. ಐಎಂಎಫ್‌ ಅಂಕಿ ಅಂಶಗಳನ್ನು ಗಮನಿಸಿದರೆ, ಸದ್ಯ ಅಮೆರಿಕ, ಚೀನಾ ಮತ್ತು ಜರ್ಮನಿ ದೇಶಗಳು ಮಾತ್ರ ಭಾರತಕ್ಕಿಂತ ದೊಡ್ಡ ಆರ್ಥಿಕತೆಯೆನ್ನು ಹೊಂದಿವೆ. ನಮ್ಮ ಯೋಜನೆಗಳೆಲ್ಲವೂ ಕೈಗೂಡಿದರೆ, ಮುಂದಿನ 2.5-3 ವರ್ಷಗಳಲ್ಲಿ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ ಎಂದು ಬಿ.ವಿ.ಆರ್‌ ಸುಬ್ರಹ್ಮಣ್ಯಂ ಭರವಸೆ ವ್ಯಕ್ತಪಡಿಸಿದರು.

ಇದೇ ವೇಳೆ ಐಎಂಎಫ್ ದತ್ತಾಂಶವನ್ನು ಉಲ್ಲೇಖಿಸಿದ ಅವರು, ಇದೀಗ ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಜರ್ಮನಿ ದೇಶಗಳು ಮಾತ್ರ ಭಾರತಕ್ಕಿಂತ ಮುಂದಿವೆ. ಮುಂದಿನ ಮೂರು ವರ್ಷಗಳಲ್ಲಿ ನಾವು ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತೇವೆ ಎಂಬ ಭರವಸೆ ನೀಡಿದರು.

ಕಳೆದ ಹತ್ತು ವರ್ಷಗಳಲ್ಲಿ, ರಾಜ್ಯಗಳು ಕೇವಲ ಅನುಷ್ಠಾನಗೊಳಿಸಲಷ್ಟೇ ಸೀಮಿತವಾಗದೇ ಕಾರ್ಯತಂತ್ರದ ಪಾಲುದಾರರಾಗುವ ವೇದಿಕೆಯನ್ನು ನಾವು ರಚಿಸಿದ್ದೇವೆ. ವಿಕಸಿತ್ ಭಾರತ್@2047 ಕೇವಲ ಮಹತ್ವಾಕಾಂಕ್ಷೆಯಲ್ಲ, ಸಾಧಿಸಬಹುದಾದದ್ದು ಎಂಬ ವಿಶ್ವಾಸವನ್ನು ನಮಗೆ ನೀಡುತ್ತದೆ.

"ವಿಕಸಿತ್ ಭಾರತ@2047" ಎಂಬ ಘೋಷಣೆ ಕೇವಲ ಒಂದು ಘೋಷಣೆಯಲ್ಲ. ಅದರ ಹಿಂದೆ ಒಂದು ಕ್ರಮಬದ್ಧ, ವಿಕೇಂದ್ರೀಕೃತ ಯೋಜನಾ ಕಸರತ್ತು ಇದೆ. 17 ರಾಜ್ಯಗಳು ಈಗಾಗಲೇ ತಮ್ಮ ವಿಷನ್ 2047 ದಾಖಲೆಗಳನ್ನು ಸಿದ್ಧಪಡಿಸಿವೆ. ಗುಜರಾತ್, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಮುಂಚೂಣಿಯಲ್ಲಿವೆ ಎಂದರು.

"ಭಾರತವು ಈಗ ವೇಗವಾಗಿ ಬೆಳೆಯುವ ಹಂತದಲ್ಲಿದೆ. ಮುಂದಿನ 20 ರಿಂದ 25 ವರ್ಷಗಳ ಕಾಲ ಭಾರತವು ವಾಸ್ತವವಾಗಿ ಹೊಂದಿರುವ ಜನಸಂಖ್ಯಾ ಲಾಭಾಂಶವನ್ನು ಗಮನದಲ್ಲಿಟ್ಟುಕೊಂಡು ಮತ್ತಷ್ಟು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆರ್ಥಿಕ ಗುರಿಯನ್ನು ನಿಗದಿಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ" ಎಂದು ನೀತಿ ಆಯೋಗದ ಸಿಇಒ ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.