ದೇಶ

Pahalgam terror attack: ಎರಡು ತಿಂಗಳ ಹಿಂದಷ್ಟೇ ವಿವಾಹ; ಪತ್ನಿಯ ಎದುರೇ ಉಗ್ರರ ಗುಂಡೇಟಿಗೆ ಉದ್ಯಮಿ ಬಲಿ!

ದ್ವಿವೇದಿ ಅವರು ತಮ್ಮ ಪತ್ನಿ ಮತ್ತು ಅವರ ಕುಟುಂಬದ 11 ಸದಸ್ಯರೊಂದಿಗೆ ಕಾಶ್ಮೀರಕ್ಕೆ ತೆರಳಿದ್ದರು.

Pahalgam terror attack: ಎರಡು ತಿಂಗಳ ಹಿಂದಷ್ಟೇ ವಿವಾಹ; ಪತ್ನಿಯ ಎದುರೇ ಉಗ್ರರ ಗುಂಡೇಟಿಗೆ ಉದ್ಯಮಿ ಬಲಿ!
ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಶುಭಂ ದ್ವಿವೇದಿ
Published On :

ಲಖನೌ: ಕಾನ್ಪುರದ ಉದ್ಯಮಿ ಶುಭಂ ದ್ವಿವೇದಿ (31) ಅವರಿಗೆ ಕಾಶ್ಮೀರವೇ ತಮ್ಮ ಕೊನೆಯ ಪ್ರವಾಸವಾಗಿರುತ್ತದೆ ಎಂದು ತಿಳಿದಿರಲಿಲ್ಲ. ಕೇವಲ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಅವರು, ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಉಗ್ರರ ಗುಂಡೇಟಿಗೆ ಸಾವಿಗೀಡಾದ 26 ಪ್ರವಾಸಿಗರಲ್ಲಿ ಒಬ್ಬರಾಗಿದ್ದಾರೆ.

ಪತ್ನಿಯ ಮುಂದೆಯೇ ದ್ವಿವೇದಿ ಅವರಿಗೆ ಗುಂಡು ಹಾರಿಸಲಾಗಿದ್ದು, ಆಕೆ ಆಘಾತಕ್ಕೊಳಗಾಗಿದ್ದಾರೆ. ಈ ಮನಕಲಕುವ ದೃಶ್ಯದಿಂದಾಗಿ ದ್ವಿವೇದಿ ಅವರ ಕುಟುಂಬ ಮತ್ತು ಸ್ನೇಹಿತರು ದಿಗ್ಭ್ರಮೆಗೊಂಡಿದ್ದಾರೆ. ದ್ವಿವೇದಿ ಅವರು ತಮ್ಮ ಪತ್ನಿ ಮತ್ತು ಅವರ ಕುಟುಂಬದ 11 ಸದಸ್ಯರೊಂದಿಗೆ ಕಾಶ್ಮೀರಕ್ಕೆ ತೆರಳಿದ್ದರು.

'ಮಿನಿ ಸ್ವಿಟ್ಜರ್ಲೆಂಡ್' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದಾಗ ಪ್ರವಾಸಿಗರು ತಿಂಡಿ ತಿನಿಸುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದರು ಎಂದು ದ್ವಿವೇದಿ ಅವರ ಕುಟುಂಬದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಲ್ಲಿದ್ದವರ ಧರ್ಮ ಯಾವುದೆಂದು ತಿಳಿದ ಬಳಿಕವೇ ಭಯೋತ್ಪಾದಕರು ಪುರುಷ ಪ್ರವಾಸಿಗರನ್ನು ಗುರಿಯಾಗಿಸಿಕೊಂಡರು ಎಂದು ದ್ವಿವೇದಿ ಅವರ ಪತ್ನಿ ಹೇಳಿದ್ದಾರೆ.

ಮೃತ ಶುಭಂ ದ್ವಿವೇದಿಯವರ ಪತ್ನಿ ಐಶಾನ್ಯಾ ಲಕ್ನೋ ಮೂಲದವರು. ಈ ವರ್ಷ ಫೆಬ್ರುವರಿ 12ರಂದು ಝಾನ್ಸಿಯಲ್ಲಿ ಶುಭಂ ಮತ್ತು ಐಶಾನ್ಯಾ ಅವರ ವಿವಾಹ ನಡೆದಿತ್ತು.

ಶುಭಂ ಅವರ ತಂದೆ ಸಂಜಯ್ ದ್ವಿವೇದಿ ಅವರ ಪ್ರಕಾರ, ಕುಟುಂಬವು ಮಂಗಳವಾರ ಪಹಲ್ಗಾಮ್‌ಗೆ ಭೇಟಿ ನೀಡಿ ನಂತರ ಬೈಸರನ್ ಕಣಿವೆಗೆ ತೆರಳಿತ್ತು. ಶುಭಂ, ಅವರ ಪತ್ನಿ ಐಶಾನ್ಯಾ ಮತ್ತು ಅವರ ಅತ್ತಿಗೆ ಕುದುರೆ ಮೇಲೆ ಬೆಟ್ಟವನ್ನು ಹತ್ತುತ್ತಿದ್ದಾಗ, ಭಯೋತ್ಪಾದಕರು ಶುಭಂ ಅವರ ಹೆಸರು ಕೇಳಿದ ನಂತರ ಅವರಿಗೆ ಗುಂಡು ಹಾರಿಸಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಕಾನ್ಪುರದ ಮಹಾರಾಜಪುರ ಪಟ್ಟಣದ ಸಿಮೆಂಟ್ ವ್ಯಾಪಾರಿ ಸಂಜಯ್ ದ್ವಿವೇದಿ (52) ಏಪ್ರಿಲ್ 17 ರಂದು ತಮ್ಮ ಪತ್ನಿ ಸೀಮಾ (50), ಮಗ ಶುಭಂ (31), ಸೊಸೆ ಐಶಾನ್ಯಾ (27), ಮಗಳು ಆರತಿ (27) ಮತ್ತು ಇತರ ಆರು ಜನರೊಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಕುಟುಂಬವು ದೆಹಲಿಗೆ ರೈಲಿನಲ್ಲಿ ಪ್ರಯಾಣಿಸಿತ್ತು. ನಂತರ ಶ್ರೀನಗರಕ್ಕೆ ವಿಮಾನದಲ್ಲಿ ತೆರಳಿದ್ದರು. ಏಪ್ರಿಲ್ 23ರ ಬುಧವಾರ ಅವರು ವಾಪಸ್ಸಾಗಬೇಕಿತ್ತು.

'ಮಂಗಳವಾರ ಮಧ್ಯಾಹ್ನ 1 ಗಂಟೆಗೆ ದಂಪತಿ ಕುದುರೆ ಸವಾರಿಗಾಗಿ ಹೋಟೆಲ್‌ನಿಂದ ಹೊರಟಿದ್ದರು. ಕುಟುಂಬದ ಇತರ ಸದಸ್ಯರು ಅಲ್ಲೇ ಇದ್ದರು. ಕುದುರೆಯನ್ನೇರಿ ಬೆಟ್ಟದ ತುದಿಗೆ ಹೋಗುತ್ತಿದ್ದಾಗ, ಭಯೋತ್ಪಾದಕರು ಎದುರಾಗಿದ್ದಾರೆ ಮತ್ತು ಐಶಾನ್ಯಾ ಅವರನ್ನು ತಾವು ಯಾವ ಧರ್ಮಕ್ಕೆ ಸೇರಿದವರು ಮತ್ತು ಅವರು ಯಾರೆಂದು ಕೇಳಿದ್ದಾರೆ. ಶುಭಂ ತನ್ನ ಪತಿ ಎಂದು ಆಕೆ ಹೇಳುತ್ತಿದ್ದಂತೆ, ಉಗ್ರರು ಆಕೆಯ ಮುಂದೆಯೇ ಶುಭಂ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ' ಎಂದು ಶುಭಂ ಅವರ ಚಿಕ್ಕಪ್ಪ ಜ್ಯೋತಿಷಾಚಾರ್ಯ ಮನೋಜ್ ದ್ವಿವೇದಿ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.